ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

6 ತಿಂಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಆಗ್ರಹ

ಹೇಮಾವತಿ ಸಕ್ಕರೆ ಕಾರ್ಖಾನೆಗೆ ಆಡಳಿತಾಧಿಕಾರಿ ನೇಮಕ: ಎಂ.ಎ. ಗೋಪಾಲಸ್ವಾಮಿ
Published 11 ಡಿಸೆಂಬರ್ 2023, 13:29 IST
Last Updated 11 ಡಿಸೆಂಬರ್ 2023, 13:29 IST
ಅಕ್ಷರ ಗಾತ್ರ

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರ ಹೇಮಾವತಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯನ್ನು ವಿಸರ್ಜಿಸಲಾಗಿದ್ದು, ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆಸಬೇಕಿದ್ದು, ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಬೇಕು. ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕಾರ್ಖಾನೆ ಆಡಳಿತ‌ ಮಂಡಳಿಯ ದುರಾಡಳಿತದ ವಿರುದ್ಧ ನಡೆಸಿದ ಹೋರಾಟದ ಫಲವಾಗಿ, ಆಡಳಿತ ಮಂಡಳಿಗೆ ಹೊಸದಾಗಿ ಚುನಾವಣೆ ನಡೆಸಲು ಹಾಗೂ ಆಡಳಿತಾಧಿಕಾರಿ ನೇಮಕ ಮಾಡಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದರು.

ಹೇಮಾವತಿ ಸರ್ಕಾರಿ ಕಾರ್ಖಾನೆ ಆಡಳಿತದಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಇವರಲ್ಲಿ ಇತ್ತೀಚಿಗೆ 4 ಸಾವಿರ ಸದಸ್ಯರು ಸೇರ್ಪಡೆಗೊಂಡಿದ್ದು, ಸೂಕ್ತ ದಾಖಲೆಯನ್ನು ಪಡೆಯದೇ ಸದಸ್ಯತ್ವ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದರು.

4 ಸಾವಿರ ಸದಸ್ಯರನ್ನು ಏಕಾಏಕಿ ಸೇರ್ಪಡೆ ಮಾಡಲಾಗಿದ್ದು, ಈ ಸದಸ್ಯರ ದಾಖಲೆಯನ್ನು ಪರಿಶೀಲಿಸಿ, ಅನರ್ಹರನ್ನು ವಜಾ ಮಾಡಬೇಕು. ಒಂದೇ ಮನೆಗೆ 3–4 ಷೇರ್‌ಗಳನ್ನು ನೀಡಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯನ್ನು ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್‌ಗೆ ಗುತ್ತಿಗೆಗೆ ವಹಿಸಿದ ನಂತರ, ಇದುವರೆಗೂ ಲೀಸ್ ಮೊತ್ತದ ಕೋಟ್ಯಂತರ ರೂಪಾಯಿಯನ್ನು ಕಾರ್ಖಾನೆಯ ಆಡಳಿತ ಮಂಡಳಿಗೆ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಆಡಳಿತ ಮಂಡಳಿಯ ನಿರ್ದೇಶಕರೇ ಹಣ ಪಡೆದು ಆಡಳಿತ ಮಂಡಳಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ವರ್ಷ ಚಾಮುಂಡೇಶ್ವರಿ ಶುಗರ್ಸ್‌ನಿಂದ ₹ 21 ಕೋಟಿಗೂ ಅಧಿಕ ಹಣವನ್ನು ಆಡಳಿತ ಮಂಡಳಿಗೆ ಪಾವತಿಸಬೇಕಾಗಿದೆ. ಈ ಹಣವನ್ನು ವಸೂಲಿ ಮಾಡುವಲ್ಲಿಯೂ ಈಗಿನ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ. ಇದರ ವಿರುದ್ಧ ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಚಾಮುಂಡೇಶ್ವರಿ ಶುಗರ್ಸ್‌ಗೆ ಕೋಟ್ಯಂತರ ರೂಪಾಯಿ ಸಾಲ ನೀಡಲಾಗಿದೆ. ಈ ಹಣದ ಬಡ್ಡಿ ಹಣವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಶಾಸಕ ಸಿ.ಎನ್. ಬಾಲಕೃಷ್ಣ ಕಾಲಕಾಲಕ್ಕೆ ವಸೂಲಿ ಮಾಡುತ್ತಿದ್ದಾರೆ. ಆದರೆ ಹೇಮಾವತಿ ಸಕ್ಕರೆ ಕಾರ್ಖಾನೆಗೆ ಬರಬೇಕಾದ ಹಣವನ್ನು ವಸೂಲಿ ಮಾಡದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿದರು.

2015ರಲ್ಲೇ ಹೇಮಾವತಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೂ ಚುನಾವಣೆ ನಡೆಸದೇ ನ್ಯಾಯಾಲಯದಲ್ಲಿ ದಾವೆ ಹಾಕುತ್ತ ಮುಂದೂಡುತ್ತಿದ್ದಾರೆ. ಈ ಬಾರಿಯಾದರೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪಾರದರ್ಶಕ ಚುನಾವಣೆ ನಡೆಸಿ, ಚನ್ನರಾಯಪಟ್ಟಣ ಹಾಗೂ ಸುತ್ತಲಿನ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು. ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT