ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | 29 ಗುಂಟೆ ಜಮೀನಿನಲ್ಲಿ ಕಾಡು ಕೃಷಿ: ಶ್ರೀಗಂಧದ ಜೊತೆಗೆ ಸಮಗ್ರ ಬೇಸಾಯ

Published 1 ಜುಲೈ 2024, 7:26 IST
Last Updated 1 ಜುಲೈ 2024, 7:26 IST
ಅಕ್ಷರ ಗಾತ್ರ

ಹಳೇಬೀಡು: ಕೆ.ಮಲ್ಲಾಪುರ ಗ್ರಾಮ ಪ್ರವೇಶಿಸಿದ ತಕ್ಷಣ ರಸ್ತೆ ಬದಿಯಲ್ಲಿ ಶ್ರೀಗಂಧದೊಂದಿಗೆ ವಿವಿಧ ಗಿಡಗಳನ್ನು ಬೆಳೆಸಿರುವ ಅರಣ್ಯಾಧಾರಿತ ಕೃಷಿಯ ಸೊಬಗು ಅನಾವರಣಗೊಳ್ಳುತ್ತದೆ. ರೈತ ರವಿ ಎಂ.ಬಿ. ಅವರು ಸಾವಯವ ಪದ್ದತಿಯಲ್ಲಿ ಬೆಳೆಸುತ್ತಿರುವ ಸಮಗ್ರ ಕಾಡು ಕೃಷಿ ಹಸಿರಿನಿಂದ ನಳನಳಿಸುತ್ತಿದೆ.

ಜೀವ ಸವೇಸಿದರೂ ರೈತರಿಗೆ ಪಿಂಚಣಿ ಕೊಡುವವರಿಲ್ಲ. ಶ್ರೀಗಂಧ ಕೃಷಿ ಕೈಗೊಳ್ಳುವುದರಿಂದ 15 ವರ್ಷದ ನಂತರ ಹಣ ಸಂಪಾದಿಸಿ, ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಶ್ರೀಗಂಧ ಕೃಷಿಗೆ ಕೈಹಾಕಲಾಗಿದೆ. ಶ್ರೀಗಂಧದ ಗಿಡ ಕಟಾವಿಗೆ ಬರಲು 15 ವರ್ಷ ಬೇಕು. ಅಲ್ಲಿಯವರೆಗೂ ಜೀವನಾಧಾರಕ್ಕಾಗಿ 200 ಶ್ರೀಗಂಧ ಗಿಡಗಳ ಮಧ್ಯದಲ್ಲಿ ಅಲ್ಲಲ್ಲಿ ವಿವಿಧ ಗಿಡ ಬೆಳೆಸಲಾಗಿದೆ. 100 ಸೀಬೆ (ಪೇರಲ), 30 ಬಾಳೆ, 40 ಅಡಿಕೆ, 20 ತೆಂಗು ಬೆಳೆಯಲಾಗಿದೆ. ಕೇವಲ 29 ಗುಂಟೆ ಜಮೀನಿನಲ್ಲಿ ಆದಾಯ ಪಡೆದು ಸ್ವಾವಲಂಬಿ ಆಗಬಹುದು. ರೈತರೇನೂ ಕಡಿಮೆ ಅಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದು ರೈತ ರವಿ ಹೇಳುತ್ತಾರೆ.

ಜಮೀನಿನಲ್ಲಿ ಉಳುಮೆ ಮಾಡುವುದನ್ನು ರವಿ ನಿಲ್ಲಿಸಿದ್ದಾರೆ. ಪರಿಣಾಮವಾಗಿ ಭೂಮಿಯಲ್ಲಿನ ತೇವಾಂಶ ಸ್ಥಿರವಾಗಿ ನಿಂತಿದೆ. ವಿವಿಧ ಸಸ್ಯಗಳ ತ್ಯಾಜ್ಯವನ್ನು ಜಮೀನಿನಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ ರಾಸಾಯನಿಕವನ್ನು ಭೂಮಿಗೆ ಮುಟ್ಟಿಸುತ್ತಿಲ್ಲ. ಹೀಗಾಗಿ ಜಮೀನಿನಲ್ಲಿ ಎರೆಹುಳು ಸಂತತಿ ಬೆಳವಣಿಗೆಯಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಅನುಕೂಲವಾಗಿದೆ.

ಜಮೀನಿನ ಸುತ್ತ ಕಾಲುವೆ ತೆಗೆದು ತೆಂಗು, ಅಡಿಕೆ ಮರದ ಸೋಗೆ, ಬಾಳೆ ಗಿಡದ ತರಗು ತುಂಬಿಸಿ ಟ್ರಂಚಿಂಗ್, ಮಂಚಿಂಗ್ ಮಾಡಲಾಗಿದೆ. ಕಾಲುವೆಯಲ್ಲಿ ತುಂಬಿದ ತ್ಯಾಜ್ಯ ನಿರ್ವಹಣೆ ಆಗುವುದರ ಜೊತೆಗೆ ಮಣ್ಣಿನಲ್ಲಿ ಸೇರಿ ಗೊಬ್ಬರವಾಗುತ್ತಿದೆ. ತೋಟದ ಊರಿನ ಮುಂದೆ ಇದೆ. ಜೊತೆಗೆ ರವಿ ಅವರ ವಾಸದ ಮನೆ ಸಹ ತೋಟದಲ್ಲಿದೆ. ಊರಿನ ಮುಂದೆ ಇರುವ ತೋಟದ ಗಿಡಗಳು ಪೋಷಕಾಂಶಗಳಿಂದ ಬೆಳೆಯುತ್ತಿವೆ. ಹೀಗಾಗಿ ರವಿ ಅವರ ಸಾವಯವ ಕಾಡು ಕೃಷಿ ಊರಿನ ಸೊಬಗನ್ನು ಹೆಚ್ಚಿಸಿದೆ.

ಶ್ರೀಗಂಧದ ಗಿಡಗಳು ನೆಲದಲ್ಲಿ ಕಚ್ಚಿಕೊಂಡು ಸ್ವಲ್ಪ ಮೇಲೇಳುವವರೆಗೆ ನೀರುಣಿಸಬೇಕು. 15 ವರ್ಷದ ಬೆಳೆಗೆ 6 ವರ್ಷ ಸಮ ಪ್ರಮಾಣದಲ್ಲಿ ನೀರು ಕೊಟ್ಟರೆ ಸಾಕು ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ಕಡಿಮೆ ಮಳೆ ಬಿದ್ದರೂ ಶ್ರೀಗಂಧ ಗಿಡ ಬೆಳೆಯುತ್ತವೆ ಎನ್ನುವುದು ರವಿ ಅವರ ಮಾತು.

ಶ್ರೀಗಂಧ ಪರಾವಲಂಬಿ ಬೆಳೆ. ಹೀಗಾಗಿ ಶ್ರೀಗಂಧದ ಕಾಡು ಕೃಷಿ ಜೊತೆಗೆ ತೋಟದ ಬೆಳೆ ಮಾಡಿದರೆ, ಶ್ರೀಗಂಧದ ಗಿಡಗಳ ಬೆಳವಣಿಗೆಗೆ ಅನುಕೂಲ ಆಗುತ್ತದೆ. ತೋಟದ ಬೆಳೆಗಳಿಂದ ಮನೆ ಖರ್ಚಿಗೆ ಆದಾಯವೂ ಬರುತ್ತದೆ. ಶ್ರೀಗಂಧದ ಕಾಡು ಕೃಷಿಯಲ್ಲಿ ನುಗ್ಗೆ, ನಿಂಬೆ ಬೆಳೆಯುವುದಕ್ಕೂ ಅವಕಾವಿದೆ. ತೋಟದಲ್ಲಿ ಕುರಿ, ಕೋಳಿ ಸಾಕಾಣಿಕೆ ಸಹ ಮಾಡಬಹುದು ಎನ್ನುತ್ತಾರೆ ರವಿ ಎಂ.ಬಿ.

ಹೆಚ್ಚಿನ ರೈತರು ಶ್ರೀಗಂಧ ಕೃಷಿ ಕೈಗೊಂಡರೆ ಬೆಳೆ ರಕ್ಷಣೆಗೆ ಅನುಕೂಲ. ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಬಹುದು. ಶ್ರೀಗಂಧ ಕೃಷಿಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇನೆ
ರವಿ ಎಂ.ಬಿ. ಶ್ರೀಗಂಧ ಬೆಳೆಗಾರ ಕೆ.ಮಲ್ಲಾಪುರ
ಕಾಡುಕೃಷಿಯಿಂದ ಸ್ವಾವಲಂಬಿ ಆಗುವ ಜೊತೆಗೆ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಶುದ್ಧ ಆಮ್ಲಜನಕ ದೊರಕುವುದರಿಂದ ರೈತರು ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ
ಎಸ್.ಎನ್.ಯೋಗೀಶಪ್ಪ ಕಾಡು ಕೃಷಿಕ ಜಿ.ಸಾಣೇನಹಳ್ಳಿ
ವಿಷಮುಕ್ತ ಉತ್ಪಾದನೆ
ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇವೆ. ಜೀವಾಮೃತ ಹಾಗೂ ಗೋಕೃಪಾ ಅಮೃತವನ್ನು ಬೆಳೆಗೆ ಬಳಕೆ ಮಾಡುತ್ತಿದ್ದೇವೆ. ಕೀಟ ನಿಯಂತ್ರಣಕ್ಕೆ ಔಷಧ ಬಳಸುತ್ತಿಲ್ಲ. ಮನೆಯಲ್ಲಿಯೇ ತಯಾರಿಸಿದ ಹುಳಿ ಮಜ್ಜಿಗೆ ಸಿಂಪಡಣೆ ಮಾಡಿ ಕೀಟ ಹಾಗೂ ರೋಗಗಳನ್ನು ಹತೋಟಿಗೆ ತರುತ್ತಿದ್ದೇವೆ. ನಮ್ಮ ತೋಟದ ಪೇರಲ ಬಾಳೆ ವಿಷಯುಕ್ತವಾಗಿವೆ. ಹೀಗಾಗಿ ಜನರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ರವಿ ಎಂ.ಬಿ. ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT