ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪೂರ್ವ ಮಳೆ: ಬರದ ಬವಣೆಯಿಂದ ಬಿತ್ತನೆಯತ್ತ ರೈತ ಸಮೂಹ

Published 20 ಮೇ 2024, 8:53 IST
Last Updated 20 ಮೇ 2024, 8:53 IST
ಅಕ್ಷರ ಗಾತ್ರ

ಹಾಸನ: ಇನ್ನು ಕೆಲವೇ ವಾರಗಳಲ್ಲಿ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ 3–4 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬಿತ್ತನೆಗೆ ಇನ್ನೂ ಎರಡು ವಾರ ಕಾಲಾವಕಾಶವಿದ್ದು, ಬಿತ್ತನೆ ಗಡ್ಡೆಯನ್ನು ಸಂಸ್ಕರಿಸಿ ಔಷಧೋಪಚಾರ ಮಾಡುವಲ್ಲಿ ರೈತರು ನಿರತರಾಗಿದ್ದಾರೆ. ಒಂದು ವಾರ ಉತ್ತಮ ಮಳೆಯಾದರೆ, ಬಿತ್ತನೆ ಪ್ರಾರಂಭ ಮಾಡಲಿದ್ದಾರೆ. ಈಗಾಗಲೇ ಆಲೂಗಡ್ಡೆ ಸೇರಿದಂತೆ ಧ್ವಿದಳ ಧಾನ್ಯಗಳ ಬಿತ್ತನೆ ಮಾಡಲು ಭೂಮಿಯನ್ನು ಹದಗೊಳಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. 

ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಕುರಿತಾಗಿ ಈಗಾಗಲೇ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು, ಕೃಷಿ, ತೋಟಗಾರಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.

ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಒದಗಿಸುವಂತೆ ಸರಬರಾಜು ಸಂಸ್ಥೆಗಳ ಜೊತೆ ಸಭೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದು, ಜಿಲ್ಲೆಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 1,33,002 ಟನ್ ರಸಗೊಬ್ಬರ ಬೇಡಿಕೆ ಇದ್ದು, ಪ್ರಸ್ತುತ ಮೇ ತಿಂಗಳಲ್ಲಿ 19,812 ಮೆಟ್ರಿ ಟನ್ ರಸಗೊಬ್ಬರ ಬೇಡಿಕೆ ಇದೆ. ಬೇಡಿಕೆಗೆ ಅನುಸಾರ ಪ್ರಸ್ತುತ ಚಿಲ್ಲರೆ ಮತ್ತು ಸಗಟು ಮಾರಾಟಗಾರರಲ್ಲಿ 67,117 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಸುಲೋಚನಾ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಮುಂಗಾರು ಹಂಗಾಮಿಗೆ 14,680 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಬೇಡಿಕೆಯಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಕೆಎಸ್ಎಸ್‌ಸಿ ಮತ್ತು ಎನ್‌ಎಸ್‌ಸಿ ಮತ್ತು ಖಾಸಗಿ ಮಾರಾಟಗಾರರಲ್ಲಿ 16,539 ಕ್ವಿಂಟಲ್ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.

ಜಿಲ್ಲೆಗೆ ಪೂರೈಕೆಯಾಗುವ ರಸಗೊಬ್ಬರ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಬಳಕೆ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆಗಳು, ಕೃಷಿಯೇತರ ಚಟುವಟಿಕೆಗಳಲ್ಲಿ ಬಳಸದಂತೆ ನಿಗಾ ವಹಿಸಲು ಜಿಲ್ಲಾ ಜಾಗೃತಿ ದಳದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ರೀತಿಯ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

ಹಳೇಬೀಡು ಭಾಗದಲ್ಲಿ ಮಳೆ ಬಿದ್ದಿರುವುದರಿಂದ ಬಿತ್ತನೆಗೆ ರೈತರು ಭೂಮಿಯನ್ನು ಸಿದ್ದ ಮಾಡಿಕೊಳುತ್ತಿದ್ದಾರೆ. ಸಾಕಷ್ಟು ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬೇಸಾಯ ಮಾಡಲು ತೊಡಕಾಗಿದೆ. 

ಬೇಲೂರು ತಾಲ್ಲೂಕಿನಲ್ಲಿ 25ಸಾವಿರ ಹೆಕ್ಟೇರ್ ಕೃಷಿ ಪ್ರದೇಶವಿದ್ದು, 17ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಜೊತೆಯಲ್ಲಿ ಹೆಸರು, ಅಲಸಂದೆ, ತೊಗರಿ ಬಿತ್ತನೆ ಬೀಜವನ್ನು ತಾಲ್ಲೂಕಿನ 5 ಕೃಷಿ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಬತ್ತದ ಬಿತ್ತನೆ ಬೀಜ ಸಹ ದಾಸ್ತಾನು ಮಾಡಲಾಗಿದೆ. ಗದ್ದೆ ಜಮೀನಿನವರು ಬತ್ತದ ಬೀಜವನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ರಂಗಸ್ವಾಮಿ ಹೇಳುತ್ತಾರೆ. 

ರೈತರಿಗೆ ಆನ್‌ಲೈನ್ ಮೂಲಕ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರು ಆಧಾರ್ ಕಾರ್ಡ್ ಜೊತೆ ಫ್ರೂಟ್ ಐಡಿ ಹೊಂದಿರಲೇಬೇಕು. 

ಮುಸುಕಿನ ಜೋಳದ ಜೊತೆ ಅಕ್ಕಡಿ ಬೆಳೆಯಾಗಿ ಉದ್ದು, ಹೆಸರು ಬೆಳೆದರೆ ಬೆಳವಣಿಗೆ ಕಷ್ಟವಾಗುತ್ತದೆ. ಅಕ್ಕಡಿ ಬೆಳೆ ಜೊತೆಗೆ ತೊಗರಿ ಬಿತ್ತನೆ ಮಾಡಲು ಸಲಹೆ ಮಾಡಲಾಗಿದೆ. ಸಮಗ್ರ ಕೃಷಿಯತ್ತ ರೈತರು ಆಸಕ್ತಿವಹಿಸಿದರೆ ಅನುಕೂಲ.

ಕೃಷಿ ಭೂಮಿಗೆ ಅತಿ ಹೆಚ್ಚು ಯೂರಿಯಾ ಬಳಕೆ ಮಾಡುವುದರಿಂದ ಬೆಳೆ ಹುಲುಸಾಗಿ ಬೆಳೆಯುತ್ತದೆ. ಆದರೆ ಫಸಲು ಬರುವುದಿಲ್ಲ. ಮಣ್ಣಿನ ಫಲವತ್ತತೆಗೆ ಅಗತ್ಯವಿರುವ ಪ್ರಮಾಣದಲ್ಲಿ ರೈತರ ರಸಗೊಬ್ಬರ ಬಳಸಬೇಕು. ರೈತರಿಗೆ ಯಾವುದೇ ರೀತಿಯ ಕೃಷಿ ಸಂಬಂಧಿಸಿದ ಸಲಹೆ ಅಗತ್ಯ ಇದ್ದರೆ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ರೈತರಿಗೆ ತಿಳಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ರಂಗಸ್ವಾಮಿ ತಿಳಿಸಿದರು. 

ಹಿರೀಸಾವೆ ಹೋಬಳಿಯಲ್ಲಿ ಯುಗಾದಿಯಿಂದ ಮೇ ಮೊದಲ ವಾರದವರೆಗೆ ಮಳೆಯಾಗಿರಲಿಲ್ಲ. ಆದರೆ ಒಂದು ವಾರದಿಂದ ಉತ್ತಮ ಮಳೆಯಾಗಿದೆ. ರೈತರು ಪೂರ್ವ ಮುಂಗಾರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಹೆಸರು, ಉದ್ದು, ಅಲಸಂದೆ, ತೊಗರಿ ಸೇರಿದಂತೆ ಹಲವು ಕಾಳುಗಳ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ. ತೆಂಗಿನ ತೋಟದಲ್ಲಿ ಹಸಿರು ಗೊಬ್ಬರಕ್ಕಾಗಿ ಅಪ್ಪ ಸೆಣಬನ್ನು ಹೆಚ್ಚು ಬೆಳೆಯುತ್ತಾರೆ. ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಇರವಷ್ಟು, ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತನು ಮಾಡಲಾಗಿದೆ. ರೈತರು ಬಿತ್ತನೆ ಬೀಜವನ್ನು ಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ರಸಗೊಬ್ಬರದ ಸಮಸ್ಯೆ ಇಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು. 

ತೆಂಗಿನ ತೋಟಕ್ಕೆ ಹಸಿರಲೆ ಗೊಬ್ಬರದ ಬೆಳೆಯಾಗಿ ಡಯಾಂಚ ಬೆಳೆ ಸೇರಿದಂತೆ ಇತರೆ ಬೆಳೆಗಳನ್ನು ಹಾಕಲಾಗುವುದು ಎನ್ನುತ್ತಾರೆ ರೈತ ರಾಮಕೃಷ್ಣ.

ಆಲೂರು ತಾಲ್ಲೂಕಿನಲ್ಲಿ ಈವರೆಗೆ ಕೇವಲ ಎರಡು ಹದ ಮಳೆಯಾಗಿದೆ. ಈವರೆಗೆ ಯಾವುದೇ ನಷ್ಟದ ವರದಿಯಾಗಿಲ್ಲ. ನಾಲ್ಕು ಹೋಬಳಿಗಳಲ್ಲಿರುವ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಲಾಗಿದ್ದು, ಮಳೆ, ಗಾಳಿಯಲ್ಲಿ ಆಕಸ್ಮಿಕವಾಗಿ ಎದುರಾಗುವ ಕಷ್ಟ ನಷ್ಟಗಳನ್ನು ಖುದ್ದಾಗಿ ಪರಿಶೀಲಿಸಿ ವರದಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಜಾಗ್ರತೆ ವಹಿಸಲಾಗಿದೆ. ಕೆ. ಹೊಸಕೋಟೆ, ಪಾಳ್ಯ ಮತ್ತು ಕುಂದೂರು ಹೋಬಳಿಗಳಲ್ಲಿ ಕೆಲ ಕಾಫಿ ತೋಟದೊಳಗೆ ವಿದ್ಯುತ್ ತಂತಿ ಹಾಯ್ದು ಹೋಗಿದೆ. ಮಳೆ, ಗಾಳಿಯಲ್ಲಿ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ. ತುರ್ತು ಕಾಮಗಾರಿ ಕೈಗೊಳ್ಳಲು ಲಾರಿ, ವಿದ್ಯುತ್ ಕಂಬಗಳು ಇವೆ ಎಂದು ಸೆಸ್ಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ರೈತರು ಭೂಮಿ ಸಿದ್ದತೆ ಕಾರ್ಯ ಪ್ರಾರಂಭ ಮಾಡಿದ್ದಾರೆ.

ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆ ಈಚೆಗೆ ಆಗಾಗ್ಗೆ ಆಗುತ್ತಿರುವ ಮಳೆಯಿಂದ ಹರ್ಷಗೊಂಡಿದ್ದಾರೆ. ಮುಂದೆಯೂ ಹದ ಮಳೆಯಾಗಬೇಕಿದೆ. ಮಳೆಯ ಹದವನ್ನು ಆಧರಿಸಿ ಹೆಸರು,  ಅಲಸಂದೆ ಮತ್ತು ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆ ಕಾರ್ಯ ಕೈಗೊಳ್ಳಲಿದ್ದಾರೆ. ಪೂರ್ವ ಮುಂಗಾರು ಹಂಗಾಮಿನಲ್ಲಿ  ತಾಲ್ಲೂಕಿನಲ್ಲಿ ಅಂದಾಜು 3,500 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ನಾಟಿ ಕಾರ್ಯಕ್ಕೆ ತಂಬಾಕು ಸಸಿಗಳನ್ನು ಸಿದ್ದಗೊಳಿಸುತ್ತಿರುವ ರೈತ ಮಹಿಳೆಯರು
ಅರಕಲಗೂಡು ತಾಲ್ಲೂಕಿನಲ್ಲಿ ನಾಟಿ ಕಾರ್ಯಕ್ಕೆ ತಂಬಾಕು ಸಸಿಗಳನ್ನು ಸಿದ್ದಗೊಳಿಸುತ್ತಿರುವ ರೈತ ಮಹಿಳೆಯರು
ಹಿರೀಸಾವೆ ಹೋಬಳಿಯಲ್ಲಿ ಪೂರ್ವ ಮುಂಗಾರು ಸಿದ್ದತೆ ಮಾಡಲಾಗುತ್ತಿದೆ.
ಹಿರೀಸಾವೆ ಹೋಬಳಿಯಲ್ಲಿ ಪೂರ್ವ ಮುಂಗಾರು ಸಿದ್ದತೆ ಮಾಡಲಾಗುತ್ತಿದೆ.
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ದಾಸ್ತಾನಿನ ಕುರಿತು ಕೃಷಿ ಅಧಿಕಾರಿ ಜಹಾನ್ ತಾಜ್ ಮಾಹಿತಿ ನೀಡಿದರು.
ಹಿರೀಸಾವೆಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳ ದಾಸ್ತಾನಿನ ಕುರಿತು ಕೃಷಿ ಅಧಿಕಾರಿ ಜಹಾನ್ ತಾಜ್ ಮಾಹಿತಿ ನೀಡಿದರು.
ಹಳೇಬೀಡು ಸಮೀಪದ ಚೀಲನಾಯ್ಕನಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಸಿದ್ದ ಮಾಡಿಕೊಳ್ಳಲು ಸಾಧ್ಯವಾಗದಂತೆ ತೇವಾಂಶಗೊಂಡಿರುವ ಜಮೀನು
ಹಳೇಬೀಡು ಸಮೀಪದ ಚೀಲನಾಯ್ಕನಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಸಿದ್ದ ಮಾಡಿಕೊಳ್ಳಲು ಸಾಧ್ಯವಾಗದಂತೆ ತೇವಾಂಶಗೊಂಡಿರುವ ಜಮೀನು
43 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ
ಅರಕಲಗೂಡು ತಾಲ್ಲೂಕಿನಲ್ಲಿ ಹದಮಳೆಯಾಗಿದ್ದು ರೈತರು ಕೃಷಿ ಕಾರ್ಯಕ್ಕೆ ಸಿದ್ದತೆ ನಡೆಸಿದ್ದಾರೆ. ಮುಂಗಾರು ಹಂಗಾಮಿನ  ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕಿನ ನಾಟಿ ಕಾರ್ಯ ಬಿರುಸಿನಿಂದ ನಡೆದಿದೆ. ಮುಸುಕಿನ ಜೋಳ ಹಾಗೂ ಆಲೂಗಡ್ಡೆ ಕೃಷಿಗೆ ಬೆಳೆಗಾರರು ಸಿದ್ದತೆ ನಡೆಸಿದ್ದಾರೆ. ಬಿತ್ತನೆ ಬೀಜ ರಸಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿಗೆ 43640 ಹೆಕ್ಟೇರ್ ಬೆಳೆ ವಿಸ್ತೀರ್ಣದ ಗುರಿ ಹೊಂದಲಾಗಿದೆ.  ಮೇ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದ್ದು ಮುಸುಕಿನ ಜೋಳ 800 ಕ್ವಿಂಟಲ್  ಅಲಸಂದೆ 403 ಕ್ವಿಂಟಲ್ ಹೆಸರು 11 ಕ್ವಿಂಟಲ್  ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 102.25 ಕ್ವಿಂಟಲ್ ಮುಸುಕಿನ ಜೋಳ 55.2 ಕ್ವಿಂಟಲ್ ಅಲಸಂದೆ 2 ಕ್ವಿಂಟಲ್‌ ಹೆಸರು ಬಿತ್ತನೆ ಬೀಜ ದಾಸ್ತಾನು ಇದೆ. ರಸಗೊಬ್ಬರ ಅಗತ್ಯವಾದ ದಾಸ್ತಾನು ಇದೆ. ಕಳೆದ ಬಾರಿ ಮಳೆಯಾಗದೇ ಬರ ಕಾಣಿಸಿಕೊಂಡಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟವಾಗಿಲ್ಲ. ದಾಸ್ತಾನು ಹಾಗೆ ಉಳಿದಿದೆ. ಮುಂಗಾರು ಹಂಗಾಮಿನ ಕೃಷಿ  ಪರಿಕರಗಳ ಅಗತ್ಯವನ್ನು ಪೂರೈಸಲು ಇಲಾಖೆ  ಸಿದ್ದತೆ ನಡೆಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ. ಕವಿತಾ ತಿಳಿಸಿದ್ದಾರೆ. ಕಳೆದ ವರ್ಷ ರೈತರು ಬರಗಾಲದ ಬವಣೆಯಲ್ಲಿ ನೊಂದಿದ್ದಾರೆ. ಈ ಬಾರಿ ಮುಂಗಾರು ಆಶಾದಾಯಕ ಭಾವನೆ ಮೂಡಿಸುತ್ತಿದ್ದು ಸರ್ಕಾರ ಹಾಗೂ ಕೃಷಿ ಇಲಾಖೆ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ  ಅಧ್ಯಕ್ಷ ಸೀಬಳ್ಳಿ ಯೋಗಣ್ಣ ತಿಳಿಸಿದರು. ರೈತರಿಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಆದ್ಯತೆ ಮೇಲೆ ಒದಗಿಸಬೇಕು. ಕಳೆದ ಸಾಲಿನ ಬರಪರಿಹಾರದ ಮೊತ್ತ ಕೆಲವರಿಗೆ ಮಾತ್ರ ದೊರೆತಿದ್ದು ಎಲ್ಲ ರೈತರಿಗೆ ತಲುಪಿಲ್ಲ.  ತಾಲ್ಲೂಕು ಆಡಳಿತ ಕೂಡಲೇ ಬರ ಪರಿಹಾರದ ಹಣವನ್ನು ಇತರೆ ಸಾಲಗಳಿಗೆ ಮುಟ್ಟುಗೋಲು ಹಾಕಿಕೊಳ್ಳದೇ ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೀಜ ಗೊಬ್ಬರ ದಾಸ್ತಾನು
ಪ್ರಸ್ತುತ ಯಾವುದೇ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಇಲ್ಲ. ಜಿಲ್ಲೆಯಲ್ಲಿ ರೈತರಿಗೆ ಬೇಕಾದ ಅಗತ್ಯ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ರಾಜಸುಲೋಚನಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೂರ್ಯಕಾಂತಿ ಬೀಜ ಪೂರೈಕೆ ಬೇಲೂರು ತಾಲ್ಲೂಕಿನಲ್ಲಿ ಶೇ 75 ರಷ್ಟು ಮುಸುಕಿನ ಜೋಳ ಪ್ರಮುಖ ಬೆಳೆಯಾಗಿದೆ. ಹಳೇಬೀಡು ಹೋಬಳಿಯಲ್ಲಿ ಸೂರ್ಯಕಾಂತಿ ಸಹ ಬಿತ್ತನೆ ಮಾಡುತ್ತಾರೆ. ಹೀಗಾಗಿ ಹಳೇಬೀಡು ಕೃಷಿ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಪೂರೈಕೆ ಮಾಡಲಾಗುತ್ತಿದೆ. ಎಸ್.ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ  ಕಡ್ಡಾಯವಾಗಿ ನೋಂದಣಿ ಮಾಡಿ ಪೂರ್ವ ಮುಂಗಾರು ಬೆಳೆಗಳನ್ನು ಹಾಕಿರುವ ಬಗ್ಗೆ ರೈತರು 2024–25ನೇ ಸಾಲಿನ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಎಫ್ಐಡಿ ಸಂಖ್ಯೆ ಮತ್ತು ಸರ್ವೆ ನಂಬರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಜಹಾನ್ ತಾಜ್  ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬೀಜಗಳ ಬೆಲೆ ಕಡಿಮೆ ಮಾಡಿ ಕೃಷಿ ಇಲಾಖೆ ನೀಡುತ್ತಿರುವ ಬಿತ್ತನೆ ಬೀಜಗಳ ಬೆಲೆ ದುಬಾರಿಯಾಗಿವೆ. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಕಡಿಮೆ ಬೆಲೆಗೆ ರೈತರಿಗೆ ನೀಡಬೇಕು. ಎಚ್.ಕೆ. ರಘು ಅಧ್ಯಕ್ಷರು ಹಾಸನ ಜಿಲ್ಲಾ ರೈತ ಸಂಘ. ಅಗತ್ಯ ಸಿದ್ಧತೆ ಅರಕಲಗೂಡು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಕೃಷಿಗೆ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳನ್ನು ಒದಗಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಕೆ.ಜಿ.ಕವಿತಾ ಸಹಾಯಕ ಕೃಷಿ ನಿರ್ದೇಶಕಿ ಅರಕಲಗೂಡು ಬರ ಪರಿಹಾರ ಸಾಲಕ್ಕೆ ಜಮಾ ಬೇಡ ಕಳೆದ ವರ್ಷದ ಬರಪರಿಹಾರದ ಹಣವನ್ನು ಬೇರೆ ಸಾಲದ ಬಾಕಿಗಳಿಗೆ ಹಿಡಿದುಕೊಳ್ಳದೇ ಪೂರ್ಣಪ್ರಮಾಣದಲ್ಲಿ ನೀಡುವ ಮೂಲಕ ರೈತರ ಕೃಷಿ ಕಾರ್ಯಗಳಿಗೆ ನೆರವಾಗಬೇಕು ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ    ಸಹಾಯವಾಣಿ ಆರಂಭ ಆಲೂರು ಮಿನಿ ವಿಧಾನಸೌಧ ಕಾರ್ಯಾಲಯದಲ್ಲಿ ದೂರವಾಣಿ ಸಂಖ್ಯೆ 08170 –21822 ಸಹಾಯವಾಣಿ ತೆರೆಯಲಾಗಿದೆ. ಯಾವುದೇ ನಷ್ಟ ಸಂಭವಿಸಿದರೆ ಕೂಡಲೆ ದೂರವಾಣಿ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಈಗಾಗಲೆ ಮನವಿ ಮಾಡಲಾಗಿದೆ. ನಂದಕುಮಾರ್ ಆಲೂರು ತಹಶೀಲ್ದಾರ್ ತುರ್ತು ಕಾಮಗಾರಿಗೆ ಸಿದ್ಧತೆ ಈಗಾಗಲೇ ತಂತಿ ಹಾದು ಹೋಗಿರುವ ದಾರಿಯಲ್ಲಿ ತಡೆಯಾಗಿದ್ದ ಗಿಡ ಗಂಟೆಗಳನ್ನು ತೆಗೆಯಲಾಗಿದೆ. ಅಡಚಣೆಯಾದ ಕ್ಷಣದಲ್ಲಿ ತುರ್ತು ಕಾಮಗಾರಿ ಮಾಡಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಎನ್. ಡಿ. ಕುಮಾರ್ ಸೆಸ್ಕ್ ಸಹಾಯಕ ಎಂಜಿನಿಯರ್‌ ಆಲೂರು. ಬೀಜ ಗೊಬ್ಬರ ದಾಸ್ತಾನು ಚನ್ನರಾಯಪಟ್ಟಣ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ ಹೆಸರು ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಬೀಜ ದಾಸ್ತಾನು ಇದೆ. ರೈತಾಪಿ ವರ್ಗದವರಿಗೆ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ ರಸಗೊಬ್ಬರ ದಾಸ್ತಾನು  ಇದೆ. ಎಂ.ಎಸ್. ಜನಾರ್ದನ್‌ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನರಾಯಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT