ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಜಿಲ್ಲೆಯಲ್ಲಿ ಶುರುವಾಯ್ತು ಅಭಿವೃದ್ಧಿ ರಾಜಕೀಯ

ಚುನಾವಣೆಯ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಭರ್ಜರಿ ಕಾರ್ಯಕ್ರಮ
Published 26 ಫೆಬ್ರುವರಿ 2024, 4:57 IST
Last Updated 26 ಫೆಬ್ರುವರಿ 2024, 4:57 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಹಾಗೂ ರಾಜ್ಯದ ಬಜೆಟ್‌ನಲ್ಲಿ ಜಿಲ್ಲೆಗೆ ಮಹತ್ವದ ಕೊಡುಗೆ ಸಿಗದೇ ಇದ್ದರೂ, ರಾಜಕೀಯ ಪಕ್ಷಗಳು ಮಾತ್ರ ಈಗ ‘ಅಭಿವೃದ್ಧಿ’ ರಾಜಕಾರಣ ಶುರು ಮಾಡಿವೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌, ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದರೆ, ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತಿರುವ ಪ್ರಜ್ವಲ್‌ ರೇವಣ್ಣ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ ಬ್ಯಾಂಕ್‌ ಭದ್ರ ಮಾಡಿಕೊಳ್ಳಲು ಮುಂದಾಗಿರುವ ರಾಜಕೀಯ ನಾಯಕರು, ಇದೀಗ ಜಿಲ್ಲೆಯಲ್ಲಿ ಸಂಚಾರ ತೀವ್ರಗೊಳಿಸಿದ್ದು, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಇಲ್ಲವೇ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.

ಶನಿವಾರ ಜಿಲ್ಲೆಯ ಬಾಣಾವರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ₹157 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಚುನಾವಣೆಯ ಕಹಳೆಯನ್ನೂ ಊದಿದ್ದಾರೆ.

ಪ್ರಮುಖವಾಗಿ ಕುರುಬ ಸಮಾಜ, ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌, ಆ ಮತಗಳನ್ನು ಸೆಳೆಯುವ ಇರಾದೆಯಲ್ಲಿದೆ. ಅದಕ್ಕಾಗಿಯೇ ₹5ಕೋಟಿ ವೆಚ್ಚದಲ್ಲಿ ಅರಸೀಕೆರೆ ತಾಲ್ಲೂಕಿನ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಯಾದವ ಸಮುದಾಯ ಭವನ, ಕುರುಬರ ಭವನ ಸೇರಿದಂತೆ ವಿವಿಧ ಸಮುದಾಯ ಭವನಗಳಿಗೆ ₹5 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಅಲ್ಪಸಂಖ್ಯಾತರ ಹೆಚ್ಚಾಗಿ ವಾಸಿಸುವ ಕಾಲೊನಿಗಳ ಸಮಗ್ರ ಅಭಿವೃದ್ಧಿಗೆ ₹5 ಕೋಟಿ, ಬಾಣಾವರ ಶಾದಿ ಮಹಲ್‌ಗೆ ₹50 ಲಕ್ಷ ಒದಗಿಸಿದೆ.

ಜೊತೆಗೆ ಮಾರ್ಚ್‌ 1 ರಂದು ಮತ್ತೆ ಹಾಸನಕ್ಕೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವುದರ ಜೊತೆಗೆ ಗ್ಯಾರಂಟಿ ಯೋಜನೆಯಗಳ ಫಲಾನುಭವಿಗಳ ಸಮಾವೇಶವನ್ನೂ ನಡೆಸಲಿದ್ದಾರೆ.

ಬಾಣಾವರದಲ್ಲಿ ಜೆಡಿಎಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಮೂಲಕ ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಪ್ರಜ್ವಲ್‌ ಬಿರುಸಿನ ಸಂಚಾರ: ಇದಕ್ಕೆ ಪ್ರತ್ಯುತ್ತರ ನೀಡುವಂತೆ ಸಂಸದ ಪ್ರಜ್ವಲ್‌ ರೇವಣ್ಣ ಕೂಡ, ಜಿಲ್ಲೆಯಲ್ಲಿ ಬಿರುಸಿನ ಸಂಚಾರ ಆರಂಭಿಸಿದ್ದಾರೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಕಲೇಶಪುರ ಬೈಪಾಸ್‌ ರಸ್ತೆಯ ಉದ್ಘಾಟನೆ ನೆರವೇರಿಸಿದ್ದಾರೆ. ಈಚೆಗೆ ಆಲೂರಿನಲ್ಲಿ ರೈಲು ನಿಲುಗಡೆಯ ಕ್ರೆಡಿಟ್ ಕೂಡ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹಾಸನಕ್ಕೆ ಸಿದ್ದರಾಮಯ್ಯ ಬರುವ ಮುನ್ನವೇ ₹24 ಕೋಟಿ ವೆಚ್ಚದಲ್ಲಿ ಹಾಸನ ರೈಲು ನಿಲ್ದಾಣದ ಅಭಿವೃದ್ಧಿಗೆ ಕಾಮಗಾರಿಗೆ ಸೋಮವಾರ ಪ್ರಜ್ವಲ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಜೊತೆಗೆ ಹಾಸನದ ರೈಲ್ವೆ ಮೇಲ್ಸೇತುವೆಗೆ ನೀಡಬೇಕಿದ್ದ ₹48 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವರ ಜೊತೆಗೆ ಚರ್ಚಿಸಿದ್ದು, ₹48 ಕೋಟಿ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರಜ್ವಲ್‌ ಹೇಳುತ್ತಿದ್ದಾರೆ.

ಹಾಸನದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಮಧ್ಯೆ ಬಿರುಸಿನ ಪೈಪೋಟಿ ನಡೆಯುವುದು ಖಚಿತವಾಗಿದ್ದು, ಅದಕ್ಕಾಗಿಯೇ ಉಭಯ ಪಕ್ಷಗಳ ನಾಯಕರು, ಅಭಿವೃದ್ಧಿ ರಾಜಕಾರಣ ಶುರು ಮಾಡಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

ಮೌನಕ್ಕೆ ಜಾರಿದ ಬಿಜೆಪಿ

ಕಾಂಗ್ರೆಸ್‌ ಹಾಗೂ ಜೆಡಿಎಸ್ ನಾಯಕರು ಅಭಿವೃದ್ಧಿ ಕಾರ್ಯಗಳ ಭರಾಟೆಯಲ್ಲಿದ್ದರೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾದ ಸಂದರ್ಭ ಎದುರಾಗಿರುವುದರಿಂದ ಬಿಜೆಪಿ ನಾಯಕರು ಮಾತ್ರ ಜಿಲ್ಲೆಯಲ್ಲಿ ಮೌನಕ್ಕೆ ಜಾರಿದಂತಿದೆ. ಪ್ರೀತಂ ಗೌಡ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಸಿದ್ಧೇಶ್‌ ನಾಗೇಂದ್ರ ಈಗಷ್ಟೇ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಈಚೆಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೇಲೂರು ಹಾಗೂ ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದರೂ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಇದೀಗ ಮೌನ ಆವರಿಸಿದಂತಾಗಿದೆ.

ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಬಾಣಾವರದಲ್ಲಿ ನೆರವೇರಿಸಿರುವ ಅಭಿವೃದ್ಧಿ ಕಾಮಗಾರಿಗಳೇ ಉತ್ತರ.
-ಕೆ.ಎನ್‌.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ
ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ.
-ಎಚ್‌.ಡಿ. ರೇವಣ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT