ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳದ ಯುವ ರೈತನಿಗೆ ಬದುಕು ಕಟ್ಟಿಕೊಟ್ಟ ಗಿನಿ ಪಿಗ್

ಸ್ವಾವಲಂಬನೆಯತ್ತ ದೃಢ ಹೆಜ್ಜೆ ಇಟ್ಟ ಪವನ್ ಕುಮಾರ್‌ ಯಶೋಗಾಥೆ
Published 7 ಅಕ್ಟೋಬರ್ 2023, 6:28 IST
Last Updated 7 ಅಕ್ಟೋಬರ್ 2023, 6:28 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಹಳ್ಳಿ ಜೀವನ ಬಿಟ್ಟು ನಗರದ ಆಕರ್ಷಣೀಯತ್ತ ಯುವ ಪೀಳಿಗೆ ಧಾವಿಸುತ್ತಿರುವುದು ಸಾಮಾನ್ಯದ ಸಂಗತಿ. ಆದರೆ, ಸ್ಥಳೀಯರ ನಿಂದನೆಗಳನ್ನು ಸ್ವೀಕರಿಸಿ, ಛಲದಿಂದ ಏನಾದರೂ ಮಾಡಬೇಕೆಂದು ಪಣ ತೊಟ್ಟು ಬದುಕಿನಲ್ಲಿ ಯಶಸ್ಸು ಕಾಣುತ್ತಿದ್ದಾರೆ ಶ್ರವಣಬೆಳಗೊಳ ಹೋಬಳಿಯ ಜುಟ್ಟನಹಳ್ಳಿಯ ಯುವಕ ಜೆ.ಕೆ. ಪವನ್ ಕುಮಾರ್.

ಅಪರೂಪದ ಗಿನಿ ಪಿಗ್‌ ಸಾಕಾಣಿಕೆ ಆರಂಭಿಸಿರುವ ಪವನ್‌ಕುಮಾರ್‌, ಹೊಸ ಪ್ರಯೋಗ ಆರಂಭಿಸಿದ್ದಾರೆ. ಅಮೆರಿಕದಲ್ಲಿ ಹೆಚ್ಚು ಪ್ರಚಲಿತವಾಗಿರುವ ಗಿನಿ ಪಿಗ್‌ ಸಾಕಾಣಿಕೆಯ ಮೂಲಕ ಜಿಲ್ಲೆಯ ಯುವಕರಿಗೆ ಹೊಸದೊಂದು ಉದ್ಯಮವನ್ನು ಪರಿಚಯಿಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚಿನ ಇದರ ಬೇಡಿಕೆ ಇದ್ದು, ಪ್ರಯೋಗಾಲಯದಲ್ಲಿ ಪೂರ್ವ ಪರೀಕ್ಷೆಗೆ ಹೆಚ್ಚಿಗೆ ಬಳಸುತ್ತಾರೆ. ಗಿನಿ ಪಿಗ್‌ ಸಾಕಾಣಿಕೆ ಕಡಿಮೆ ಖರ್ಚಿನ, ಕಡಿಮೆ ನಿರ್ವಹಣೆಯ ಲಾಭದ ಉದ್ಯಮವಾಗಿದೆ.

ಹೆಚ್ಚಿನ ಕಾರ್ಮಿಕರ ಅವಶ್ಯಕತೆಯೂ ಇಲ್ಲ. ಒಬ್ಬರೇ 500ಕ್ಕೂ ಅಧಿಕ ಗಿನಿ ಪಿಗ್‌ಗಳನ್ನು ನಿರ್ವಹಿಸಬಹುದು. ಹಾಗಾಗಿ ನಿರ್ವಹಣೆಯ ವೆಚ್ಚವೂ ತುಂಬಾ ಕಡಿಮೆ. ಅನೇಕ ತಳಿಗಳಿದ್ದು, ಮುಖ್ಯವಾಗಿ ಇಂಗ್ಲಿಷ್‌ ಶಾರ್ಟ್ ಹೇರ್, ಲಾಂಗ್ ಹೇರ್, ಟೆಕ್ಸಿಲ್, ಸಿಲ್ಕಿ, ಪೆರುಯೆನ್, ಅಭಿಷೀಯನ್ ಎಂದು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

ಕೃಷಿಯೊಂದಿಗೆ ಈ ಉದ್ಯಮವನ್ನೂ ಸಹ ಮಾಡಬಹುದು. 60X40 ಅಡಿಯ ಶೆಡ್ ನಿರ್ಮಿಸಿ, ಸುತ್ತಲೂ ಅರ್ಧ ಗೋಡೆಯನ್ನು ಹಾಕಿ ಇನ್ನರ್ಧದಲ್ಲಿ ಚೆನ್ನಾಗಿ ಗಾಳಿ ಬೆಳಕು ಬರುವ ಹಾಗೆ ಸಣ್ಣ ಜಾಲರಿಯನ್ನು ಅಳವಡಿಸಬೇಕು. ಒಳ ಭಾಗದಲ್ಲಿ ವಾಸ ಯೋಗ್ಯ 4x3 ಅಡಿಯ ಅಳತೆಯ ಚೌಕಗಳನ್ನು ನಿರ್ಮಿಸಿ ಪಿಗ್‌ಗಳನ್ನು ಬಿಡಬೇಕು.

‘ಸಸ್ಯಾಹಾರಿ ಪ್ರಾಣಿ ಆಗಿರುವುದರಿಂದ ದಿನದಲ್ಲಿ ಹಸಿರುಯುಕ್ತ ಎಳೆಯದಾದ ಮೆಕ್ಕೆ ಜೋಳದ ದಂಟು, ರಾಗಿ ಹುಲ್ಲು, ಕುದುರೆ ಮೆಂತ್ಯ ಸೊಪ್ಪು, ಕಡಲೆ ಕಾಳಿನ ಸಿಪ್ಪೆ, ಬೂಸಾ, ಕಡಲೇ ಹಿಂಡಿ, ಇವುಗಳನ್ನು ನೀರಿನಲ್ಲಿ ನೆನೆಸಿ ಪ್ಲೇಟ್‌ಗಳಲ್ಲಿ ಹಾಕಬೇಕು. ಸೌತೇಕಾಯಿ, ಎಲೆಕೋಸು, ಹಣ್ಣುಗಳು, ಸಾಂಬಾರ್ ಸೊಪ್ಪು ಸಹ ಹಾಕಬಹುದಾಗಿದೆ. ನೀರು ಕಡಿಮೆ ಕುಡಿಯುವ ಪ್ರಾಣಿಯಾಗಿದೆ. ಆಹಾರ ತಿಂದ ಮೇಲೆ ಸ್ವಚ್ಛತೆ ಕಾಪಾಡಬೇಕು. ಈರುಳ್ಳಿ ನೀಡದೇ ಇಲಿಗಳಿಂದ ರಕ್ಷಿಸಬೇಕು. ರೋಗ ರುಜಿನಗಳು ತುಂಬಾ ಕಡಿಮೆ. ಒಂದು ವೇಳೆ ಕಾಣಿಸಿಕೊಂಡರೆ ಕ್ಯಾಲ್ಸಿಯಂ ಪೌಡರ್‌ನಿಂದ ಉಪಚಾರವೂ ಸಹ ಸುಲಭ’ ಎನ್ನುತ್ತಾರೆ ಪವನ್‌ಕುಮಾರ್‌.

ಈ ಗಿನಿ ಪಿಗ್‌ನಿಂದ ಮನುಷ್ಯರಿಗೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ. ತಮಿಳುನಾಡು ಕೇರಳ, ಆಂಧ್ರಪ್ರದೇಶದಲ್ಲಿ ಸಾಕಾಣಿಕೆ ಹೆಚ್ಚಿದ್ದು, ಇದೀಗ ಕರ್ನಾಟಕದಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ. ವ್ಯಾಪಕವಾದ ಮಾರುಕಟ್ಟೆ ಇದೆ. ಬೇಡಿಕೆ ಹೆಚ್ಚಿರುವುದರಿಂದ ಸ್ಥಳದಲ್ಲಿಯೇ ಬಂದು ಖರೀದಿಸುವ ವ್ಯವಸ್ಥೆ ಇದೆ. ಕಡಿಮೆ ಬಂಡವಾಳ, ಹೆಚ್ಚಿನ ಲಾಭ/ ನಿತ್ಯ ಆತಂಕ ರಹಿತ ಕೆಲಸದಿಂದ ಜೀವನ ಸಾಗಿಸಬಹುದು ಎನ್ನುತ್ತಾರೆ ಅವರು.

‘ಈ ಉದ್ಯಮಕ್ಕೆ ತಾಳ್ಮೆ, ಕರ್ತವ್ಯ ನಿಷ್ಠೆ, ಮನಸ್ಸು, ಇಚ್ಛಾಶಕ್ತಿಯ ಜೊತೆಗೆ ದೃಢ ಸಂಕಲ್ಪ ಮುಖ್ಯವಾಗಿದೆ. 3ನೇ ವ್ಯಕ್ತಿಯನ್ನು ನಂಬದೇ ಸ್ವಂತ ಬುದ್ಧಿ ಇರಬೇಕು. ಅಲ್ಪ ಬಂಡವಾಳ, ವ್ಯಾಪಕವಾದ ಮಾರುಕಟ್ಟೆ, ಹೆಚ್ಚಿನ ಬೇಡಿಕೆ, ಶ್ರಮಕ್ಕೆ ತಕ್ಕ ಪ್ರತಿಫಲ ಇರುವುದರಿಂದ ಈ ಸಂಘ ಜೀವಿಯೊಂದಿಗೆ ಇಡೀ ಜೀವನದ ಕನಸುಗಳನ್ನು ಹಂತ ಹಂತವಾಗಿ ಈಡೇರಿಸಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಪವನ್ ಕುಮಾರ್– ಜೆ.ಕೆ.ಶಾಂತಾ.

ಈ ಉದ್ಯಮದ ಬೆಳವಣಿಗೆಗೆ ಹೆಗಲಿಗೆ ಹೆಗಲುಕೊಟ್ಟ ನನ್ನ ತಾಯಿ ಗೌರಮ್ಮ, ತಂದೆ ನಿವೃತ್ತ ಶಿಕ್ಷಕ ನಾಟಿ ಔಷಧಿ ಕೊಡುವ ಕೃಷ್ಣೇಗೌಡ, ಸಹೋದರ ನಟರಾಜ್ ಅವರ ಬೆಂಬಲವನ್ನು ಸ್ಮರಿಸುತ್ತಾರೆ.

ಫಾರಂನಲ್ಲಿ ಆಹಾರ ತಿನ್ನುತ್ತಿರುವ ಗಿನಿ ಪಿಗ್‌ಗಳು
ಫಾರಂನಲ್ಲಿ ಆಹಾರ ತಿನ್ನುತ್ತಿರುವ ಗಿನಿ ಪಿಗ್‌ಗಳು
ಮುದ್ದಾಗಿ ಮಲಗಿರುವ ಗಿನಿ ಪಿಗ್‌ಗಳ ಸುಂದರ ನೋಟ
ಮುದ್ದಾಗಿ ಮಲಗಿರುವ ಗಿನಿ ಪಿಗ್‌ಗಳ ಸುಂದರ ನೋಟ
ಶೆಡ್‌ನ ಒಳಭಾಗದಲ್ಲಿರುವ ಗಿನಿ ಪಿಗ್‌ನೊಂದಿಗಿರುವ ಪವನ್ ಕುಮಾರ್
ಶೆಡ್‌ನ ಒಳಭಾಗದಲ್ಲಿರುವ ಗಿನಿ ಪಿಗ್‌ನೊಂದಿಗಿರುವ ಪವನ್ ಕುಮಾರ್

ಗಿನಿ ಪಿಗ್‌ನ ಬೆಳವಣಿಗೆ ಆದಂತೆ ದರ ಹೆಚ್ಚಳ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಕೊಡುವ ಉದ್ಯಮ ಕೃಷಿಯೊಂದಿಗೆ ಗಿನಿ ಪಿಗ್ ಉದ್ಯಮ ಮಾಡಬಹುದು

