ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕೋಡಿ ಒಡೆದಿದ್ದಕ್ಕೆ ರೈತರ ಆಕ್ರೋಶ

ಹಳೇಬೀಡಿನ ಹೊಯ್ಸಳ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು
Last Updated 1 ನವೆಂಬರ್ 2020, 11:14 IST
ಅಕ್ಷರ ಗಾತ್ರ

ಹಳೇಬೀಡು: ಭರ್ತಿಯಾಗಿರುವ ದ್ವಾರಸಮುದ್ರ ಕೆರೆ ಕೋಡಿಯನ್ನು ಒಡೆದಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ರೈತರು ಭಾನುವಾರ ಹೊಯ್ಸಳ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸುಮಾರು 1 ಗಂಟೆ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡುವ ಮುಖಾಂತರ ವರ್ತಕರು ಪ್ರತಿಭಟನೆಗೆ ಸಾಥ್ ನೀಡಿದರು. ರಸ್ತೆಯಲ್ಲೇ ಅಡುಗೆ ತಯಾರಿಸಿ ಪ್ರತಿಭಟನಾನಿರತರಿಗೆ ವಿತರಿಸಲಾಯಿತು.

ಕೆರೆಯಲ್ಲಿರುವ ನೀರನ್ನು ಹೊರಗೆ ಹಾಕದೆಯೇ ಏರಿ ದುರಸ್ತಿ ಮಾಡಲಾಗುವುದು ಎಂದು ಎಂಜಿನಿಯರ್‌ಗಳು ಭರವಸೆ ನೀಡಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಏಕಾಏಕಿ ಕೋಡಿಯನ್ನು ಒಡೆದಿದ್ದಾರೆ ಎಂದು ದೂರಿದರು.

‘ಈಗ ಹಳೇಬೀಡು ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಕೆರೆ ನೀರನ್ನು ಖಾಲಿ ಮಾಡಿದರೆ, ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತದೆ. ಐದಾರು ವರ್ಷಗಳಿಂದ ಬರಗಾಲದಿಂದ ಸಂಕಷ್ಟ ಎದುರಿಸಿದ್ದೇವೆ. ಇನ್ನಾದರೂ ನೆಮ್ಮದಿಯಿಂದ ಬದುಕಲು ಬಿಡಿ’ ಎಂದು ಪ್ರತಿಭಟನಕಾರರು ಮನವಿ ಮಾಡಿದರು.

ಎಂಜಿನಿಯರ್‌ಗಳು ಹಿಟಾಚಿಯಿಂದ ಕೋಡಿ ಒಡೆದು ನೀರನ್ನು ಹೊರಬಿಟ್ಟಿದ್ದರು. ಆ ಜಾಗಕ್ಕೆ ರೈತರು ಮರಳು ಚೀಲ ಹಾಗೂ ಕಲ್ಲು ತುಂಬಿಸಿ ನೀರು ಹೊರ ಹೋಗದಂತೆ ನೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ.ಮಂಜಪ್ಪ, ಮುಖಂಡರಾದ ಗ್ರಾನೈಟ್ ರಾಜಶೇಖರ್, ಅಡಗೂರು ಆನಂದ್, ಕಟ್ಟೆಸೋಮನಹಳ್ಳಿ ರಮೇಶ್, ಜಿ.ವಿ.ಪ್ರಸನ್ನ, ಕೆ.ಪಿ.ಕುಮಾರ್, ಎಲ್.ಈ.ಶಿವಪ್ಪ, ಬಸ್ತಿಹಳ್ಳಿ ಮಹಾಲಿಂಗಪ್ಪ, ವಿಜಯ್ ಕುಮಾರ್, ಚೇತನ್, ಪ್ರದೀಪ್, ಅರೆಕಲ್ಲಟ್ಟಿ ರುದ್ರೇಗೌಡ ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ, ಡಿವೈಎಸ್ಪಿ ನಾಗೇಶ್, ಸಿಪಿಐ ಸಿದ್ದರಾಮೇಶ್ ಹಾಗೂ ಎಸ್‌ಐ ಗಿರಿಧರ್ ಬಂದೋಬಸ್ತ್ ಮಾಡಿದ್ದರು.

‘ತುರ್ತಾಗಿ ದುರಸ್ತಿ ಮಾಡಬೇಕಿದೆ’
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದಜಿಲ್ಲಾಧಿಕಾರಿ ಆರ್.ಗಿರೀಶ್ ರೈತರ ಮನವೊಲಿಸಲು ಪ್ರಯತ್ನಿಸಿದರು.

ಕೆರೆ ನೀರನ್ನು ಹೊರಹಾಕದೆಯೇ ಏರಿ ದುರಸ್ತಿ ಮಾಡಬಹುದು ಎಂದು ಕಾವೇರಿ ನೀರಾವರಿ ನಿಗಮದವರು ಹೇಳಿರುವುದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಏರಿ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುತ್ತಿದೆ. ಕೆರೆ ಏರಿಯನ್ನು ತುರ್ತಾಗಿ ದುರಸ್ತಿ ಮಾಡದಿದ್ದರೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ, ಕಾಮಗಾರಿ ಕೈಗೊಳ್ಳಬೇಕಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕೆರೆ ಸಂರಕ್ಷಿಸುವುದು ಎಲ್ಲರ ಹೊಣೆ. ಎಲ್ಲರೂ ಸಹಕಾರ ನೀಡಬೇಕು. ಅಗತ್ಯ ಪ್ರಮಾಣದಲ್ಲಿ ಮಾತ್ರ ನೀರು ತೆಗೆಯುತ್ತೇವೆ. ಮುಂದಿನ ಮಳೆಯಲ್ಲಿ ಪುನಃ ನೀರು ತುಂಬಲಿದೆ’ ಎಂದು ಪ್ರತಿಭಟನಕಾರರ ಮನವೊಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಮಾತನಾಡಿ, ‘ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಗುಂಪು ಸೇರಿ ಪ್ರತಿಭಟನೆ ಮಾಡುವುದರಿಂದ ಹೆಚ್ಚಿನ ತೊಂದರೆಯಾಗಲಿದೆ. ಮುಖಂಡರು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಎನ್.ವಿ.ನಟೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT