ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಪರವಾಗಿ ಬಂಡೇಳುವ ಗುಣ ಬೆಳೆಸಿಕೊಳ್ಳಿ: ವಿಜಯಕುಮಾರ್‌

ತಿಂಗಳ ಮಾತುಕತೆ ಸಾಧಕರೊಂದಿಗೆ ಸಂವಾದದಲ್ಲಿ ವಿಜಯಕುಮಾರ್‌
Published 9 ಜುಲೈ 2024, 12:31 IST
Last Updated 9 ಜುಲೈ 2024, 12:31 IST
ಅಕ್ಷರ ಗಾತ್ರ

ಹಾಸನ: ಬಿ.ಆರ್.ರೋಹಿತ್‌ ಹೆಸರಲ್ಲಿ ಹಿರಿಯ ಪತ್ರಕರ್ತರು ಸ್ಥಾಪಿಸಿ ನೀಡಿದ ಈ ಪ್ರಶಸ್ತಿ, ವರದಿಗಾರನಾಗಿ ನನ್ನ ಜೀವಮಾನದಲ್ಲಿ ಅನುಭವಿಸಿದ ನೋವು, ಬೆದರಿಕೆ, ಚಿತ್ರಹಿಂಸೆ, ಬದುಕಿನ ಅಸ್ಥಿರತೆಗೆ ಸಮಾಧಾನ ನೀಡಿದೆ. ಸಾಮಾಜಿಕ ಹೊಣೆಗಾರಿಕೆಗೆ ಯಾವಾಗಲೂ ತೂಕವಿದೆ ಎಂದು ಸಾಬೀತು ಮಾಡಿದೆ ಎಂದು ‘ಪ್ರಜಾವಾಣಿ’ ಚಿಕ್ಕಮಗಳೂರು ಜಿಲ್ಲಾ ವರದಿಗಾರ ವಿಜಯಕುಮಾರ್ ಹೇಳಿದರು.

ಇತ್ತೀಚೆಗೆ ಹಾಸನದ ಶ್ರಮ ಸಮಾಜ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ಟ್ರಸ್ಟ್ ಮತ್ತು ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ತಿಂಗಳ ಮಾತುಕತೆ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಕಲೇಶಪುರ ತಾಲ್ಲೂಕಿನ ಕಾಗಿನಹರೆ ಮತ್ತು ಕುರುವಂಕ ಗ್ರಾಮದಲ್ಲಿ ದಲಿತರಿಗೆ ಕೆರೆ ನೀರು ಮುಟ್ಟಲು ಬಿಡುತ್ತಿರಲಿಲ್ಲ. ಊರಿಗೆ ಪ್ರವೇಶವಿಲ್ಲ, ದೇವಿ ಹೆಸರು ಹೇಳುವಂತಿಲ್ಲ. ಇದು ಪ್ರಜಾತಂತ್ರ ಕಾಲದ ಅತ್ಯಂತ ಘೋರ ಮಾನವ ಪಾಪದ ಸಂಸ್ಕೃತಿಯಾಗಿತ್ತು. ಇದು ಗಮನಕ್ಕೆ ಬಂದ ತಕ್ಷಣ ಸಹೋದ್ಯೋಗಿಗಳ ಜೊತೆ ಮಾತನಾಡಿದಾಗ ಸಹೋದ್ಯೋಗಿಗಳೇ ಸುದ್ದಿ ಮಾಡಲು ಸಹಕಾರ ನೀಡಲಿಲ್ಲ ಮತ್ತು ಒಪ್ಪಲು ತಯಾರಿರಲಿಲ್ಲ. ನಂತರ ಹಿರಿಯ ಪತ್ರಕರ್ತರ ಜೊತೆ ಚರ್ಚೆ ಮಾಡಿದ ನಂತರ ಇನ್ನೊಂದಿಷ್ಟು ಅಧ್ಯಯನ ಹಾಗೂ ಸಂತ್ರಸ್ತರ ಜೊತೆ ಸಂವಾದ ನಡೆಸಿ ಏನಾದರೂ ಅಗಲಿ ಸುದ್ದಿ ಮಾಡಲೇಬೇಕು ಎಂದು ಸುದ್ದಿ ಮಾಡಿದೆ. ಇದು ನನ್ನ ವೃತ್ತಿ ಜೀವನದ ಗಮನಾರ್ಹ ವರದಿ ಎಂದರು.

ಅದು ನಾಡಿನಾದ್ಯಂತ ಗುಡುಗಿತು. ಆಗಲೇ ನನಗೆ ಬೆದರಿಕೆಗಳು, ಕೆಲಸ ಕಳೆದುಕೊಳ್ಳುವ ಆತಂಕ ಎಲ್ಲವೂ ಎದುರಾದವು. ಆದರೂ ಆ ಸುದ್ದಿ ಅಲ್ಲೊಂದು ಸಮಾಧಾನಕರ ಪರಿಹಾರಕ್ಕೆ ಕಾರಣವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡ ಅವರು ವಿಜಯಕುಮಾರ್‌, ದಲಿತರ ಮೇಲೆ ಸಂಸ್ಕೃತಿಯ ಹೆಸರಿನಲ್ಲಿ ಮಾನವಹೀನ ಕೃತ್ಯವನ್ನು ತಲತಲಾಂತರದಿಂದ ಮೇಲ್ಜಾತಿಯ ಪ್ರಭಾವಶಾಲಿಗಳು ನಡೆಸುತ್ತ ಬರುತ್ತಿದ್ದನ್ನು ಬಯಲು ಮಾಡಿ ದಲಿತರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಸುದ್ದಿ ಒಂದೇ ಸಾಲದು. ಅದಕ್ಕಾಗಿ ನಿರಂತರ ಹೋರಾಟ ಮಾಡಲು ಸಿಪಿಎಂ ಮುಖಂಡ ಧರ್ಮೆಶ್ ಅವರ ನೇತೃತ್ವದಲ್ಲಿ ಜನಚಳವಳಿಗಳು ಪ್ರಮುಖ ಪಾತ್ರ ವಹಿಸಿದ್ದು ದೊಡ್ಡ ಕೊಡುಗೆ ಎಂದರು.

ಈ ಪತ್ರಿಕಾರಂಗದ ಕೆಲಸದ ನನ್ನ ಅನುಭವ ಕಥನವನ್ನು ಅಹರ್ನಿಶಿ ಪ್ರಕಾಶನ ಹಾಗೂ ಪತ್ರಿಕೋದ್ಯಮದ ಗೆಳೆಯರ ಸಹಕಾರದಿಂದ ‘ಬೂದಿಯಾಗದಕೆಂಡ’ ಪುಸ್ತಕ ರೂಪದಲ್ಲಿ ದಾಖಲೆಯಾಗಿದೆ. ಅದರ ‘ಅನ್ನಕಾಕ್ಕಾಗಿ ರಾತ್ರಿಯಿಡೀ ಕಾಯ್ದದ್ದು’ ಎನ್ನುವ ಒಂದು ಲೇಖನ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿಗೆ ಪಠ್ಯ ಆಗಿದೆ. ಇದು ಜನರ ಪತ್ರಿಕೋದ್ಯಮ ಸತ್ತಿಲ್ಲ ಎನ್ನುವುದಕ್ಕೆ ನಿದರ್ಶನ ಎಂದರು.

ಪತ್ರಕರ್ತ ಸತೀಶ್ ಶಿಲೆ ಮಾತನಾಡಿದರು. ಟ್ರಸ್ಟಿನ ಕಾರ್ಯದರ್ಶಿ ಎಚ್.ಆರ್.ನವೀನ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷ ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಸದಸ್ಯ ಎಂ.ಜಿ.ಪೃಥ್ವಿ ಸ್ವಾಗತಿಸಿ, ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT