ಭಾನುವಾರ, ಆಗಸ್ಟ್ 1, 2021
27 °C
ಕೋವಿಡ್‌‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ

ಹಾಸನ | ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ: ಡಾ.ಕೃಷ್ಣಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾಸನ: ಸಾಮಾಜಿಕ ಜಾಲತಾಣಗಳಲ್ಲಿ ಹಾಸನದ ಕೋವಿಡ್ ಆಸ್ಪತ್ರೆಯ ಕೊರೊನಾ ಸೋಂಕಿತರ ಪರಿಸ್ಥಿತಿ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಆರ್‌. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ ನಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಗಳು ಹಾಸನದ ಕೋವಿಡ್ ಆಸ್ಪತ್ರೆಗೆ ಸಂಬಂಧಿಸಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅವರಿಗೆ ವ್ಯವಸ್ಥಿತ ವೈದ್ಯಕೀಯ ಸೌಲಭ್ಯ ಒದಗಿಸಲು ನುರಿತ ವೈದ್ಯರು ಮತ್ತು ಸಿಬ್ಬಂದಿ ತಂಡಗಳಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸೋಂಕಿತರ ಅವಶ್ಯಕತೆಗೆ ಅನುಗುಣವಾಗಿ 50 ಹಾಸಿಗೆಗಳ ಐಸಿಯು ಹಾಗೂ ಎಲ್ಲ ಹಾಸಿಗೆಳಿಗೆ ಆಮ್ಲಜನಕ ಸಂಪರ್ಕ ಕಲ್ಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಮೂಲಕವೂ ಪ್ರತಿಯೊಬ್ಬ ಸೋಂಕಿತರ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಊಟೋಪಚಾರ, ಚಿಕಿತ್ಸಾ ಸೌಲಭ್ಯ, ಸ್ವಚ್ಛತೆ ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ನಿಗಾವಹಿಸಲಾಗುತ್ತಿದೆ ಎಂದರು.

ಸೋಂಕಿತರನ್ನು 36 ದಿನ ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಗಿದೆ ಎಂದು ಕೆಲವು ವಿಡಿಯೊಗಳಲ್ಲಿ ಪ್ರಚಾರ ಮಾಡಿರುವುದು ಕಂಡು ಬಂದಿದೆ. ಆದರೆ, ಈ ಹಿಂದೆ ಸರ್ಕಾರದ ಆದೇಶದಂತೆ ಕೇವಲ 24 ದಿನಗಳು ಮಾತ್ರ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗುತ್ತಿತ್ತು. ಒಂದು ವೇಳೆ ತಪಾಸಣೆ ಮಾಡಿದ ನಂತರ ವ್ಯಕ್ತಿಯಲ್ಲಿ ಸೋಂಕು ಇಲ್ಲವೆಂದು ದೃಢಪಟ್ಟಲ್ಲಿ ಅವರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಹೊಸ ಮಾರ್ಗಸೂಚಿ ಪ್ರಕಾರ ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿದ್ದಲ್ಲಿ ಅವರನ್ನು ಅವರ ಮನೆಯಲ್ಲಿಯೇ ಕ್ವಾರಂಟೈನ್‌ ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಿಮ್ಸ್ ಬೋಧಕ ಆಸ್ಪತ್ರೆಯನ್ನು ನಿಗದಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, 400 ಹಾಸಿಗೆಗಳ ಸೌಲಭ್ಯವನ್ನು ಒದಗಿಸಲಾಗಿದೆ. ಅದರಲ್ಲಿ 50 ಹಾಸಿಗೆಗಳು ತೀವ್ರ ನಿಗಾ ಘಟಕ ಹಾಗೂ 350 ಹಾಸಿಗೆಗಳು ಆಮ್ಲಜನಕ ಸೌಲಭ್ಯ ಮತ್ತು ಸಾಮಾನ್ಯ ವಾರ್ಡ್‍ಗಳನ್ನು ಒಳಗೊಂಡಿರುತ್ತದೆ. ನೆಲಮಹಡಿಯಲ್ಲಿ ಫೀವರ್‌ ಕ್ಲಿನಿಕ್‌ ನಡೆಸಲಾಗುತ್ತಿದ್ದು, ಪಕ್ಕದಲ್ಲೇ ಗಂಟಲು, ಮೂಗು ದ್ರವ ಪರೀಕ್ಷೆಗಾಗಿ ಮಾದರಿ ತೆಗೆದುಕೊಂಡು ಹಿಮ್ಸ್‌ನ ವಿಆರ್‌ಡಿಎಲ್‌ ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ನಿತ್ಯ 72 ಜನ ಶುಶ್ರೂಷಕರು, 18 ತಜ್ಞ ವೈದ್ಯರು, 30 ವಾರ್ಡ್ ಸಹಾಯಕರು ಮತ್ತು 30 ಸ್ವಚ್ಛತಾ ಸಿಬ್ಬಂದಿ ಬೆಳಿಗ್ಗೆ 6 ರಿಂದ 12 ಗಂಟೆಗಳ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಆಗತ್ಯವಾಗಿ ಬೇಕಾಗಿರುವ ರಕ್ಷಾ ಸಾಧನಗಳನ್ನು ಧರಿಸಲು ಹಾಗೂ ವಿಸರ್ಜಿಸಲು ಪ್ರತ್ಯೇಕ ಸೌಲಭ್ಯಗಳನ್ನು ಮಾಡಲಾಗಿದೆ ಎಂದರು.

ರೋಗಿಗಳಿಗೆ ನಿತ್ಯ ಪೌಷ್ಟಿಕ ಆಹಾರವನ್ನು ಸರ್ಕಾರದ ಮೆನುವಿನಂತೆ ನೀಡುತ್ತಿದ್ದು, ಸೂಕ್ತ ಚಿಕಿತ್ಸೆ, ಸ್ನಾನ ಹಾಗೂ ಶೌಚಕ್ಕೆ ಅತಿ ಹೆಚ್ಚು ಗಮನ ಕೊಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು