ಮಂಗಳವಾರ, ಮೇ 18, 2021
30 °C
ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಬೇಡರ ಜಗ್ಗಿ ಗ್ರಾಮದ ಜನತೆ

ಹಾಸನ: ನಾಲ್ಕು ದಿನಕ್ಕೊಮ್ಮೆ ಒಂದು ತಾಸು ಕುಡಿಯುವ ನೀರು

ಜೆ.ಎಸ್.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬೇಸಿಗೆ ಆರಂಭದಲ್ಲಿಯೇ ಮಲೆನಾಡು ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಸಕಲೇಶಪುರ ತಾಲ್ಲೂಕಿನ ಬೇಡರಜಗ್ಲಿ ಗ್ರಾಮದಲ್ಲಿ ನಾಲ್ಕು ದಿನಗಳಿಗೊಮ್ಮೆ ಒಂದು ತಾಸು ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಡರಜಗ್ಲಿ ಗ್ರಾಮದಲ್ಲಿ ಅಂದಾಜು 40 ಮನೆಗಳಿವೆ. ಹಲವು ವರ್ಷಗಳಿಂದ ಗ್ರಾಮದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕ ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ.

ಪಕ್ಕದ ಸುಳ್ಳಕ್ಕಿ ಗ್ರಾಮದ ಕೊಳವೆ ಬಾವಿಯಿಂದ ಪೈಪ್‌ಲೈನ್‌ ಮೂಲಕ ಬೇಡರಜಗ್ಲಿ ಗ್ರಾಮಕ್ಕೆ ನೀರು ನೀಡಲಾಗುತ್ತಿದೆ. ನಾಲ್ಕು ದಿನಗಳಿಗೊಮ್ಮೆ ಒಂದು ತಾಸು ಮಾತ್ರ ಎರಡು ನಲ್ಲಿಗಳಲ್ಲಿ ನೀರು ಬಿಡಲಾಗುತ್ತಿದೆ. ನೀರು ಬಿಡುವ ಮುನ್ನವೇ ಕೊಡಗಳನ್ನು ಸಾಲಿನಲ್ಲಿ ತಂದು ಇಡುತ್ತಾರೆ. ಗ್ರಾಮದ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ಹೋದ ಸಂದರ್ಭದಲ್ಲಿ ನೀರು ತುಂಬಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಗ್ರಾಮದಲ್ಲಿ ಎರಡು ಕಡೆ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್‌ ಲೈನ್‌ ಅಳವಡಿಸಲಾಗಿದೆ. ಆದರೆ ಅದನ್ನು ಬಳಸುತ್ತಿಲ್ಲ. ಕಾರಣ ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಿದ್ದ ತೆರೆದ ಬಾವಿ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. 

‘ಕಳೆದ ವರ್ಷ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಗೆ ತೆರಳಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಮತ್ತೆ ಮನವಿ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಗ್ರಾಮಕ್ಕೆ ಮತ್ತೊಂದು ತೆರೆದ ಬಾವಿ ಅಥವಾ ಕೊಳವೆ ಬಾವಿ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದು ಬೇಡರಜಗ್ಲಿ ಗ್ರಾಮದ ಅಭಿಲಾಷ್‌, ದಿಲೀಪ್‌, ಭರತ್‌, ಮಲ್ಲೇಶ್‌, ಪುಟ್ಟರಾಜು, ಈರಯ್ಯ, ಕಾಳಯ್ಯ, ರಾಜಮ್ಮ, ದಾಕ್ಷಾಯಿಣಿ, ಜಯಮ್ಮ ಆಗ್ರಹಿಸಿದ್ದಾರೆ.

‘ಬೇಡರಜಗಲಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು. ಕೆಲ ವರ್ಷದ ಹಿಂದೆ ಒಂದು ಕೊಳವೆ ಬಾವಿ ಕೊರೆದಿದ್ದು, ಅದಕ್ಕೆ ಮೋಟರ್‌ ಅಳವಡಿಸುವ ವೇಳೆ ಮಣ್ಣು ಸಡಿಲಗೊಂಡು ಕುಸಿತವಾಗಿದೆ. ಗ್ರಾಮದ ಸಮಸ್ಯೆಗಳನ್ನು ಆದರ್ಶ ಗ್ರಾಮ ಯೋಜನೆಯಡಿ ಬಗೆಹರಿಸಲಾಗುವುದು’ ಎಂದು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಡಿ. ದರ್ಶನ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು