ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು

ಯಶವಂತಪುರದಿಂದ ಬಿಹಾರ, ಜಾರ್ಖಂಡ್‌ಗೆ ರೈಲಿನಲ್ಲಿ ಹೋಗಲು ನಿರ್ಧಾರ
Last Updated 9 ಮೇ 2020, 16:05 IST
ಅಕ್ಷರ ಗಾತ್ರ

ಹಾಸನ: ಕೈಯಲ್ಲಿ ಕೆಲಸವಿಲ್ಲ, ಜೇಬಲ್ಲಿ ಇದ್ದ ಹಣವೂ ಖಾಲಿ. ಲಾಕ್‌ಡೌನ್‌ ನಿಂದಾಗಿ ಊರಿಗೆ ತೆರಳಲು ಬಸ್‌ ಹಾಗೂ ರೈಲಿನ ವ್ಯವಸ್ಥೆಯೂ ಇಲ್ಲ. ಸ್ವಗ್ರಾಮ ತಲುಪಲೇಬೇಕು ಎಂದು ನಿರ್ಧರಿಸಿದ ನಗರದ ನೂರಕ್ಕೂ ಹೆಚ್ಚು ಕಾರ್ಮಿಕರು ಶನಿವಾರ ಸುಡು ಬಿಸಿಲಿನಲ್ಲಿಯೇ ಬೆಂಗಳೂರಿಗೆ ಕಾಲ್ನಡಿಗೆ ಪ್ರಯಾಣ ಆರಂಭಿಸಿದರು.

ಬಿಹಾರ ಮತ್ತು ಜಾರ್ಖಂಡ್‌ನ ಈ ಕಾರ್ಮಿಕರು ಹಾಸನ ನಗರದ ರಾಜಘಟ್ಟ ಬಳಿ ಇರುವ ರೈಲ್ವೆ ಗೂಡ್ಸ್‌ ಶೆಡ್‌, ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಹಮಾಲಿಗಳಾಗಿ ಮತ್ತು ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಲಾಕ್‌ಡೌನ್ ಆರಂಭವಾದ ನಂತರ ಕೆಲಸ ಇಲ್ಲದಾಯಿತು. ಕೈಯಲ್ಲಿ ಇದ್ದ ಹಣವೂ ಖರ್ಚಾಗಿ ಅತಂತ್ರ ಸ್ಥಿತಿಯಲ್ಲಿ ಇದ್ದರು. ನಿತ್ಯದ ಖರ್ಚಿಗಾಗಿ ಊರಿನಿಂದ ಮನೆಯವರು, ಸ್ನೇಹಿತರು ಹಾಗೂ ಸಂಬಂಧಿಕರಿಂದ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಈಗ ಅವರು ಹಣ ಕಳುಹಿಸುವುದನ್ನು ನಿಲ್ಲಿಸಿದ್ದಾರೆ. ಸ್ವಂತ ಊರುಗಳಿಗೆ ತೆರಳುವುದು ಅನಿವಾರ್ಯವಾಗಿದೆ.

ಹಾಸನದಿಂದ ಹೊರ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬೆಂಗಳೂರಿಗೆ ನಡೆದುಕೊಂಡು ತಲುಪಿದರೆ, ಯಶವಂತಪುರದಿಂದ ತಮ್ಮ ರಾಜ್ಯಕ್ಕೆ ರೈಲು ಹೋಗಬಹುದು ಅಂದುಕೊಂಡು ತಮ್ಮ ಸಾಮಾನು ಸಂರಜಾಮುಗಳನ್ನು ಗಂಟುಮೂಟೆ ಕಟ್ಟಿಕೊಂಡು ಹೆಗಲು ಮತ್ತು ತಲೆ ಹೊತ್ತು ಹೊರಟರು. ಹಸಿವು ನೀಗಿಸಿಕೊಳ್ಳಲು ಬಾಳೆಹಣ್ಣು ಹಾಗೂ ಪುರಿ ತಿನ್ನುತ್ತಿದ್ದ ದೃಶ್ಯ ಕಂಡು ಬಂತು.

‘ಕೆಲಸ ಇಲ್ಲದೆ ನಲ್ವತ್ತು ದಿನಗಳು ಆಯಿತು. ಕೈಯಲ್ಲಿದ್ದ ಹಣದಲ್ಲಿ ಇಷ್ಟು ದಿನ ಜೀವನ ನಡೆಸಿದವು. ಕೆಲಸವೂ ಇಲ್ಲ. ಹಣವೂ ಇಲ್ಲ. ಹಾಗಾಗಿ ತವರಿಗೆ ಹೋಗಲು ನಿರ್ಧರಿಸಿದ್ಧೇವೆ. ಹೊಸ ಬಸ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಬಸ್‌ ಸಂಚಾರ ಇಲ್ಲವೆಂದರು. ಬಿಹಾರ್‌, ಜಾರ್ಖಂಡ್‌ಗೆ ಹೋಗಬೇಕು. ಯಶವಂತಪುರಕ್ಕೆ ತಲುಪಿದರೆ ಅಲ್ಲಿಂದ ಊರುಗಳಿಗೆ ರೈಲು ವ್ಯವಸ್ಥೆ ಮಾಡಲಾಗಿದೆ ಅಂದ್ರು. ಅದಕ್ಕಾಗಿ ಕಾಲ್ನಡಿಗೆಯಲ್ಲಿಯೇ ಹೊರಟಿದ್ದೇವೆ’ ಎಂದು ಕಾರ್ಮಿಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT