ಕೋವಿಡ್ ಕೌನ್ಸೆಲಿಂಗ್: ಹಿಮ್ಸ್ ಪ್ರಥಮ

ಹಾಸನ: ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಹಿಮ್ಸ್) ಹೋಂ ಕ್ವಾರಂಟೈನ್ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ.
ಹಿಮ್ಸ್ ಅಂತಿಮ ವರ್ಷದ ಎಲ್ಲಾ 70 ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋವಿಡ್ 19 ಸೇವೆ ಹಾಗೂ ಆನ್‌ಲೈನ್ ಮೂಲಕ ಹೋಂ ಕ್ವಾರಂಟೈನ್ ನಲ್ಲಿ ಇರುವವರ ಅರೋಗ್ಯ ವಿಚಾರಣೆ, ಕೌನ್ಸೆಲಿಂಗ್ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸಿದ್ದಾರೆ.
ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮೂಲಕ ಎಲ್ಲಾ 45 ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು, ಶೇಕಡಾ100 ರ ಸಾಧನೆಯೊಂದಿಗೆ ಹಿಮ್ಸ್ ಮೊದಲ ಸ್ಥಾನದಲ್ಲಿದೆ.
ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ದಿನಕ್ಕೆ ಇಂತಿಷ್ಟು ಮನೆ ಆರೈಕೆಯಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸುವುದು, ಕೌನ್ಸೆಲಿಂಗ್ ಹಾಗೂ ಮಾರ್ಗದರ್ಶನ ಮಾಡುವ ಕರ್ತವ್ಯ ನಿರ್ವಹಣೆಯ ಹೊಣೆ ನೀಡಲಾಗಿದೆ.
ಪ್ರತಿ ವಾರಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯ ಮೌಲ್ಯ ಮಾಪನ ಮಾಡಿ ಕಾಲೇಜುವಾರು ಮೌಲ್ಯಾಂಕ ಪ್ರಕಟಿಸಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ 45 ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ.
ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ.
‘ಸುಮಾರು ಎಂಟುನೂರು ಹಾಸಿಗೆಗಳ ಕೋವಿಡ್ ಆಸ್ಪತ್ರೆಯ ಯಶಸ್ವಿ ನಿರ್ವಹಣೆ, ಕೋವಿಡ್ ಪೂರ್ವದಲ್ಲಿಯೇ ಆಮ್ಲಜನಕ ಶೇಖರಣೆಗೆ ಪೂರ್ವ ಸಿದ್ಧತೆ ಹಾಗೂ ವೈರಾಣು ಪತ್ತೆ ಪ್ರಯೋಗಾಲಯದ ಸ್ಥಾಪನೆ, ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮಕ್ಕೆ ಸಂಸ್ಥೆಯ ಎಪ್ಪತ್ತೈದು ವೈದ್ಯರನ್ನು ನಿಯೋಜಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತದೊಂದಿಗೆ ಹೆಗಲು ಜೋಡಿಸಿ ಸಹಕರಿಸುತ್ತಿರುವ ಸಂಸ್ಥೆ ಸೇವೆಯಲ್ಲಿ ಸದಾ ಮುಂದಿದೆ. ಈಗ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಇನ್ನೊಂದು ಮನ್ನಣೆ ಸಿಕ್ಕಂತಾಗಿದೆ’ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.
ಹಿಮ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್ ಪ್ರಾಂಶುಪಾಲ ಡಾ.ನಾಗೇಶ್, ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.