ವೈದ್ಯಕೀಯ ಸಂಶೋಧನೆಗೆ ಬಳಕೆ ಗಿಣಿ ಪಿಗ್ ಎಂಬ ಹೆಸರಿನ ಸಸ್ಯಾಹಾರಿಯು ಮೊಲ ಹಾಗೂ ಹಂದಿ ಮರಿಗಳ ತರಹದ ಆಕಾರ ಹೊಂದಿದೆ. ಈ ಸುಂದರ ವಿವಿಧ ಬಣ್ಣದ ಆಕರ್ಷಕ ಪ್ರಾಣಿ ಗಿನಿ ಪಿಗ್‌ ಅನ್ನು ವೈದ್ಯಕೀಯ ಸಂಶೋಧನಾ ಉದ್ದೇಶಕ್ಕೆ 17ನೇ ಶತಮಾನದಿಂದಲೂ ಬಳಕೆ ಮಾಡಲಾಗುತ್ತಿದೆ. ಕೆವಿಯಾ ಪೊರ್ಸೆಲಸ್ (cavia porcellus) ಎಂಬ ವೈಜ್ಞಾನಿಕ ಹೆಸರಿನ ಕೇವಿಡೇ ವಂಶ ಹಾಗೂ ಕೇವಿಯಾ ಕುಲಕ್ಕೆ ಸೇರಿದ ಪ್ರಾಣಿ ಇದು. ಕೇವಿ ಎಂದು ಕರೆದರೂ ಇಂಗ್ಲಿಷ್‌ನಲ್ಲಿ ಇದನ್ನು ಗಿನಿ ಪಿಗ್‌ (guinea pig) ಎಂದು ಕರೆಯಲಾಗುತ್ತದೆ. ಇದರ ಮೂಲ ದಕ್ಷಿಣ ಅಮೆರಿಕ ಕೊಲಂಬಿಯಾ ಈಕ್ವೆಡಾರ್ ಪೆರು ದೇಶಗಳಲ್ಲಿ ಕಂಡು ಬಂದಿದ್ದು ಯೂರೋಪಿಯನ್ನರ ವ್ಯಾಪಾರದಿಂದಾಗಿ ಇಡೀ ಜಗತ್ತಿಗೆ ಹರಡಿದೆ ಎನ್ನುತ್ತಾರೆ ಬ್ರೀಡರ್ ರಮೇಶ್ ಚಂದ್ರ.

ವರ್ಷದಲ್ಲಿ 5 ಬಾರಿ ಮರಿ ಈ ಪ್ರಾಣಿಯು 400 ಗ್ರಾಂ ತೂಕ 20 ರಿಂದ 25 ಸೆಂ.ಮೀ ಇದ್ದು ಜೀವಿತಾ ಅವಧಿ 4 ರಿಂದ 5 ವರ್ಷ ಮಾತ್ರ. ಸಂಘ ಜೀವಿಯಾಗಿದ್ದು ಹಿಂಡು ಹಿಂಡಾಗಿ ಬದುಕುತ್ತ ಮಾನವರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ಸಾಕಿರುವ ಪವನ್ ಕುಮಾರ್. ಗಂಡು ಹೆಣ್ಣು ಎಂಬ ಎರಡು ತಳಿಗಳಿದ್ದು ಕನಿಷ್ಠ 4 ಹೆಣ್ಣಿಗೆ ಒಂದು ಗಂಡನ್ನು ಬಿಟ್ಟು ಒಂದಕ್ಕೊಂದು ಸಂಪರ್ಕಿಸಿ ಗರ್ಭ ಧರಿಸುತ್ತವೆ. 2 ರಿಂದ 3 ಮರಿಗಳನ್ನು ಹಾಕುತ್ತವೆ. ವರ್ಷದಲ್ಲಿ 5 ಬಾರಿ ಗರ್ಭ ಧರಿಸಿ ಮರಿಗಳಿಗೆ ಜನ್ಮ ನೀಡುತ್ತವೆ. ಜನಿಸಿದ ಸ್ವಲ್ಪ ವೇಳೆಯ ನಂತರ ಸಂಚರಿಸುವ ಕ್ಷಮತೆಯನ್ನು ಹೊಂದಿ ಆಹಾರ ಮತ್ತು ಹಿರಿಯ ಗಿನಿ ಪಿಗ್‌ಗಳ ಜೊತೆಗೆ ಒಗ್ಗಿಕೊಳ್ಳುತ್ತವೆ. 30 ರಿಂದ 40 ಗ್ರಾಂ ತೂಕ ಇದ್ದರೆ ಗುಣ ಮಟ್ಟದ ಮರಿಗಳು. ಸಾಯುವ ಸಂಖ್ಯೆ ಕಡಿಮೆ. ಅಲ್ಲದೇ ಕಾಯಿಲೆಯೂ ಕಡಿಮೆ ಎನ್ನುತ್ತಾರೆ ಸಾಕುವವರು. ಮಾರಾಟಕ್ಕೆ ಮಾತ್ರ 200 ರಿಂದ 300 ಗ್ರಾಂ ತೂಕ ಇದ್ದರೆ ಲಾಭದಾಯಕ ದರ ನಿಗದಿಯಾಗಿ ಹೆಚ್ಚಿನ ಆದಾಯ ನಿರೀಕ್ಷಿಸಬಹುದು ಎನ್ನುತ್ತಾರೆ ಪವನ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT