ಗುರುವಾರ , ಮೇ 26, 2022
28 °C
‌ಜೀವನ ನಿರ್ವಹಣೆ ಸಾಧ್ಯವಾಗದೆ ಬೇರೆ ವೃತ್ತಿಯತ್ತ ಹೊರಳುತ್ತಿರುವ ಹಲವರು

ಹಾಸನ: ಇಂಧನ ದರ ಏರಿಕೆ: ಸಂಕಷ್ಟದಲ್ಲಿ ಆಟೊ ಚಾಲಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಲಾಕ್‌ಡೌನ್‌ ನಿಂದ ತತ್ತರಿಸಿದ್ದ ಆಟೊ ಚಾಲಕರಿಗೆ ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜೀವನ ನಿರ್ವಹಣೆ ಸಾಧ್ಯವಾಗದೇ ಅನೇಕರು ತಮ್ಮ ವೃತ್ತಿ ಬಿಟ್ಟು ಬೇರೆ ವೃತ್ತಿ ಕಡೆ ಹೊರಳುತ್ತಿದ್ದಾರೆ.

ಟ್ಯಾಕ್ಸಿ, ಟ್ರಾವೆಲ್ಸ್‌, ಆಟೊ ಬಾಡಿಗೆ ದರ ಏರಿಕೆಯಾಗಿದ್ದು, ಪ್ರವಾಸಿಗರು ಹಾಗೂ ಜನರು ಹೈರಾಣಾಗಿದ್ದಾರೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಾಗೂ ಪ್ರಯಾಣಿಕರು ದೂರದ ಊರು, ಶುಭ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರಗಳು, ಯಾತ್ರೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಟ್ಯಾಕ್ಸಿ, ಟ್ರಾವೆಲ್ಸ್‌ ಅವಲಂಬಿಸಿದ್ದಾರೆ.

ಜಿಲ್ಲೆಯಲ್ಲಿ 13,200 ಆಟೊಗಳಿವೆ. ಹಾಸನ ನಗರದಲ್ಲಿಯೇ ನಿತ್ಯ 3,625 ಆಟೊಗಳು  ಓಡುತ್ತಿವೆ. ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ಬೆಲೆ ಹೆಚ್ಚಾದರೂ ಆಟೊ ಪ್ರಯಾಣ ದರ ಹೆಚ್ಚಿಸದೇ ಹಳೆಯ ದರದಲ್ಲೇ ವಾಹನ ಓಡಿಸುತ್ತಿದ್ದಾರೆ. ಚಾಲಕರು ಹೆಚ್ಚಿನ ಹಣ ಕೇಳಿದರೆ ಪ್ರಯಾಣಿಕರು ವಾಗ್ವಾದಕ್ಕೆ ಇಳಿಯುತ್ತಾರೆ. ಅಲ್ಲದೇ ಹೆಚ್ಚು ದರ ಹೇಳಿದರೆ ಆಟೊ ಹತ್ತಲೂ ಹಿಂದೆ, ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.

‘ಪ್ರತಿನಿತ್ಯ 3–4 ಬಾಡಿಗೆ ಸಿಗುವುದೇ ಕಷ್ಟ. ಹೀಗಿರುವಾಗ ಹೆಚ್ಚಿಗೆ ಬಾಡಿಗೆ ಕೇಳಿದರೆ ಜನರು ಬರುವುದೇ ಇಲ್ಲ, ಹೀಗಾಗಿ ದರ ಹೆಚ್ಚಳ ಮಾಡಿಲ್ಲ. ‌ಈಚೆಗೆ ಆಟೊ ಚಾಲಕರು ಗ್ಯಾಸ್‌ ಆಟೊಗಳನ್ನೇ ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಚಾಲಕ ರಮೇಶ್.

ನಗರ ಸುತ್ತಮುತ್ತಲ ಕೆಲ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಆಟೊಗಳಲ್ಲಿ ಬರುತ್ತಿದ್ದರು. ಬಾಡಿಗೆ ದರ ದುಪ್ಪಟ್ಟು ಹೆಚ್ಚಳ ಮಾಡಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಬೈಕ್‌ನಲ್ಲಿ ಶಾಲೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಆಟೊಗಳು ಮೀಟರ್‌ ರಹಿತವಾಗಿ ಓಡುತ್ತವೆ. ಆಟೊಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾವ ಇದ್ದರೂ ಪೊಲೀಸರು ನಿಯಮವನ್ನೂ ಜಾರಿಗೊಳಿಸಿಲ್ಲ. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ಚಾಲಕರು ವೃತ್ತಿ ಬಿಟ್ಟು ಬೇರೆಡೆಗೆ ಮುಖ ಮಾಡಿದ್ದರು.
ಸಾಲದ ಕಂತು, ವಿಮೆ ಕಟ್ಟಲು ಪರದಾಡುವ ಸ್ಥಿತಿ ಇದೆ. ಕೋವಿಡ್‌ ಲಾಕ್‌ಡೌನ್‌ ಗೂ ಮುಂಚೆ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದವ ಶೇ 50ರಷ್ಟು ಮಂದಿ ಇಂದು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ.

ಕೋವಿಡ್ ಸಂಕಷ್ಟದ ಜತೆಗೆ ಇಂಧನ ದರ ಏರಿಕೆಯಾಗಿರುವುದು ಆಟೊ ಚಾಲಕರಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಅರಕಲಗೂಡು‌ ತಾಲ್ಲೂಕಿನಲ್ಲಿ ಕನಿಷ್ಠ ದರ ಹೆಚ್ಚಳವಾಗಿರುವ ಕಾರಣ ಜನರು ಆಟೊ ಹತ್ತಲು ಹಿಂದೆ ಮುಂದೆ ನೋಡುತ್ತಾರೆ. ಬಹಳಷ್ಟು ಜನರು ಸ್ವಂತ ವಾಹನ ಹೊಂದಿರುವ ಕಾರಣ ಆಟೊ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿ ಮುಖವಾಗಿದೆ.

‘ಇಂಧನ ದರ ಗಗನಕ್ಕೇರಿದ ಕಾರಣ ಪ್ರಯಾಣದ ದರ ಏರಿಕೆಯೂ ಅನಿವಾರ್ಯವಾಗಿದೆ. ಇದರ ಪರಿಣಾಮ ನಿತ್ಯದ ಸಂಪಾದನೆಯ ಮೇಲೆ ಹೊಡೆತ ಬಿದ್ದಿದೆ, ಬೆಳಗಿನಿಂದ ಸಂಜೆಯವರೆಗೆ ದುಡಿದರೂ ₹ 300 ಸಂಪಾದನೆ ಆಗುತ್ತಿಲ್ಲ. ಇದರಿಂದ ವಾಹನಕ್ಕೆ ಇಂಧನ ಹಾಕಿಸುವುದೋ, ಕುಟುಂಬ ನಿರ್ವಹಣೆ ನಡೆಸುವುದೋ, ವಾಹನದ ಸಾಲದ ಮೇಲಿನ ಬಡ್ಡಿ ತುಂಬುವುದೋ ತಿಳಿಯುತ್ತಿಲ್ಲ. ಹೀಗಾಗಿ ಆಟೋಗಳನ್ನು ಮಾರಿ ಬೇರೆ ಉದ್ಯೋಗ ಅರಸುವತ್ತ ಬಹಳಷ್ಟು ಚಾಲಕರು ಚಿಂತನೆ ನಡೆಸಿದ್ದಾರೆ’ ಎಂದು ಅರಕಲಗೂಡು ಪಟ್ಟಣದ ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅಳಲು ತೋಡಿಕೊಂಡರು.

‘ಸಂಪಾದನೆ ಕಡಿಮೆಯಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಚಾಲಕರ ಕುಟುಂಬದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ’ ಎಂದು ಚಾಲಕ ನಾಗರಾಜ್ ನೋವು ತೋಡಿ ಕೊಂಡರು.

ಹಳೇಬೀಡಿಗೆ ಬರುವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ತೆರಳಲು ಆಟೊ ಬಾಡಿಗೆ ಕೇಳುತ್ತಿದ್ದರು.ಆದರೆ ಈಗ ಊರಿನಿಂದ ಬಾಡಿಗೆ ವಾಹನ, ಸ್ವಂತ ವಾಹನ ಮಾಡಿಕೊಂಡು ಬಂದು ಪ್ರವಾಸಿ ತಾಣ ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ಆಟೊಗಳಿಗೆ ಬಾಡಿಗೆ ಕಡಿಮೆ ಆಗಿದೆ ಎನ್ನುತ್ತಾರೆ ಚಾಲಕರು

ಚನ್ನರಾಯಪಟ್ಟಣ ತಾಲ್ಲೂಕು ಕೇಂದ್ರದಲ್ಲಿ 700 ಕ್ಕೂ ಹೆಚ್ಚು ಆಟೊಗಳಿವೆ. ಅವುಗಳಲ್ಲಿ ಬಹುತೇಕ ಆಟೊಗಳಿಗೆ ಗ್ಯಾಸ್ ಅಳವಡಿಸಲಾಗಿದೆ. ಪಟ್ಟಣದಲ್ಲಿ ಕನಿಷ್ಠ ದರ ₹ 30 ಪಡೆಯುತ್ತಾರೆ.

ಆಟೊ ಗ್ಯಾಸ್ ದರ ಹೆಚ್ಚಳವಾಗಿದ್ದರೂ ಚಾಲಕರಿಗೆ ಲಾಭವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ  ಆರ್ಥಿಕವಾಗಿ ತೊಂದರೆ ಅನುಭವಿಸಿದರು.
ಬೇರೆ ವೃತ್ತಿ ಗೊತ್ತಿಲ್ಲದಿರುವುದರಿಂದ ಜೀವನ ನಿರ್ವಹಣೆಗೆ ಆಟೊ ವೃತ್ತಿ ಅವಲಂಬಿಸ ಲಾಗಿದೆ ಎನ್ನುತ್ತಾರೆ ಆಟೊ ಚಾಲಕರು.

ನಿರ್ವಹಣೆ: ಕೆ.ಎಸ್‌.ಸುನಿಲ್‌. ಪೂರಕ ಮಾಹಿತಿ; ಜೆ.ಎಸ್‌.ಮಹೇಶ್‌, ಜಿ.ಚಂದ್ರಶೇಖರ್, ಎಚ್.ಎಸ್.ಅನಿಲ್ ಕುಮಾರ್, ಸಿದ್ದರಾಜು, ರಂಗನಾಥ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು