ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಶಾಲಾ ಕೊಠಡಿಗಳಿಗೆ ಬೇಕಿದೆ ದುರಸ್ತಿ ಭಾಗ್ಯ

ಕೆಲವೆಡೆ ಕೋಣೆಗಳ ಚಾವಣಿ ಕುಸಿತ, ಗೋಡೆಗಳು ಶಿಥಿಲ; ಅನುದಾನ ಬಿಡುಗಡೆಗೆ ಸರ್ಕಾರದತ್ತ ನೋಟ
Published 17 ಜೂನ್ 2024, 6:40 IST
Last Updated 17 ಜೂನ್ 2024, 6:40 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಪ್ರಾರಂಭವಾಗಿ, ಹಲವು ದಿನಗಳು ಕಳೆದಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯೊಂದಿಗೆ ಸಿಹಿ ಹಂಚಿ ಸ್ವಾಗತಿಸಲಾಗಿದೆ.

ಈ ನಡುವೆ ಮಳೆಗಾಲವೂ ಆರಂಭವಾಗಿದ್ದು, ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಶಾಲೆ ಮತ್ತು 1700 ಕ್ಕೂ ಹೆಚ್ಚು ಪ್ರಾಥಮಿಕ‌ ಮತ್ತು ಪ್ರೌಢಾಶಾಲಾ ಕೊಠಡಿಗಳು ದುರಸ್ತಿ ಆಗಬೇಕಿದೆ. ಜಿಲ್ಲೆಯ 8 ತಾಲ್ಲೂಕಿನಲ್ಲಿ ದುರಸ್ತಿ ಅವಶ್ಯಕತೆ ಇರುವ ಶಾಲೆಗಳು ಹಾಗೂ ಕೊಠಡಿಗಳನ್ನು ಗುರುತಿಸಲಾಗಿದ್ದು, ಸರ್ಕಾರದಿಂದ ಅಗತ್ಯ ಅನುದಾನಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ದುರಸ್ತಿ ಅವಶ್ಯಕತೆ ಇರುವ 665 ಪ್ರಾಥಮಿಕ ಶಾಲೆಗಳಿದ್ದು, ದುರಸ್ತಿ ಅವಶ್ಯಕತೆ ಇರುವ 1,754 ಕೊಠಡಿಗಳನ್ನು ಗುರುತಿಸಲಾಗಿದೆ. ₹23.16 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ದುರಸ್ತಿ ಅವಶ್ಯಕತೆ ಇರುವ 51 ಪ್ರೌಢಶಾಲೆಗಳಿದ್ದು, 153 ಕೊಠಡಿಗಳು ದುರಸ್ತಿ ಹಂತದಲ್ಲಿವೆ. ಇದಕ್ಕಾಗಿ ₹3.12 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು 144 ಶಾಲೆ ಹಾಗೂ 290 ಶಾಲಾ ಕೊಠಡಿಗಳ ದುರಸ್ತಿ ಆಗಬೇಕಿದ್ದು, ಹೊಳೆನರಸೀಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ 13 ಶಾಲೆ ಹಾಗೂ 20 ಶಾಲಾ ಕೊಠಡಿಗಳು ದುರಸ್ತಿ ಕಾಣಬೇಕಿದೆ.

ಕೆಲ ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿದ್ದರೂ ಅಂತಹ ಕೊಠಡಿಗಳಲ್ಲಿಯೇ ಪಾಠ ಪ್ರವಚನ ನಡೆಯುತ್ತಿರುವ ಬಗ್ಗೆಯೂ ಸ್ಥಳೀಯರಿಂದ ದೂರುಗಳು ಕೇಳಿ ಬರುತ್ತಿದ್ದು, ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಹಿರೀಸಾವೆ ಹೋಬಳಿಯ ಎಲ್ಲ ಶಾಲೆಗಳಲ್ಲಿ ಪ್ರಾರಂಭದ ದಿನದಿಂದ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಾಗಿದೆ. ಆದರೆ ಹೋಬಳಿಯ ಹಲವು ಸರ್ಕಾರಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳ ಕಟ್ಟಡಗಳ ದುರಸ್ತಿಯಾಗಬೇಕಿದೆ.

