ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೀಸಾವೆ | ಹದವಾದ ಮಳೆ: ಹೆಚ್ಚಿದ ಸೊಪ್ಪಿನ ಬೆಲೆ

ವಾರದ ಸಂತೆಯಲ್ಲಿ ಕೊತ್ತಂಬರಿ, ಮೆಂತ್ಯ ಸೊಪ್ಪಿನ ಕಂತೆಗೆ ₹ 40 ರಿಂದ ₹ 50
Published 28 ಮೇ 2024, 7:24 IST
Last Updated 28 ಮೇ 2024, 7:24 IST
ಅಕ್ಷರ ಗಾತ್ರ

ಹಿರೀಸಾವೆ: 10 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತರಕಾರಿ ಬೆಲೆಗಳು ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ.

ಇಲ್ಲಿನ ವಾರದ ಭಾನುವಾರದ ಸಂತೆಯಲ್ಲಿ ಕೊತ್ತಂಬರಿ ಮತ್ತು ಮೆಂತ್ಯ ಸೊಪ್ಪು ಕಂತೆಗೆ ₹ 40 ರಿಂದ ₹ 50 ಇದ್ದುದರಿಂದ ವ್ಯಾಪಾರಸ್ಥರು ಕೊತ್ತಂಬರಿಯನ್ನು ಕಡ್ಡಿಗಳ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ಬೀನ್ಸ್ ಕೆ.ಜಿ.ಗೆ ₹ 250 ರಿಂದ ₹ 280 ಆಗಿದ್ದು, ಗ್ರಾಹಕರು ತರಕಾರಿ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು.

ಹಸಿ ಶುಂಠಿ ಕೆ.ಜಿ.ಗೆ ₹ 180 ರಿಂದ ₹ 200 ಇದ್ದರೆ, ಎರಡು ವಾರದ ಹಿಂದೆ ಕೆ.ಜಿ.ಗೆ ₹ 15 ರಿಂದ ₹ 20 ಇದ್ದ ಟೊಮೆಟೊ ಈ ವಾರ ₹ 40 ರಿಂದ ₹ 50ಕ್ಕೆ ಬೆಲೆ ಹೆಚ್ಚಿಸಿಕೊಂಡಿದೆ. ಈರುಳ್ಳಿ ಕೆ.ಜಿ.ಗೆ ₹ 20 ರಿಂದ ₹ 30 ಇದ್ದರೆ, ಉಳಿದ ತರಕಾರಿಗಳ ಬೆಲೆ ₹ 40ಕ್ಕಿಂತ ಹೆಚ್ಚಾಗಿದೆ.

ನಾಟಿ ಬೆಳ್ಳುಳ್ಳಿ ಸಹ ₹ 260ರಿಂದ ₹ 280 ಆಗಿದೆ. ನುಗ್ಗೆಕಾಯಿ ₹ 80, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಗೆಡ್ಡೆಕೋಸುಗಳು ₹ 80 ರಿಂದ ₹ 120, ಆಲೂಗಡ್ಡೆ, ಬದನೆಕಾಯಿ ₹ 40, ಗಜ್ಜರಿ, ಬೀಟ್‌ರೂಟ್ ಸೇರಿದಂತೆ ಇತರೇ ತರಕಾರಿಗಳು ಕೆಜಿಗೆ ₹ 50 ರಿಂದ ₹ 60 ಇತ್ತು.

ಪಚ್ಚೆ ಬಾಳೆಹಣ್ಣು ಕೆ.ಜಿ.ಗೆ ₹ 30 ರಿಂದ ₹ 40 ಮತ್ತು ಪುಟ್ಟ ಬಾಳೆಹಣ್ಣು ₹ 50 ರಿಂದ ₹ 60 ರೂ ಇತ್ತು. ಎರಡು ವಾರದ ಹಿಂದೆ ಸೌತೆಕಾಯಿ ₹ 50 ಕ್ಕೆ ಮೂರು, ನಾಲ್ಕು ಇತ್ತು, ಮಳೆಯಿಂದ ಈ ವಾರ ₹ 10 ಕ್ಕೆ 3 ಅಥವಾ 4 ನೀಡುತ್ತಿದ್ದರು.

ಮಾರುಕಟ್ಟೆಯಲ್ಲಿ ಕೊಳ್ಳಿ ಮೊಟ್ಟೆ ದರವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೋಲ್ ಸೇಲ್ ದರವು ಒಂದು ಮೊಟ್ಟೆಗೆ ₹ 6.30 ಆಗಿದೆ.

ಮಳೆಯಾಗುತ್ತಿರುವುದರಿಂದ ತರಕಾರಿಯ ಕೊರತೆ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಈ ಭಾಗದಲ್ಲಿ ಹೆಚ್ಚಿಗೆ ಬಳಕೆ ಮಾಡುವ ಸೊಪ್ಪಿಗೆ ಸಂತೆಯಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂತು.

ಸ್ವಲ್ಪ ದಿನಗಳ ಕಾಲ ಮಳೆ ಬಿಡುವು ನೀಡಿದಲ್ಲಿ ಮಾತ್ರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗಲಿದ್ದು, ಅಲ್ಲಿಯವರೆಗೆ ಬೆಲೆಗಳು ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಮಳೆಯಿಂದ ಮಾರುಕಟ್ಟೆಯಲ್ಲಿ ಸೊಪ್ಪಿನ ಕೊರತೆ ಸೊಪ್ಪು, ತರಕಾರಿ ಖರೀದಿಸಲು ಗ್ರಾಹಕರ ಹಿಂದೇಟು ಕೊಳ್ಳುವವರಿಲ್ಲದೇ ವ್ಯಾಪಾರಿಗಳಿಗೂ ಸಂಕಷ್ಟ
ಉತ್ತಮ ಮಳೆ ಆಗುತ್ತಿರುವುದರಿಂದ ಸೊಪ್ಪು ಪಾತಿಯಲ್ಲಿ ಕೊಳೆಯುತ್ತಿದೆ. ಇದರಿಂದ ಕೊತ್ತಂಬರಿ ಮತ್ತು ಮೆಂತ್ಯ ಸೇರಿದಂತೆ ಎಲ್ಲ ಸೊಪ್ಪಿನ ಬೆಲೆ ಏರಿಕೆಯಾಗಿದೆ.
ಸುರೇಶ್ ಸೊಪ್ಪು ವ್ಯಾಪಾರಿ ಮರಿಶೆಟ್ಟಿಹಳ್ಳಿ
ಒಂದು ವಾರದಿಂದ ಬಾಳೆ ಕಾಯಿಯ ಬೆಲೆ ಹೆಚ್ಚಳವಾಗಿದೆ. ಪುಟ್ಟಬಾಳೆ ಹಣ್ಣಿನ ಬೆಲೆಯೂ ಕಳೆದ ವಾರಕ್ಕಿಂದ ಈ ವಾರ ₹ 10 ಹೆಚ್ಚಿಗೆಯಾಗಿದೆ.
ಶೇಖರ್ ಬಾಳೆಹಣ್ಣು ವ್ಯಾಪಾರಿ ಹಿರೀಸಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT