ಗುರುವಾರ , ಜುಲೈ 7, 2022
23 °C
ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಕಾಯಂ ಉಪನ್ಯಾಸಕರ ನೇಮಕಕ್ಕೆ ಆಗ್ರಹ

ಎನ್‌ಇಪಿ ಜಾರಿ: ಶೈಕ್ಷಣಿಕ ಸಮಸ್ಯೆ ಬಗೆಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಪೂರ್ವ ತಯಾರಿ ಇಲ್ಲದೆ ತರಾತುರಿಯಾಗಿ ನೂತನ ಶಿಕ್ಷಣ ನೀತಿ 2020 (ಎನ್‌ಇಪಿ) ಹೇರಿಕೆ ಮಾಡಿರುವುದರಿಂದ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಹೇಮಾವತಿ ಪ್ರತಿಮೆ ಎದುರು ಶನಿವಾರ ಧರಣಿ ನಡೆಸಿದರು.

‘ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ ಪ್ರಸಕ್ತ ವರ್ಷದಿಂದಲೇ ಎನ್ಇಪಿ ಜಾರಿಗೊಳಿಸಿದೆ’ ಎಂದು ಆರೋಪಿಸಿದರು.

‘ಈಗಾಗಲೇ ಪ್ರಥಮ ಪದವಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಕೋರ್ಸ್ ತರಗತಿ ಗಳು ಆರಂಭವಾಗಿ ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಪಠ್ಯಕ್ರಮವೂ ತಯಾರಾಗಿಲ್ಲ. ಅಂದರೆ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಇರುವುದಿಲ್ಲ. ಬೋಧಕರು, ಪಾಠೋ ಪಕರಣ, ತರಗತಿಗಳ ಕೊರತೆ ಇದೆ. ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ ಎರಡು ತಿಂಗಳಿನಿಂದ ಸಮಗ್ರ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ’ ಎಂದು ದೂರಿದರು.

ನೂತನ ಶಿಕ್ಷಣ ನೀತಿ ಜಾರಿಯಾ ದಾಗ ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು,  ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಠ ಒಂದೆರಡು ವರ್ಷ ಬೇಕಾಗುತ್ತದೆ. ಆದರೆ, ಎನ್ಇಪಿ ಜಾರಿ ಮಾಡಬೇಕೆ ನ್ನುವ ಕೇಂದ್ರ ಸರ್ಕಾರದ ನಿರ್ದೇಶನ ವನ್ನು ಮೊದಲು ಅನುಷ್ಠಾನಕ್ಕೆ ತಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರ ಕೇವಲ 15–29 ದಿನಗಳ ತಯಾರಿಯಲ್ಲಿ ನೀತಿ ಜಾರಿ ಮಾಡಿತು ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣ ಶೇ 50ರಷ್ಟು ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಸುಮಾರು ಎರಡೂವರೆ ಲಕ್ಷದಷ್ಟು ಅಧಿಕ ವಿದ್ಯಾರ್ಥಿಗಳು ಪದವಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಕಾರ ಶೇಕಡಾ 50ರಷ್ಟು ಅಧಿಕ ಉಪನ್ಯಾಸಕರನ್ನು ನೇಮಕ ಮಾಡಬೇಕು. ಮೂಲ ಸೌಕರ್ಯ ಹೆಚ್ಚಿಸಬೇಕು. ತರಗತಿಗಳ ಸಂಖ್ಯೆ ಏರಿಸಬೇಕು. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಶೇಕಡಾ 70 ರಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸರಿಸುಮಾರು 14 ಸಾವಿರ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಆದರೆ, ಸರ್ಕಾರ ಇದರ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಬದಲಿಗೆ ಹಾಲಿ ಶಿಕ್ಷಕರ ಹುದ್ದೆಗೂ ಕೊಡಲಿ ಏಟು ನೀಡುವ ಯೋಚನೆ ನಡೆಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಸುಭಾಷ್, ಜಿಲ್ಲಾ ಸಹ ಸಂಚಾಲಕಿ ಚೈತ್ರ, ಸದಸ್ಯರಾದ ಸುಶ್ಮಿತಾ, ಅಂಕಿತ, ಸ್ಫೂರ್ತಿ ಹಾಗೂ ವಿದ್ಯಾರ್ಥಿಗಳಾದ ಮದನ್, ಕಾವ್ಯಾ, ಮೇಘನಾ, ನಿಸರ್ಗ, ಅನಿಲ್, ಬಿಂದು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು