ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ಉತ್ಸವದ ಸಿದ್ಧತೆ ಪೂರ್ಣ: ಡಿಸಿ

ಹಲವು ದೇಶಗಳಲ್ಲಿ ಕೋವಿಡ್‌ ಎರಡನೇ ಅಲೆ, ಸರಳ ಆಚರಣೆಗೆ ನಿರ್ಧಾರ
Last Updated 4 ನವೆಂಬರ್ 2020, 14:36 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಉತ್ಸವದ ಸಿದ್ಧತೆ ಪೂರ್ಣಗೊಂಡಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಇಡಿ ಪರದೆ ಮತ್ತು ಆನ್‍ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್‍ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ದೇವಿ ದರ್ಶನ ಮಾಡಲು ದೇವಸ್ಥಾನದ ಆವರಣ ಸೇರಿದಂತೆ ನಗರದ ಇತರೆ ಭಾಗಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಉತ್ಸವದ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೂ ವೀಕ್ಷಣೆ ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಸಂಖ್ಯೆ ಕಡಿಮೆಯಾಗಿದೆ ಅಂದುಕೊಂಡು ಮೈ ಮರೆಯಬಾರದು. ಈಗಾಗಲೇ ವಿವಿಧ ದೇಶಗಳಲ್ಲಿ ಕೋವಿಡ್‌ ಎರಡನೇ ಅಲೆ ಆರಂಭಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದ್ದು, ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಜನಪ್ರತಿನಿಧಿಗಳು, ರಾಜ್ಯ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಜತೆಗೆ ಹೈಕೋರ್ಟ್‌ ನ್ಯಾಯಮೂರ್ತಿಗಳು ಬರುವ ಸಾಧ್ಯತೆ ಇದೆ. ಆಹ್ವಾನಿತರಿಗೆ ಸಂಜೆ 6 ಗಂಟೆವರೆಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ದೇವಸ್ಥಾನಕ್ಕೆ ಸುಣ್ಣ ಬಳಿಯುವುದು ಹಾಗೂ ದೇವಿ ಅಲಂಕಾರ ಮಾಡಲಾಗುತ್ತದೆ ಎಂದರು.

ಕಳೆದ ಬಾರಿ ಸುಮಾರು 5 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದರು. ಅಂದರೆ ದಿನಕ್ಕೆ 50 ಸಾವಿರ ಜನರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ವ್ಯವಸ್ಥಿತವಾಗಿ ಅನುಸರಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಕೋವಿಡ್‌ ನೋವಿನ ನಡುವೆಯೂ ಸಂಭ್ರಮವಿರಲಿ ಎಂಬ ಕಾರಣಕ್ಕೆ ₹15 ಲಕ್ಷ ವೆಚ್ಚದಲ್ಲಿ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿವಿವರಿಸಿದರು.

ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಸಂಜಯ್, ಪತ್ರಕರ್ತ ಪ್ರಸನ್ನ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT