ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ಅಗತ್ಯ

ಆನೆ ಕಾರಿಡಾರ್‌ ನಿರ್ಮಾಣ ಅಗತ್ಯ; ಸ್ಥಳೀಯರ ಒತ್ತಾಯ
Last Updated 19 ಸೆಪ್ಟೆಂಬರ್ 2022, 5:29 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿರುವ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರ ಸಿಗಬೇಕು ಎನ್ನುವುದು ಮಲೆನಾಡಿನ ಜನರ ಆಗ್ರಹವಾಗಿದೆ. ಆದರೆ, ಚುನಾವಣೆಯ ಸಮಯದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು, ಆಯ್ಕೆಯಾದ ನಂತರ ಮರೆಯುತ್ತಿದ್ದು, ಸಮಸ್ಯೆ ಹಾಗೆಯೇ ಉಳಿಯುತ್ತಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ತಲೆನೋವಾಗಿ ಪರಿಣಮಿಸಿರುವ ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ಜಾರಿಯಾಗಬೇಕಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಮೊದಲ ಬಜೆಟ್‌ನಲ್ಲಿ ರೈತರ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯೂ ಹುಸಿಯಾಗಿದೆ.

ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಭಾಗದಲ್ಲಿ ಆನೆಗಳ ಹಾವಳಿಗೆ ರೈತರು ತತ್ತರಿಸಿ ಹೋಗಿದ್ದಾರೆ. ಕಾಡಿನಿಂದ ನಾಡಿಗೆ ಲಗ್ಗೆಯಿಟ್ಟ ಆನೆಗಳು, ತೋಟಗಳಿಗೆ ನುಗ್ಗುವುದಲ್ಲದೇ ಮನೆಗಳಿಗೆ ನುಗ್ಗಿ ಆಹಾರ ಪದಾರ್ಥಗಳ ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಸುಮಾರು 70 ಹಳ್ಳಿಗಳು ನಿರಂತರವಾಗಿ ಕಾಡಾನೆಗಳ ಹಾವಳಿಯಿಂದ ನಲಗುತ್ತಿವೆ.

ಮಾನವ–ಕಾಡಾನೆ ಸಂಘರ್ಷದಿಂದ 1991ರಿಂದ ಈವರೆಗೆ ಜಿಲ್ಲೆಯಲ್ಲಿ 74ಕ್ಕೂ ಅಧಿಕ ಜನರು ಜೀವ ಕಳೆದುಕೊಂಡಿದ್ದಾರೆ. 53 ಆನೆಗಳು ಮೃತಪಟ್ಟಿವೆ. ಸುಮಾರು 74 ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಅರಣ್ಯ ಇಲಾಖೆ ಅರೆಕಾಸಿನ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ ಎನ್ನುವುದು ರೈತರ ಆಕ್ರೋಶ.

ಕಾಡಾನೆಗಳ ಸ್ಥಳಾಂತರ, ಇಲ್ಲವೇ, ಆನೆಧಾಮದಲ್ಲಿ ಅವುಗಳನ್ನು ಕೂಡಿ ಹಾಕಿ ಆಹಾರ ಒದಗಿಸುವ ಮೂಲಕ ಮಾತ್ರವೇ ಉಪಟಳ ತಪ್ಪಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ. ಆದರೆ, ಇದಕ್ಕೆ ಮನ್ನಣೆ ಮಾತ್ರ ಸಿಗುತ್ತಿಲ್ಲ.

ಸ್ಥಳಾಂತರಕ್ಕೆ ಸಮಸ್ಯೆ: ಕಾಡಾನೆಗಳನ್ನು ಸೆರೆ ಹಿಡಿಯುವುದಕ್ಕೆ ಇತ್ತೀಚೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಲಾಗಿದೆ. ಎರಡು ಆನೆಗಳು ಸೆರೆ ಸಿಕ್ಕಿದ್ದು, ಅವುಗಳಿಗೆ ರೆಡಿಯೊ ಕಾಲರ್ ಅಳವಡಿಸಿ, ನಾಗರ ಹೊಳೆ ಅಭಯಾರಣ್ಯಕ್ಕೆ ಬಿಡಲಾಗಿದೆ.

ಒಂದೊಂದೇ ಆನೆಯನ್ನು ಹಿಡಿಯುವುದು ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಆದರೆ, ಎರಡಕ್ಕಿಂತ ಹೆಚ್ಚಿನ ಆನೆಗಳನ್ನು ಹಿಡಿಯಲು ಸರ್ಕಾರದಿಂದ ಅನುಮತಿ ಬೇಕಾಗುತ್ತದೆ. ಹೀಗಾಗಿ ಆನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡು ವುದು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಿದರೂ, ಬೇರೆ ಜಿಲ್ಲೆಗಳಿಂದ ಮತ್ತೆ ಆನೆಗಳು ಬರುತ್ತವೆ. ಹೀಗಾಗಿ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಿಂಡು ಹಿಂಡಾಗಿ ಓಡಾಡುವ ಆನೆಗಳನ್ನು ಹಿಡಿಯುವುದು ಸುಲಭದ ಕೆಲಸವಲ್ಲ ಎನ್ನುವುದು ಅವರ ಮಾತು.

ಕಾಡಾನೆ ಉಪಟಳ ನಿಯಂತ್ರಣಕ್ಕೆ ಕಂದಕ ನಿರ್ಮಾಣ, ಜೇನುಗೂಡು ಬೇಲಿ, ವಾಚ್‌ಟವರ್‌ ಹೀಗೆ ಹಲವು ಕ್ರಮ ಕೈಗೊಂಡರೂ ಬೆಳೆ ಉಳಿಸಲು ಆಗಿಲ್ಲ. ರೈತರು ಒಟ್ಟುಗೂಡಿ ಗದ್ದೆಗಳ ಬಳಿ ರಾತ್ರಿ ಕಾವಲು ಕಾಯುತ್ತಾರೆ. ರಸ್ತೆಗೆ ಹಲಸಿನ ಹಣ್ಣು ಸುರಿಯುತ್ತಾರೆ. ಪಟಾಕಿ ಸಿಡಿಸಿ, ಜೋರಾಗಿ ಕೂಗುತ್ತಾ, ಡೋಲು ಬಾರಿಸಿದರೂ ಬೆಳೆ ಹಾಳು ಮಾಡುವುದು ಮಾತ್ರ ನಿಂತಿಲ್ಲ.

ಅರಣ್ಯ ಇಲಾಖೆ ಪ್ರಕಾರ 80ಕ್ಕೂ ಹೆಚ್ಚು ಆನೆಗಳು ಜಿಲ್ಲೆಯಲ್ಲಿವೆ. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಬಂದು ಹೋಗುವ ಆನೆಗಳನ್ನೂ ಸೇರಿಸಿದರೆ ಕಾಡಾನೆಗಳ ಸಂಖ್ಯೆ ನೂರರ ಗಡಿ ದಾಟುತ್ತದೆ.

‘ಸಂತ್ರಸ್ತರಿಗೆ ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆನೆ ಕಾರಿಡಾರ್‌ ನಿರ್ಮಿಸಿ ಎಲ್ಲ ಆನೆಗಳನ್ನು ಸ್ಥಳಾಂತರ ಮಾಡಬೇಕು. ಮಾನವ– ಆನೆ ಸಂಘರ್ಷಕ್ಕೆ ಶಾಶ್ವತ ಮುಕ್ತಿ ನೀಡಬೇಕು’ ಎಂಬುದು ಮಲೆನಾಡಿನ ಜನರ ಒತ್ತಾಯ.

ಈವರೆಗೆ 74 ಕಾಡಾನೆ ಸೆರೆ

2000ದಿಂದ ಇಲ್ಲಿಯವರೆಗೆ ಒಟ್ಟು 74 ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲಾಗಿದೆ. ರೈಲ್ವೆ ಕಂಬಿಯ ಬ್ಯಾರಿಕೇಡ್‌ ಅಳವಡಿಕೆ ಹಾಗೂ ಸೌರ ಬೇಲಿ ಅಳವಡಿಕೆ ಮಾಡಲಾಗುತ್ತಿದೆ. ಇದುವರೆಗೆ 9.50 ಕಿ.ಮೀ ರೈಲ್ವೆ ಕಂಬಿಯ ಬ್ಯಾರಿಕೇಡ್‌ ಹಾಗೂ 14 ಕಿ.ಮೀ ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿದೆ.

ಏಕ ಕಾಲದಲ್ಲಿ ಎಲ್ಲೆಡೆ ತಡೆಗೋಡೆ ನಿರ್ಮಿಸಿ, ನಾಡಿನಲ್ಲಿರುವ ಆನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಸಮಸ್ಯೆ ಉಲ್ಬಣಿಸುತ್ತಲೇ ಹೋಗುತ್ತದೆ.

–ಜಗದೀಶ್‌, ಆಲೂರು ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT