ಆಲೂರು: ಕದಾಳು ಗ್ರಾಮದಲ್ಲಿ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿಗೆ ಕಳೆನಾಶಕ ಸಿಂಪಡಣೆ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಶುಂಠಿ ನಾಶವಾಗಿದೆ.
ರೈತ ನಿಂಗರಾಜು ಮತ್ತು ಕೆಂಚೇಗೌಡ ಸಹೋದರರು ಎರಡು ಎಕರೆಯಲ್ಲಿ ಶುಂಠಿ ಬೆಳೆದಿದ್ದರು. ಆರೂವರೆ ತಿಂಗಳ ಬೆಳೆಗೆ, ಮೂರು ದಿನಗಳ ಹಿಂದೆ ರಾತ್ರಿ ವೇಳೆ ಕಳೆನಾಶಕ ಸಿಂಪಡಣೆ ಮಾಡಲಾಗಿದೆ. ಇದರಿಂದ ಬೆಳೆ ಬಾಡುತ್ತಿದ್ದು, ಕೊಳೆಯಲು ಆರಂಭಿಸಿದೆ.
‘ಅಣ್ಣನ ಜೊತೆ ಸೇರಿ ಎರಡು ಎಕರೆ ಜಮೀನಿನಲ್ಲಿ ₹ 8 ಲಕ್ಷ ಸಾಲ ಪಡೆದು, ಸುಮಾರು 28 ರಿಂದ 30 ಚೀಲ ಶುಂಠಿ ಬಿತ್ತನೆ ಮಾಡಲಾಗಿತ್ತು. ಎರಡು ತಿಂಗಳು ಕಳೆದಿದ್ದರೆ ಹದಭರಿತ ಶುಂಠಿ ಕೀಳಬಹುದಿತ್ತು. ಸದ್ಯದ ಬೆಲೆಗೆ ಲಕ್ಷಾಂತರ ರೂಪಾಯಿ ಆದಾಯ ಸಿಗುತ್ತಿತ್ತು. ಸಾಲ ತೀರಿಸಬಹುದು ಎಂದು ನಿರೀಕ್ಷಿಸಿದ್ದೆವು. ಅದರೆ ಕಿಡೀಗೆಡಿಗಳು ಮೋಸ ಮಾಡಿದ್ದಾರೆ’ ಎಂದು ರೈತ ಕೆಂಚೇಗೌಡ ಎಂದು ತಿಳಿಸಿದರು.
‘ಬೆಳೆ ನಾಶವಾಗಿರುವುದರಿಂದ ನಮ್ಮ ಬದುಕು ಬೀದಿಗೆ ಬಂದಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ನಷ್ಟ ಭರಿಸಬೇಕು’ ಎಂದು ರೈತ ನಿಂಗರಾಜು ಅವರ ಪತ್ನಿ ಮಂಜುಳಾ ಮನವಿ ಮಾಡಿದರು.
ಈ ಕುರಿತು ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.