ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಚ್‌ಎಐ ಯೋಜನಾ ನಿರ್ದೇಶಕರಿಗೆ ತರಾಟೆ

ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಪ್ರಜ್ವಲ್‌ ರೇವಣ್ಣ
Last Updated 16 ಏಪ್ರಿಲ್ 2021, 13:31 IST
ಅಕ್ಷರ ಗಾತ್ರ

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ ಹಾಗೂ ಸಮರ್ಪಕಮಾಹಿತಿ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಯೋಜನಾ ನಿರ್ದೇಶಕ (ಎನ್‌ಎಚ್ಎಐ) ಎ.ಕೆ. ಜಾನ್‌ ಬಜ್ಹ್‌ ಅವರನ್ನು ಸಂಸದ ಪ್ರಜ್ವಲ್ ರೇವಣ್ಣ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಹಾಸನ ಬೈಪಾಸ್‌ ರಸ್ತೆಯಿಂದ ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ವರೆಗಿನ ಕಾಮಗಾರಿ 2019ರ ಮಾರ್ಚ್ಅಂತ್ಯಕ್ಕೆ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಗುತ್ತಿಗೆದಾರ ಕಂಪನಿಯಸಮಸ್ಯೆ ಕಾರಣ ಕಾಮಗಾರಿ ವಿಳಂಬವಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಶೇಕಡಾ 25ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲ ಆರಂಭವಾದರೆ ಮಲೆನಾಡು ಭಾಗದಲ್ಲಿ ಭೂ ಕುಸಿತ ಉಂಟಾಗುತ್ತದೆ. ಇವರೆಗೂ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಕಾಮಗಾರಿ ವಿಳಂಬಕ್ಕೆ ಕಾರಣವನ್ನೂ ತಿಳಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ₹573 ಕೋಟಿ ವೆಚ್ಚದ 45.18 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷವಾದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಗುತ್ತಿಗೆ ಸಂಸ್ಥೆಯನ್ನು ಹೊಣೆ ಮಾಡಬೇಕಾಗುತ್ತದೆ.ಐಸೋಲೆಕ್ಸ್‌ ಕಂಪನಿ ದಿವಾಳಿ ಬಳಿಕ ರಾಜಕಮಾಲ್‌ ಕಂಪನಿಗೆ ಕಾಮಗಾರಿ ನೀಡಲಾಗಿದೆ. ಒಂದುಕಿ.ಲೋ ಮೀಟರ್ ರಸ್ತೆ ನಿರ್ಮಾಣಕ್ಕೆ ₹12.70 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈವರೆಗೂ ಗುತ್ತಿಗೆದಾರರಿಗೆ ಎಷ್ಟು ಬಾರಿ ನೋಟಿಸ್‌ ನೀಡಲಾಗಿದೆ? ಎಷ್ಟು ದಂಡ ವಿಧಿಸಲಾಗಿದೆ? ‌ಸಕಲೇಶಪುರ ಸೇತುವೆಶಿಥಿಲಗೊಂಡಿದೆ. ಈ ಮಾರ್ಗದಲ್ಲಿ ಬೈಪಾಸ್‌, ಮೇಲ್ಸೇತುವೆ ನಿರ್ಮಾಣವಾಗಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು.

‘ಈವರೆಗೂ 10.17 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ. 2020ರ ಅಕ್ಟೋಬರ್‌ ಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಭೂ ಸ್ವಾಧೀನ ಪರಿಹಾರ ಸೇರಿದಂತೆಕೆಲ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಆದರೆ ದಂಡ ವಿಧಿಸಿಲ್ಲ. ಸಾಧ್ಯವಾದಷ್ಟು ಬೇಗ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದುಜಾನ್‌ ‌ಉತ್ತರಿಸಿದರು.

‘ಶಿರಾಡಿ ಘಾಟ್‌ ಸುರಂಗ ಮಾರ್ಗ ಸಂಬಂಧ ಡಿಪಿಆರ್ ಸಿದ್ದಗೊಂಡಿದ್ದು, ಅರಣ್ಯ ಇಲಾಖೆ ಕ್ಲಿಯರೆನ್ಸ್‌
ನೀಡಬೇಕಿದೆ ’ ಎಂದರು.

ಅಧಿಕಾರಿ ಉತ್ತರಕ್ಕೆ ತೃಪ್ತರಾಗದ ಜಿಲ್ಲಾಧಿಕಾರಿ ಆರ್‌.ಗಿರೀಶ್, ‘ಮಳೆಗಾಲ ಆರಂಭವಾದರೆ ಸಾಕಷ್ಟು ಸಮಸ್ಯೆ ಆಗಲಿದೆ. ನಿತ್ಯ ಗ್ಯಾಸ್‌ ಲಾರಿ, ಗೂಡ್ಸ್‌ ಲಾರಿ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆಯಿಲ್‌ ಟ್ಯಾಂಕರ್‌ಗಳು ಮಗುಚಿ ಬಿದ್ದಿರುವ ಉದಾಹರಣೆ ಇದೆ. ನೆಪ ಹೇಳದೆ ಕೆಲಸ ತ್ವರಿತಗೊಳಿಸಬೇಕು ಎಂದುಸೂಚಿಸಿದರು.

‘ಸ್ಥಳೀಯ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಜತೆ ಏ. 27ರಂದು ಕಾಮಗಾರಿ ವೀಕ್ಷಣೆ ಮಾಡಲಾಗುವುದು.ಮಳೆಗಾಲ ಪ್ರಾರಂಭಕ್ಕೆ ಮುನ್ನ ಮುಂದಿನ 2 ತಿಂಗಳು ಗರಿಷ್ಠ ಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕು. ಕಾಮಗಾರಿಯಿಂದ ಅಕ್ಕಪಕ್ಕದಲ್ಲಿ ಯಾವುದೇ ಬಿರುಕು, ಮನೆ ಕುಸಿತಗಳಾಗದಂತೆ ಮುಂಜಾಗ್ರತೆ ವಹಿಸಿ, ರಸ್ತೆ ಪಕ್ಕದಲ್ಲಿರುವ ಮನೆಗಳು ಹಾನಿಗೀಡಾಗಿದ್ದರೆ ಪರಿಹಾರ ನೀಡಬೇಕು. ಅಗತ್ಯವಿರುವ ಕಡೆ ಆ ಮನೆಗಳನ್ನು ಯೋಜನಾ ವ್ಯಾಪ್ತಿಗೆ ಸೇರಿಸಿ ಭೂ-ಸ್ವಾಧೀನ ಪಡಿಸಿಕೊಳ್ಳಿ’ ಎಂದು ಪ್ರಜ್ವಲ್‌ ಸೂಚಿಸಿದರು.

ಇದೇ ವೇಳೆ ಹಾಸನ-ಬೇಲೂರು ನಡುವೆ ಚತುಷ್ಪದ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಲಿಂಗೇಶ್ ಒತ್ತಾಯಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಅರಸೀಕೆರೆ ತಾಲ್ಲೂಕಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಲೋಪಗಳಿದ್ದು, ಮುಂದಿನ ಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುಮಕೂರು ವಿಭಾಗದ ಭೂ ಸ್ವಾಧೀನಾಧಿಕಾರಿಗಳು ಹಾಗೂ ಯೋಜನಾ ಮುಖ್ಯಸ್ಥರನ್ನು ಆಹ್ವಾನಿಸಿ ವಿವರ ಪಡೆಯಬೇಕು ಎಂದು ಮನವಿ ಮಾಡಿದರು.

ಕೇಂದ್ರೀಯ ರಸ್ತೆ ನಿಧಿ (ಸಿಆರ್‌ಎಫ್‌)ಯನ್ನು ಅರಸೀಕೆರೆ ತಾಲ್ಲೂಕಿನ ನೀಡಿಲ್ಲ. ನಾವು ಕೇಂದ್ರಕ್ಕೆ ತೆರಿಗೆ
ಪಾವತಿಸುತ್ತಿದ್ದೇವೆ. ಅನ್ಯಾಯ ಮಾಡುವುದು ಸರಿಯಲ್ಲ ಎಂದು ಶಿವಲಿಂಗೇಗೌಡ ಬೇಸರವ್ಯಕ್ತಪಡಿಸಿದರು.

‘ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅರ್ಚನಾ ಅವರು ಕಾಮಗಾರಿಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇವರ ಅವಧಿಯಲ್ಲಿ ಯಾವ ರೀತಿ ಕಾಮಗಾರಿಗಳುನಡೆದಿವೆ ಎಂಬುದು ಗೊತ್ತು. ವಿಚಕ್ಷಣಾ ದಳಕ್ಕೆ ಎಲ್ಲ ಮಾಹಿತಿ ನೀಡಿ ತನಿಖೆ ನಡೆಸುವಂತೆ ಪತ್ರ ಬರೆಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ ಈ ಬಾರಿ ಎರಡು ಕಾಮಗಾರಿಗಳನ್ನು ಅರಸೀಕೆರೆ ತಾಲ್ಲೂಕಿಗೆ ಮಂಜೂರು ಮಾಡುವಂತೆ’ ಪ್ರಜ್ವಲ್‌
ಅವರು ಅಧಿಕಾರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌, ಶಾಸಕ ಸಿ.ಎನ್‌.ಬಾಲಕೃಷ್ಣ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT