ಸೋಮವಾರ, ಏಪ್ರಿಲ್ 12, 2021
29 °C
ನಿರ್ಬಂಧ ವಿಧಿಸಿದ್ದರೂ ವಾಹನಗಳ ಸಂಚಾರ ನಿರಾತಂಕ; ಕುಸಿತ ತಡೆಯಲು ಮರಳು ಚೀಲ ಜೋಡಣೆ

ದ್ವಾರಸಮುದ್ರ ಕೆರೆ ಏರಿ ಬಿರುಕು: ಸಂಚಾರಕ್ಕೆ ತೊಡಕು

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆ ಏರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕೆರೆ ಏರಿ ಮೇಲೆ ಸಂಚಾರ ನಿರ್ಬಂಧಿಸಿದ್ದರೂ ವಾಹನಗಳು ಸಂಚರಿಸುತ್ತಿವೆ.

ಹಾಸನ ಸೇರಿದಂತೆ ಹಲವು ಊರಿಗೆ ತೆರಳಲು ಜನರಿಗೆ ತೊಂದರೆ ತಪ್ಪಿದಲ್ಲ. ವಾಹನ ಸಂಚಾರ ನಿರ್ಬಂಧ ಇದ್ದರೂ ಪ್ರಯಾಸ ದಲ್ಲಿಯೇ ಏರಿ ಮೇಲೆ ವಾಹನಗಳು ಸಂಚರಿಸುತ್ತಿವೆ. ಏರಿಯ ಎರಡೂ ಬದಿ ನಾಮಫಲಕ ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಆದರೂ ವಾಹನ ಚಾಲಕರು ಗೋಡೆಯ ಒಂದು ಮಗ್ಗುಲಿನಲ್ಲಿ ಜಾಗ ಮಾಡಿಕೊಂಡು ಹೋಗುತ್ತಿದ್ದಾರೆ.

ದ್ವಿಚಕ್ರ ವಾಹನ, ಆಟೊ ರಿಕ್ಷಾ ಮಾತ್ರವಲ್ಲದೆ ಮ್ಯಾಕ್ಸಿಕ್ಯಾಬ್ ಸಹ ಕುಸಿಯುತ್ತಿರುವ ಏರಿಯ ಮೇಲೆಯೇ ಸಂಚರಿಸುತ್ತಿವೆ. ಅಲ್ಲದೇ ಎರಡೂ ಬದಿಯಲ್ಲಿ ಗಿಡಗಂಟಿ ಬೆಳೆದಿದ್ದು, ವಾಹನ ಸಂಚಾರಕ್ಕೆ ಸ್ಥಳಾವಕಾಶ ಕಡಿಮೆ ಆಗಿದೆ. ಏರಿ ರಸ್ತೆ ಹದಗೆಟ್ಟಿದ್ದು, ಹಲವು ಕಡೆ ಡಾಂಬರು ಕಿತ್ತು ಬಂದಿದೆ.

ಸಚಿವರಾದ ಕೆ.ಗೋಪಾಲಯ್ಯ, ಮಾಧುಸ್ವಾಮಿ, ಸಿ.ಪಿ.ಯೋಗೇಶ್ವರ್ ಹಾಗೂ ಅಧಿಕಾರಿಗಳು ಪ್ರತ್ಯೇಕವಾಗಿ ಏರಿ ವೀಕ್ಷಿಸಿ, ಕೊಟ್ಟ ಭರವಸೆಗಳು ಈಡೇರಲಿಲ್ಲ. ವರ್ಷದ ಹಿಂದೆ ಬಿರುಕು ಕಾಣಿಸಿಕೊಂಡಿದ್ದ ಕೆರೆ ಏರಿ ನಾಲ್ಕು ತಿಂಗಳಿನಿಂದ ಕುಸಿಯುತ್ತಲೇ ಇದೆ. ಹಳೇಬೀಡು ವೀಕ್ಷಿಸಲು ಬರುವ ಪ್ರವಾಸಿಗರು ಸಹ ಕೆರೆ ಏರಿ ರಸ್ತೆ ಮೂಲಕವೇ ಬರಬೇಕಿದೆ. ಹಳ್ಳಿಗಳ ರೈತರು ಕೃಷಿ ಉತ್ಪನ್ನಗಳನ್ನು ಕೆರೆ ಏರಿ ಮೇಲೆಯೇ ಸಾಗಣೆ ಮಾಡಬೇಕಿದೆ.

ಅನಾಹುತ ತಪ್ಪಿಸಲು ಏರಿ ಪಕ್ಕದಲ್ಲಿ ಮರಳು ಚೀಲ ಹಾಕಲಾಗಿದೆ. ಆದರೆ ಏರಿ ದುರಸ್ತಿ ಮಾಡುವ ಕೆಲಸ ಮಾತ್ರ ಕಾರ್ಯ ಆರಂಭವಾಗಲೇ ಇಲ್ಲ. ಹೀಗಾಗಿ ಕೆರೆ ಏರಿಯ ಮೇಲೆ ಜಮೀನುಗಳಿಗೆ ತೆರಳುವ ರೈತರು ಹಾಗೂ 20ಕ್ಕೂ ಹೆಚ್ಚು ಹಳ್ಳಿಯ ಜನರಿಗೆ ತೊಂದರೆ ಆಗಿದೆ. ದ್ವಾರಸಮುದ್ರ ಕೆರೆ 100 ಹೆಕ್ಟೇರ್‌ ಜಲಾವೃತ ಪ್ರದೇಶ ಹೊಂದಿದೆ. 289 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆ 153.80 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

‘ಸಾರಿಗೆ ಬಸ್‌ಗಳು‌ ದೂರದ ಮಾರ್ಗವಾದ ಮಲ್ಲಾಪುರ- ಕ್ಯಾತನಕೆರೆ ಗಡಿ ರಸ್ತೆ ಮುಖಾಂತರ ಹಾಸನಕ್ಕೆ ಸಂಚರಿಸುತ್ತಿದ್ದವು. ಎರಡು ದಿನದಿಂದ ಕುಸಿದಿರುವ ಕೆರೆ ಏರಿಯ ಮೇಲೆ ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ’ ಎಂದು ವರ್ತಕ ಶಿವಮೂರ್ತಿ ಆತಂಕ ವ್ಯಕ್ತಪಡಿಸಿದರು.

‘ಏರಿ ದುರಸ್ತಿಗಾಗಿ ಭರ್ತಿಯಾಗಿದ್ದ ಕೆರೆಯ ನೀರನ್ನು ಹೊರ ಬಿಡಲಾಯಿತು. 14 ವರ್ಷದ ನಂತರ ಅಪರೂಪಕ್ಕೆ ಭರ್ತಿಯಾದ ಕೆರೆಯಲ್ಲಿ ಶೇಕಡಾ 25 ರಷು ನೀರು ಹೊರ ಹೋಗಿದೆ. ಮಣ್ಣು ಕುಸಿದು ಸಡಿಲವಾಗಿರುವುದರಿಂದ ಏರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಜಿನುಗುತ್ತಿದೆ’ ಎಂದು ರೈತ ಎಚ್.ಎಸ್.ಆನಂದ ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು