ಬುಧವಾರ, ಆಗಸ್ಟ್ 17, 2022
25 °C
ದೇವಾಲಯ ಪ್ರದಕ್ಷಿಣೆ ಹಾಕಿ ಗೆಲುವಿಗೆ ಹರಕೆ ಕಟ್ಟಿಕೊಂಡ ಅಭ್ಯರ್ಥಿಗಳು

ಗ್ರಾಮ ಪಂಚಾಯಿತಿ ಚುನಾವಣೆ| ಮನ ಗೆಲ್ಲಲು ಕಡೆ ಕ್ಷಣದ ಕಸರತ್ತು

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮತದಾನ ದಿನ ಸಮೀಪವಾಗುತ್ತಿದ್ದಂತೆ ಮೈ ಕೊರೆಯುವ ಚಳಿಯಲ್ಲೂ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಮತಗಳಿಸಲು ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳನ್ನು ವಿದ್ಯಾವಂತ ಅಭ್ಯರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಅಭ್ಯರ್ಥಿಗಳು ಪ್ರಚಾರ ಬಿರುಸುಗೊಳಿಸಿದ್ದು, ವೈಮನಸ್ಸು ಮರೆತು ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಹಲವರು ದೇವಾಲಯ ಪ್ರದಕ್ಷಿಣೆ ಹಾಕಿ, ಗೆಲುವಿಗೆ ಹರಕೆ ಕಟ್ಟಿಕೊಂಡರು.

ಕೆಲವು ಕಡೆ ಅಭ್ಯರ್ಥಿಯ ಪತ್ನಿ, ಮಕ್ಕಳು ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರನ್ನು ಮನೆ ಮನೆಗೆ ಕಳುಹಿಸಿ ತಮ್ಮ ಪರ ಒಲವು ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನೂ ಕೆಲ ಅಭ್ಯರ್ಥಿಗಳು ನಡೆಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ರಂಗು ಹೆಚ್ಚಿದ್ದು, ನಾಯಕರೂ ಪ್ರಚಾರಕ್ಕೆ ಕೈ ಜೋಡಿಸಿರುವುದು ಅಭ್ಯರ್ಥಿಗಳ ಉತ್ಸಾಹ ಹೆಚ್ಚಿಸಿದೆ. ಕಳೆದ ಅವಧಿಯಲ್ಲಿ ಪಂಚಾಯಿತಿ ಸದಸ್ಯ, ಅಧ್ಯಕ್ಷರಾಗಿದ್ದವರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಯಾ ವಾರ್ಡ್‌ಗಳಲ್ಲಿ ಕೈ ಮುಗಿದು ಮತ ಭಿಕ್ಷೆ ಬೇಡುತ್ತಿದ್ದಾರೆ. ಅಲ್ಲದೇ ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವುದಾಗಿ ಅಭ್ಯರ್ಥಿಗಳು ವಾಗ್ದಾನ ಮಾಡುತ್ತಿದ್ದಾರೆ.

ಕೆಲವರು ಮೂಲ ಸೌಲಭ್ಯಗಳ್ನು ಒಳಗೊಂಡ ಪಟ್ಟಿ ಸಿದ್ದಪಡಿಸಿ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಭಿತ್ತಿಪತ್ರ ಮುದ್ರಿಸಿ ಮನೆ ಮನೆಗೆ ಹಂಚಿಕೆ ಮಾಡುತ್ತಿದ್ದಾರೆ. ಆಯ್ಕೆಯಾದರೆ ಮಾದರಿ ಗ್ರಾಮ ನಿರ್ಮಾಣ ಮಾಡುವ ಕನಸುಗಳನ್ನು ಜನರ ಮುಂದಿಡುತ್ತಿದ್ದಾರೆ.

ಕಾಫಿ, ಟೀ ಅಂಗಡಿ, ಬಸ್‌ ತಂಗುದಾಣಗಳು ಈಗ ರಾಜಕೀಯ ವಿಷಯ ಚರ್ಚಿಸುವ ತಾಣಗಳಾಗಿವೆ. ಬೆಳಿಗ್ಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಗುಂಪು ಮಾಡಿಕೋಂಡು ಕರತಪತ್ರ ಹಂಚುವಲ್ಲಿ ನಿರತರಾಗಿದ್ದಾರೆ. ಮತದಾರರ ಪಟ್ಟಿ ಹಿಡಿದು ಯಾರ ಮತ ಬರಲಿವೆ, ಯಾರ ಮತ ಕೈ ತಪ್ಪಲಿವೆ, ಯಾರೆಲ್ಲ ಮತ ಹಾಕಲಿದ್ದಾರೆ, ಯಾವ ಸಮುದಾಯಕ್ಕೆ ಸೇರಿದವರು, ಸಮುದಾಯದ ಮತದಾರರು ಎಷ್ಟು ಜನರಿದ್ದಾರೆ ಎಂಬ ಲೆಕ್ಕಚಾರದಲ್ಲಿ ಅಭ್ಯರ್ಥಿಗಳು ಮುಳುಗಿದ್ದಾರೆ.

ದುಡಿಮೆ ಅರಸಿ ಗುಳೆ ಹೋಗಿರುವ ಕುಟುಂಬಗಳನ್ನು ಹಾಗೂ ವಿವಿಧ ಕೆಲಸಗಳ ನಿಮಿತ್ತ ಬೇರೆ ಬೇರೆ ಊರುಗಳಿಗೆ
ತೆರಳಿದವರನ್ನು ಚುನಾವಣೆ ನಿಮಿತ್ತ ಕೈ ಮುಗಿದು ಕರೆದುಕೊಳ್ಳುವ ಸ್ಥಿತಿ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನಗರ ಪ್ರದೇಶದಿಂದ ಗ್ರಾಮಗಳಿಗೆ ಬರುವವರಿಗೆ ಯಾವುದೇ ಕಾರಣಕ್ಕೂ ಬರಬೇಡಿ ಎಂದವರೇ ಹೆಚ್ಚು. ‘ಮರೆಯದೇ ಊರಿಗೆ ಬಂದು, ತಮಗೆ ಮತ ಹಾಕಿ’ ಎಂದು ಅಭ್ಯರ್ಥಿಗಳು ಮೊಬೈಲ್‌ ಮೂಲಕ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ.

ಊರಿಗೆ ಪ್ರವೇಶ ನಿಷೇಧ ಹೇರಿದ್ದ ಹಲವು ಗ್ರಾಮಗಳಲ್ಲಿ ಮುಖಂಡರು ತಮ್ಮ ಪರ ಮತದಾನ ಮಾಡುವಂತೆ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಮತದಾರರ ಮನವೊಲಿಸುವ ಕಸರತ್ತಿನಲ್ಲಿ ತೊಡಗಿದ್ದಾರೆ. ಮತದಾನಕ್ಕೆ ಕರೆತರಲು ಕಾರಿನ ಖರ್ಚು, ಬಸ್‌ ಪ್ರಯಾಣ ದರ, ಇತರೆ ವೆಚ್ಚಗಳನ್ನು ನೀಡುವ ಆಮಿಷವೊಡ್ಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು