ಮಂಗಳವಾರ, ಜನವರಿ 31, 2023
19 °C
ಅಂಧರಿಗೆ ಸ್ಥಳ ಪರಿಜ್ಞಾನ, ಚಲನವಲನ ತರಬೇತಿ

‘ಸ್ವಾವಲಂಬಿ ಜೀವನ ನಡೆಸಲು ಸಜ್ಜಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಯಾವ ಅಂಧರೂ ಸಮಾಜಕ್ಕೆ ಅಂಜಿ ಬದುಕಬಾರದು. ದೃಷ್ಟಿದೋಷವಿದ್ದು ಕಣ್ಣು ಕಾಣದೇ ಇರುವ ಅಂಧರು ಎಲ್ಲಿಯವರೆಗೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯ? ಪ್ರತಿಯೊಬ್ಬ ಅಂಧರು ಮನೆಯಿಂದ ಹೊರಬಂದು ತಮ್ಮ ಕೈಲಾದ ಕೆಲಸವನ್ನು ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ನಗರದ ಕೇಶವ ನೇತ್ರಾಲಯದ ನೇತ್ರ ತಜ್ಞ, ದ್ಯುತಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಬಿ.ಎನ್. ಶಿವಪ್ರಸಾದ್ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ ಶಾಖೆ, ದ್ಯುತಿ ಚಾರಿಟಬಲ್ ಟ್ರಸ್ಟ್, ರಾಷ್ಟ್ರೀಯ ಅಂಧರ ಸಂಸ್ಥೆ ಜಿಲ್ಲಾ ಶಾಖೆ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್, ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ನಗರದ ಕಾಟೀಹಳ್ಳಿ ಸರ್ಕಲ್‌ನ ಸಿಎಂಎಸ್‍ಎಸ್‍ಎಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ’ ವಸತಿಯುತ 4 ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಸನ ಶಾಖೆಯ ಸಂಚಾಲಕ ಡಾ.ಸುಧೀರ್ ಬಿ. ಬೆಂಗಳೂರ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ 18 ವರ್ಷಗಳಿಂದ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತ ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಅನುಪಮಾ ಕೆ.ಆರ್. ಮಾತನಾಡಿ, ಇಲಾಖೆಯ ವತಿಯಿಂದ ಅಂಗವಿಕಲರಿಗೆ ವಿವಿಧ ಯೋಜನೆಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು, ಜಿಲ್ಲೆಯಲ್ಲಿ ಸುಮಾರು 2,854 ಅಂಧರಿದ್ದು, ಇವರೆಲ್ಲರಿಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತರಬೇತಿಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಶಬ್ಬೀರ್ ಅಹಮದ್, ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಕಾರ್ಯದರ್ಶಿ ಸಿದ್ದೇಶ್ವರ ಎಚ್., ರಾಷ್ಟ್ರೀಯ ಅಂಧರ ಸಂಸ್ಥೆಯ ಜಿಲ್ಲಾ ಸಂಯೋಜಕ ಚಂದ್ರಶೇಖರ್ ಎಸ್., ಎಸ್‌ವಿವೈಎಂ ಸಿಬ್ಬಂದಿ ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಮತ್ತು ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಸಹಕಾರದಿಂದ 20 ಅಂಧರಿಗೆ ಉದ್ದನೆಯ ಬಿಳಿಬೆತ್ತ  ವಿತರಿಸಲಾಯಿತು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಜಿಲ್ಲಾ ಸಂಯೋಜಕರಾದ ಯೋಗನಾಥ್ ಎಂ.ಎಚ್. ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.