ಹಿರೀಸಾವೆ ಶಾಸಕರ ಮಾದರಿ ಸರ್ಕಾರಿ ಹಿರಿಯ ಬಾಲಕಿಯರ ಶಾಲೆ, ಕಿರೀಸಾವೆ, ಬ್ಯಾಡರಹಳ್ಳಿ, ಆಯಾರಹಳ್ಳಿ, ಬೊಮ್ಮೇನಹಳ್ಳಿ, ಮತಿಘಟ್ಟ, ದಿಡಗ ಪ್ರೌಢಶಾಲೆ, ಉಳ್ಳಾವಳ್ಳಿ, ಡಿ.ತುಮಕೂರು, ನಾಗನಹಳ್ಳಿ, ಉಂಗರಗೆರೆ, ಮೂಕಿಕೆರೆ ಸೇರಿದಂತೆ ಹಲವು ಗ್ರಾಮಗಳ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಕೊಠಡಿಗಳು ಮತ್ತು ಚಾವಣಿ ಶಿಥಿಲವಾಗಿವೆ. ಎರಡು ವರ್ಷದಿಂದ ದುರಸ್ತಿ ಮಾಡಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ನವೀಕರಣ ಮಾತ್ರ ಆಗಿಲ್ಲ. ಹಲವು ಶಾಲೆಗಳ ಆವರಣದಲ್ಲಿ ಗಿಡಗಂಟಿಗಳು ಬೆಳೆದಿವೆ. ಸ್ವಚ್ಛತೆ ಇಲ್ಲ. ಶೌಚಾಲಯದ ಸಮಸ್ಯೆಯೂ ಕೆಲವು ಶಾಲೆಗಳಲ್ಲಿದೆ.

ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಮೂರು ಕಟ್ಟಡಗಳಿವೆ. ಪ್ರಾಥಮಿಕ ಹಾಗೂ ಪಿಯುಸಿ ವಿಭಾಗ ಹೊಸ ಕಟ್ಟಡಗಳಲ್ಲಿ ಸಕ್ರಿಯವಾಗಿದೆ. ಆದರೆ ಪ್ರೌಢಶಾಲಾ ವಿಭಾಗ ಹಳೆಯ ಕಟ್ಟಡದಲ್ಲಿದೆ. ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ಶಾಲಾಭಿವೃದ್ದಿ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ ಸೋರುವುದು ತಪ್ಪಿದೆ. ಆದರೂ ಕಟ್ಟಡಕ್ಕೆ ಹೊಸದಾಗಿ ಸಿಮೆಂಟ್ ಗಿಲಾವ್ ಮಾಡಿಸಿ, ಸುಣ್ಣಬಣ್ಣ ಮಾಡಿಸುವತ್ತ, ಜನಪ್ರತಿನಿಧಿಗಳು ಹೆಜ್ಜೆ ಹಾಕಬೇಕಾಗಿದೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳು.

ಬಸ್ತಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. 30 ಮಕ್ಕಳು ಕಲಿಯುತ್ತಿರುವ ಶಾಲೆಯನ್ನು ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಹಳೆಯ ಕಟ್ಟಡಕ್ಕೆ ಬರಬೇಕಾಗಿದೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿಯೂ ಬಸ್ತಿಹಳ್ಳಿ ಗ್ರಾಮಸ್ಥರು ಶಾಲೆ ಉಳಿಸಿಕೊಂಡಿದ್ದಾರೆ. ಕಟ್ಟಡ ತೆರವು ಮಾಡಿ, ಗುಣಮಟ್ಟದ ಹೊಸ ಕಟ್ಟಡ ನಿರ್ಮಾಣ ಮಾಡುವತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ಬಸ್ತಿಹಳ್ಳಿ ಗ್ರಾಮಸ್ತರ ಒತ್ತಾಯ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 377 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳ ಪೈಕಿ 60 ಶಾಲೆಗಳಲ್ಲಿ ಕಿಟಕಿ, ಬಾಗಿಲು ಮತ್ತು ಹೆಂಚುಗಳನ್ನು ದುರಸ್ತಿ ಮಾಡಬೇಕಿದೆ. ಶಾಲೆಯ ಚಾವಣಿಗೆ ಕೆಲ ಕಡೆ ಚುರುಕಿ ಹಾಕಬೇಕಿದೆ. ಶೌಚಾಲಯಗಳಿವೆ. ಗ್ರಾಮ ಪಂಚಾಯಿತಿಗಳ ನೆರವಿನಿಂದ ಶೌಚಾಲಯಕ್ಕೆ ನೀರಿನ ಸಂಪರ್ಕ ಪಡೆದುಕೊಳ್ಳಬೇಕಿದೆ.

ಚನ್ನರಾಯಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ 2023-24ನೇ ಸಾಲಿನಲ್ಲಿ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದೆ. ಕುಡಿಯುವ ನೀರು, ಶೌಚಾಲಯ, ಸ್ಮಾರ್ಟ್ ತರಗತಿ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯದ ಸೌಲಭ್ಯ ಇದೆ. ವಾರದಲ್ಲಿ ಎರಡು ದಿನ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಇದರ ಜೊತೆಗೆ ಸಿರಿಧಾನ್ಯದಿಂದ ತಯಾರಿಸಿದ ಆಹಾರವನ್ನು ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತದೆ.

ಕಳೆದ ವರ್ಷ 290 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ 320 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಶಾಲೆಗೆ ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಅದೇ ರೀತಿ ಪಿಎಂಶ್ರೀ ಯೋಜನೆಗೆ ಹಿರೀಸಾವೆಯಲ್ಲಿರುವ ಶಾಸಕರ ಮಾದರಿ ಶಾಲೆ ಆಯ್ಕೆಯಾಗಿದೆ. ಪ್ರಸಕ್ತ ಸಾಲಿಗೆ ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಆನೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಅನುಮೋದನೆ ಪಡೆದಿದೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಜಿ.ಚಂದ್ರಶೇಖರ್‌, ಸಿದ್ದರಾಜು, ಎಚ್‌.ಎಸ್‌. ಅನಿಲ್‌ಕುಮಾರ್‌, ಹಿ.ಕೃ. ಚಂದ್ರು.

ದುರಸ್ತಿ ಅಗತ್ಯವಿರುವ ಶಾಲೆಗಳ ವಿವರ

ತಾಲ್ಲೂಕು; ಪ್ರಾಥಮಿಕ ಶಾಲೆ;ಕೊಠಡಿ;ಪ‍್ರೌಢಶಾಲೆ;ಕೊಠಡಿ

ಆಲೂರು;59;101;10;16

ಅರಕಲಗೂಡು;144;290;17;62

ಅರಸೀಕೆರೆ;106;180;9;33

ಬೇಲೂರು;111;208;7;26

ಚನ್ನರಾಯಪಟ್ಟಣ;48;86;2;4

ಹಾಸನ;92;148;2;6

ಹೊಳೆನರಸೀಪುರ;13;20;4;6

ಸಕಲೇಶಪುರ;92;221;0;0

ಒಟ್ಟು;665;1254;51;153

ಪಿಎಂಶ್ರೀ ಯೋಜನೆಗೆ ಆಯ್ಕೆಯಾದ ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ
ಪಿಎಂಶ್ರೀ ಯೋಜನೆಗೆ ಆಯ್ಕೆಯಾದ ಚನ್ನರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ
ದುರಸ್ತಿಗೆ ₹54 ಲಕ್ಷ ಮಂಜೂರು
ಅರಕಲಗೂಡು ತಾಲ್ಲೂಕಿನಲ್ಲಿ 27 ಪ್ರೌಢಶಾಲೆ 114 ಹಿರಿಯ ಪ್ರಾಥಮಿಕ ಹಾಗೂ 167 ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಎಲ್ಲವೂ ಕಟ್ಟಡಗಳನ್ನು ಹೊಂದಿವೆ. ಪ್ರೌಢಶಾಲೆಗಳಲ್ಲಿ ಪಟ್ಟಣದ ಬಾಲಕಿಯರು ಹಾಗೂ ಬಾಲಕರು ಗಂಜಲಗೂಡು ದೊಡ್ಡಮಗ್ಗೆ ಮತ್ತು ಕೊಣನೂರು ಬಿಎಸ್ಎಸ್ ಸೇರಿದಂತೆ 5 ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 82 ಶಾಲಾ ಕಟ್ಟಡಗಳು ದುರಸ್ತಿ ಆಗಬೇಕಿದೆ. ₹ 54.24 ಲಕ್ಷ ಹಣ ಬಿಡುಗಡೆಗೆ ಅನುಮೋದನೆಯಾಗಿದ್ದು ತುರ್ತಾಗಿ ದುರಸ್ತಿ ಆಗಬೇಕಾದ ಕಟ್ಟಡಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದರು. ಶಾಲೆಗಳಲ್ಲಿ ಒಂದು ಅಥವಾ ಎರಡು ಕೊಠಡಿಗಳು ದುರಸ್ತಿ ಆಗಬೇಕು. ಹೀಗಾಗಿ ಉಳಿದ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಎಲ್ಲ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ. ಕೆಲವು ಶಾಲೆಗಳ ಶೌಚಾಲಯಗಳು ದುರಸ್ತಿ ಆಗಬೇಕಿದೆ. ಹಲವೆಡೆ ಶಾಲೆಗಳ ಆವರಣದಲ್ಲಿರುವ ಮರಗಳ ಕೆಳಗೆ ಶೌಚಾಲಯ ನಿರ್ಮಿಸಿರುವ ಕಾರಣ ಮರದ ಬೇರುಗಳು ಶೌಚಾಲಯದ ಕಟ್ಟಡದ ಕೆಳಗೆ ಹಾದು ಹೋಗಿ ಹಾಗೂ ಕಸಕಡ್ಡಿಗಳು ಉದುರಿ ತೊಂದರೆಯಾಗುತ್ತಿದೆ. ಪಟ್ಟಣದ ಬಾಲಕರು ಬಾಲಕಿಯರು ಮತ್ತು ಕೋಟೆ ಪ್ರೌಢಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ತಲಾ ₹5.20 ಲಕ್ಷ ಮತ್ತು ಸಾಲಗೇರಿ ಬಡಾವಣೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ₹4.20ಲಕ್ಷ ಬಿಡುಗಡೆಯಾಗಿದೆ. 50 ವರ್ಷ ಹಿಂದೆ ನಿರ್ಮಾಣವಾಗಿ ಪೂರ್ಣವಾಗಿ ಶಿಥಿಲವಾಗಿರುವ 8 ಕಟ್ಟಡಗಳನ್ನು ನೆಲಸಮ ಮಾಡಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ದೇವರಾಜ್‌ ವಿವರಿಸಿದರು.
ಬದಲಿ ವ್ಯವಸ್ಥೆ
ಶಿಥಿಲಾವಸ್ಥೆ ತಲುಪಿರುವ ಶಾಲೆ ಹಾಗೂ ಶಾಲಾ ಕೊಠಡಿಗಳನ್ನು ಗುರುತಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಜವರೇಗೌಡ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದುರಸ್ತಿ ಮಾಡಿ ಉಳ್ಳಾವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಚಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಅಪಾಯದಲ್ಲಿ ಪಾಠ ಕಲಿಯುತ್ತಿದ್ದಾರೆ. ಶಿಥಿಲವಾಗಿರುವ ಸರ್ಕಾರಿ ಶಾಲೆಯ ಕಟ್ಟಡಗಳನ್ನು ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡುವ ಬಗ್ಗೆ ಗಮನಹರಿಸಬೇಕು. ಶ್ರೀನಿವಾಸ್ ಎಸ್‌ಡಿಎಂಸಿ ಅಧ್ಯಕ್ಷ ಉಳ್ಳಾವಳ್ಳಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಗತಿ ಸುಧಾರಿಸಿ ಸರ್ಕಾರಿ ಶಾಲೆಗಳ ಸೌಲಭ್ಯ ಸದುಪಯೋಗ ಮಾಡಿಕೊಳ್ಳಲು ಈಗಲೂ ಸಾಕಷ್ಟು ಮಂದಿ ಅಸಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲಾ ಕಟ್ಟಡಗಳ ಸ್ಥಿತಿಗತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ದಾನಿಗಳು ಸಹ ಸರ್ಕಾರಿ ಶಾಲೆ ಕಟ್ಟಡ ದುರಸ್ತಿಗೆ ಕೈಜೋಡಿಸಬೇಕು. ಹರೀಶ್ ರೈತ ಗೋಣಿಸೋಮನಹಳ್ಳಿ. ಅಗತ್ಯ ಸೌಕರ್ಯ ಕಳೆದ ಶೈಕ್ಷಣಿಕ ವರ್ಷದಲ್ಲಿ 32 ಸ್ಮಾರ್ಟ್ ತರಗತಿಗಳು ಪ್ರಸಕ್ತ ಸಾಲಿನಲ್ಲಿ 31 ಸ್ಮಾರ್ಟ್ ತರಗತಿಗಳ ಸೌಲಭ್ಯವನ್ನು ತಾಲ್ಲೂಕು ಪಂಚಾಯಿತಿ ಅನುದಾನದಿಂದ ಸರ್ಕಾರಿ ಶಾಲೆಗೆ ಒದಗಿಸಲಾಗಿದೆ. 2015-16ನೇ ಸಾಲಿನಲ್ಲಿ ಮುಚ್ಚಿದ್ದ 4 ಶಾಲೆಗಳನ್ನು ಈ ಸಾಲಿನಲ್ಲಿ ಆರಂಭಿಸಲಾಗಿದೆ. 10 ಮಕ್ಕಳ ಮನೆ ಇದೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನರಾಯಪಟ್ಟಣ ಕಟ್ಟಡ ದುರಸ್ತಿಗೆ ₹2 ಕೋಟಿ ಅಗತ್ಯ ತಾಲ್ಲೂಕಿನಲ್ಲಿ ಶಾಲಾ ಕಟ್ಟಡ ದುರಸ್ತಿಗೆ ₹ 2 ಕೋಟಿ ಅಗತ್ಯವಿದ್ದು ₹ 54.24 ಲಕ್ಷ ಬಿಡುಗಡೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ ಎ.ಮಂಜು ಶಾಸಕ ಅರಕಲಗೂಡು ಅನುದಾನದ ನಿರೀಕ್ಷೆ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಅನುದಾನದ ನೀರೀಕ್ಷೆಯಲ್ಲಿದ್ದು ಪಾಠ ಪ್ರವಚನಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ದೇವರಾಜ್ ಬಿಇಒ ಅರಕಲಗೂಡು ಹೆಚ್ಚಿನ ಅನುದಾನ ಒದಗಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಬಹು ಮುಖ್ಯವಾಗಿದ್ದು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕು. ಶಂಕರಯ್ಯ ವಕೀಲ ಅರಕಲಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT