ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ಬೆಂಬಲ ಬೆಲೆ | ಸೆ.26ರಿಂದ ಪಾದಯಾತ್ರೆ; ವಿಧಾನಸೌಧಕ್ಕೆ ಮುತ್ತಿಗೆ

Published 21 ಸೆಪ್ಟೆಂಬರ್ 2023, 16:36 IST
Last Updated 21 ಸೆಪ್ಟೆಂಬರ್ 2023, 16:36 IST
ಅಕ್ಷರ ಗಾತ್ರ

ಹಾಸನ: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಸೆ.26ರಿಂದ ಅ.4ರವರೆಗೆ ಪಾದಯಾತ್ರೆ ಮೂಲಕ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಆನೆಕೆರೆ ರವಿ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.26ರಂದು ಬೆಳಿಗ್ಗೆ 10 ಗಂಟೆಗೆ ಅರಸೀಕೆರೆಯ ಎಪಿಎಂಸಿ ಆವರಣದಿಂದ ಜಿಲ್ಲೆಯ 3ಸಾವಿರಕ್ಕೂ ಹೆಚ್ಚು ರೈತರು ಹಾಗೂ ತೆಂಗು ಬೆಳೆಗಾರರು ಪಾದಯಾತ್ರೆಗೆ ಆರಂಭಿಸಲಿದ್ದಾರೆ. ಸೆ.25ರಂದು ಮಧ್ಯಾಹ್ನ 2.30ಕ್ಕೆ ಹಾಸನದ ರೈಲು ನಿಲ್ದಾಣದಿಂದಲೂ ಸಹ ಈ ಭಾಗದ ರೈತರು ಪಾದಯಾತ್ರೆ ಆರಂಭಿಸಲಿದ್ದಾರೆ’ ಎಂದರು .

‘ಕೊಬ್ಬರಿಗೆ ಬೆಂಬಲ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ಅರಸೀಕೆರೆಯಲ್ಲಿ ಕೆಲ ತಿಂಗಳ ಹಿಂದೆ ₹18ಸಾವಿರಕ್ಕೆ ಮಾರಾಟವಾಗುತ್ತಿದ್ದ ಕ್ವಿಂಟಲ್ ಕೊಬ್ಬರಿ ಬೆಲೆ ಇದೀಗ ₹ 7,500ಕ್ಕೆ ಕುಸಿದಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ₹ 4ಸಾವಿರ ಕಡಿಮೆ ದರದಲ್ಲಿ ಕೊಬ್ಬರಿ ಖರೀದಿ ಆಗುತ್ತಿದೆ. ನಾಫೆಡ್‌ನಿಂದ ಕೊಬ್ಬರಿ ಖರೀದಿ ಪ್ರಕ್ರಿಯೆ 20 ದಿನಗಳಿಂದ ಸ್ಥಗಿತಗೊಂಡಿದ್ದು, ಖರೀದಿ ಕೇಂದ್ರವನ್ನು ಮತ್ತೆ ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಕೃಷಿ ಬೆಲೆ ಆಯೋಗ ಕ್ವಿಂಟಲ್‌ ಕೊಬ್ಬರಿಗೆ ₹ 17ಸಾವಿರ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನುಸಿಪೀಡೆ, ಅತಿವೃಷ್ಟಿ, ಅನಾವೃಷ್ಟಿ, ಇಳುವರಿ ಕೊರತೆಯಿಂದಾಗಿ ರೈತರು ಅಪಾರ ನಷ್ಟದಲ್ಲಿದ್ದು, ರಾಜ್ಯ ಸರ್ಕಾರ ಕೂಡಲೇ ಕೊಬ್ಬರಿಗೆ ₹ 25 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆ ವಾಪಸ್ ಪಡೆಯುವ ವಾಗ್ದಾನವನ್ನು ಮಾಡಿದ್ದರು. ಅದರಂತೆ ನಡೆದುಕೊಳ್ಳಲಿ’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ. ಮೂರು ಫೇಸ್ ವಿದ್ಯುತ್ ಕೊಡುವುದಾಗಿ ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದ ನಂತರ ಎರಡು ಗಂಟೆ ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬರಗಾಲ ಘೋಷಣೆಯಲ್ಲಿಯೂ ಅನ್ಯಾಯ ಎಸಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡದೇ ರೈತರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

ಸಾದಿಕ್, ತಿಮ್ಮೇಗೌಡ, ಬಾಬು, ಕಾಳಕ್ಕ, ಪವಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT