ಭಾನುವಾರ, ಸೆಪ್ಟೆಂಬರ್ 25, 2022
21 °C
ಊರಾಚೆ ಹೋಗದ ಕೊಚ್ಚೆ: ಕೆಸರು ಗದ್ದೆಯಾದ ರಸ್ತೆ: ಮಳೆ ಹೆಚ್ಚಾದರೆ ದೇವರೇ ಗತಿ

ಕೋವಿಡ್‌ ಮುಕ್ತ ಗ್ರಾಮದಲ್ಲಿ ಡೆಂಗಿ ಭೀತಿ

ಎಚ್.ಎಸ್.ಅನಿಲ್ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಕೋವಿಡ್‌–19 ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಡಗೂರು ಗ್ರಾಮ ಪಂಚಾಯಿತಿಗೆ ಸೇರಿದ ದೇವರಹಳ್ಳಿ ಗ್ರಾಮದಲ್ಲಿ ಡೆಂಗಿ, ಚಿಕೂನ್‌ ಗುನ್ಯ ಭೀತಿ ಎದುರಾಗಿದೆ. ಗ್ರಾಮದ ರಸ್ತೆ ಕಂಬಳದ ಗದ್ದೆಯಂತಾಗಿದೆ. ಕೊಚ್ಚೆ ಊರಾಚೆ ಹರಿಯದೆ ಸೊಳ್ಳೆಗಳ ತಾಣವಾಗಿದೆ.

14 ಮನೆಗಳಿರುವ ಪುಟ್ಟ ಗ್ರಾಮದ ಜನತೆ ಕೃಷಿ ಜೊತೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಶ್ರಮ ಜೀವಿಗಳಾಗಿರುವ ಗ್ರಾಮಸ್ಥರು ಕೋವಿಡ್‌–19 ಸಂದರ್ಭದಲ್ಲಿ ಅಡಗೂರು ಗ್ರಾಮ ಪಂಚಾಯಿತಿ ಟಾಸ್ಕ್‌ಫೋರ್ಸ್‌ನ ಮಾರ್ಗದರ್ಶನ ಪಾಲಿಸಿದ್ದರಿಂದ ಗ್ರಾಮದಲ್ಲಿ ಒಬ್ಬರಿಗೂ ಕೋವಿಡ್‌–19 ಬಾಧಿಸಲಿಲ್ಲ.

ಕೂಗಳತೆಯಲ್ಲಿರುವ ಆಲದಹಳ್ಳಿ ಗ್ರಾಮದಲ್ಲಿ ಕೋವಿಡ್–19 ನಿಂದ ಸಾವು ಸಂಭವಿಸಿದರೂ, ದೇವರಹಳ್ಳಿ ಕೋವಿಡ್‌–19ನಿಂದ ಮುಕ್ತವಾಗಿತ್ತು. ಈಗ ಊರಿನ ತುಂಬೆಲ್ಲ ಕೆಸರಿನ ರಾಡಿ ಹರಡಿದ್ದು, ಬಚ್ಚಲು ನೀರು ಊರಾಚೆ ಹೋಗುತ್ತಿಲ್ಲ. ಊರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಿಸ್ಟನ್ (ತೊಟ್ಟಿ) ಸುತ್ತ ಕೊಚ್ಚೆ ನಿಂತಿದೆ. ಗ್ರಾಮದಲ್ಲಿ ಸಾಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂಬುದು ಗ್ರಾಮಸ್ಥರ ಅಳಲು.

ಗ್ರಾಮದ ಜನರ ಓಡಾಟಕ್ಕೆ ಸುಗಮವಾದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಇಲ್ಲ. ಹೀಗಾಗಿ ಗ್ರಾಮದ ಜನತೆ ಕೆಸರಿನ ರಾಡಿಯಲ್ಲಿಯೇ ಓಡಾಡುವಂತಾಗಿದೆ. ಜಾನುವಾರುಗಳನ್ನು ಕೆಸರಿನಲ್ಲಿಯೇ ಕರೆದೊಯ್ಯುವಂತಾಗಿದೆ. ಇದರಿಂದ ದನಗಳ ಕಾಲಿನ ಗೊರಸಿಗೆ ಕಾಯಿಲೆ ಬರುವ ಸಾದ್ಯತೆ ಇದೆ. ಪುಟ್ಟ ಮಕ್ಕಳನ್ನು ಊರಿನಲ್ಲಿ ವಿಹಾರ ಮಾಡಿಸುವುದಕ್ಕೆ ಅವಕಾಶವೇ ಇಲ್ಲವಾಗಿದೆ ಎಂಬ ದೂರು ಗ್ರಾಮಸ್ಥರಿಂದ ಕೇಳಿ ಬಂತು.

‘ಮಳೆ ಹೆಚ್ಚಾದರೆ ಹಾಗೂ ಅಡಗೂರಿನ ದೊಡ್ಡ ಕೆರೆ ಭರ್ತಿಯಾದರೆ ಕೆಲವು ಮನೆಗಳಲ್ಲಿ ನೀರು ಜಿನುಗುತ್ತದೆ. ಮಳೆಗಾಲದಲ್ಲಿ ಗ್ರಾಮ ಶೀತ ಪೀಡಿತವಾಗಿರುತ್ತದೆ. ಮಳೆಗಾಲದಲ್ಲಿ ವಯೋವೃದ್ದರು ಹಾಗೂ ಮಕ್ಕಳ ಆರೋಗ್ಯ ಸುರಕ್ಷತೆ ಕಷ್ಟವಾಗಿದೆ’ ಎಂದು ಗ್ರಾಮಸ್ಥ ಠಾಕೂರ್ ಸಿಂಗ್ ಹೇಳಿದರು.

ದೇವಿಹಳ್ಳಿಯ ಜನತೆ ನಗರಗಳಿಗೆ ಹೋಗಲು 2 ಕಿ.ಮೀ ದೂರದ ಅಡಗೂರು ಗ್ರಾಮಕ್ಕೆ ನಡೆದು ಹೋಗಬೇಕು. ಮಾರ್ಗ ಮಧ್ಯದಲ್ಲಿಯೂ ಅಲ್ಲಲ್ಲಿ ಮಳೆ ನೀರು ನಿಂತು ಕೊಚ್ಚೆಯಾಗುತ್ತದೆ. ಹೀಗಾಗಿ ಆಸ್ಪತ್ರೆ ಮೊದಲಾದ ತುರ್ತು ಕೆಲಸಗಳಿಗೆ ನಗರಕ್ಕೆ ಹೋಗಿ ಬರುವುದು ಸುಲಭ ಸಾಧ್ಯವಾಗಿಲ್ಲ. ಪ್ರತಿದಿನ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳ ಸ್ಥಿತಿಯಂತೂ ಹೇಳಲು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ಬಿಚ್ಚಿಟ್ಟರು.

ಕೋವಿಡ್‌–19 ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದ ದೇವಿಹಳ್ಳಿ ಗ್ರಾಮಸ್ತರತ್ತ ಸರ್ಕಾರದ ಗಮನ ಹರಿಸಬೇಕು. ಗ್ರಾಮ ಪಂಚಾಯಿತಿ ಮಾತ್ರವಲ್ಲದೆ, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಕಾಡು ಪ್ರಾಣಿಗಳ ಉಪಟಳ ತಪ್ಪಿಲ್ಲ

ಗ್ರಾಮದಲ್ಲಿ 8 ಒಕ್ಕಲಿಗರ ಕುಟುಂಬ, 3 ಬಿಳಿಮೊಗ್ಗದ ಶೆಟ್ಟರ ಕುಟುಂಬ, 3 ರಜಪೂತ ಕುಟುಂಬಗಳು ನೆಲೆಸಿವೆ. ರಜಪೂತರು ರಾಜವಂಶದವರು ಎನ್ನುತ್ತಾರೆ. ಆದರೆ ಗ್ರಾಮದಲ್ಲಿ ರಾಜವೈಭವ ಕಾಣುವುದಿಲ್ಲ.

‘ಸಿಗೇಗುಡ್ಡ ಅರಣ್ಯದ ತಪ್ಪಲಿನಲ್ಲಿರುವ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳ ಉಪಟಳ ಕಾಡುತ್ತಿರುತ್ತಿದೆ. ಮೂರು ವರ್ಷದ ಹಿಂದೆ ಆನೆ ತುಳಿತಕ್ಕೆ ಒಬ್ಬರು ಮಹಿಳೆ ಬಲಿಯಾದರು. ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿರುತ್ತದೆ. ರಾತ್ರಿ ನಿದ್ದೆ ಇಲ್ಲದೆ ಬದುಕುವಂತಾಗಿದೆ’ ಎಂದು ಹೇಳುವಾಗ ಗ್ರಾಮಸ್ಥ ರಂಗಸ್ವಾಮಿ ಅವರ ಕಣ್ಣಲ್ಲಿ ನೀರು ಬಂತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು