ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಪ್ರವಾಸಿ ತಾಣದ ರಸ್ತೆಯಲ್ಲಿ ಗುಂಡಿ, ಪ್ರಯಾಣಿಕರಿಗೆ ದೂಳಿನ ಸ್ನಾನ

Last Updated 23 ಜನವರಿ 2023, 5:12 IST
ಅಕ್ಷರ ಗಾತ್ರ

ಹಳೇಬೀಡು: ಹಾಸನದಿಂದ ಹಳೇಬೀಡಿಗೆ ಸಂಪರ್ಕ ಕಲ್ಪಿಸುವ ಹಗರೆ ಮಾರ್ಗದ ರಸ್ತೆಯಲ್ಲಿ, ಪುಷ್ಪಗಿರಿಯಿಂದ ಹಳೇಬೀಡಿನ ಬಸವೇಶ್ವರ ವೃತ್ತದವರೆಗೆ ಗುಂಡಿಮಯವಾಗಿದ್ದು, ಪ್ರವಾಸಿಗರಿಗೆ ಪ್ರಯಾಣ ನರಕಯಾತನೆ ಅನುಭವಿಸುವಂತಾಗಿದೆ. ಡಾಂಬರ್ ಹಾಗೂ ಜಲ್ಲಿ ಕಿತ್ತು ಹೋಗಿರುವುದರಿಂದ ರಸ್ತೆ ದೂಳುಮಯವಾಗಿದೆ. ದೂರದಿಂದ ಬರುವ ಪ್ರವಾಸಿಗರು ದೂಳಿನ ಸ್ನಾನ ಮಾಡುವಂತಾಗಿದೆ ಎನ್ನುವ ದೂರು ಕೇಳಿ ಬರುತ್ತಿದೆ.

ಹಗರೆ ಗ್ರಾಮದಲ್ಲಿ ಹಾದು ಹೋಗಿರುವ ರಸ್ತೆ, ಬಿಳಿಕೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಹೆದ್ದಾರಿ ಒಂದು ಕಡೆ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾತ್ರ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ಕಡೆ ಬೆಂಗಳೂರು ಹಾಗೂ ಮೈಸೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಹೀಗಾಗಿ ಹಳೇಬೀಡಿಗೆ ಬರುವ ಬಹುತೇಕ ಪ್ರವಾಸಿಗರು ಹಳೇಬೀಡು– ಹಗರೆ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ. ದೂರದಿಂದ ಬರುವ ಪ್ರವಾಸಿಗರು ರಸ್ತೆ ಸಮಸ್ಯೆಯಿಂದ ಬಳಲಿ ಬೆಂಡಾಗುತ್ತಿದ್ದಾರೆ. ವ್ಯವಸ್ಥೆಯ ಕುರಿತು ಹಿಡಿಶಾಪ ಹಾಕಿಕೊಂಡು ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ.

ಡಾಂಬರ್ ಹಾಕಿದ ಅವಶೇಷ ಇಲ್ಲದಂತೆ ರಸ್ತೆ ಗುಂಡಿ ಬಿದ್ದಿದೆ. ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಇಳಿದು ವಾಹನಗಳು ಚಲಿಸುತ್ತಿವೆ. ಚಾಲಕರು ಸರ್ಕಸ್ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದಾರೆ. ಗುಂಡಿ ದಾಟಿಸಿಕೊಂಡು ಹೋಗುವ ಬೈಕ್ ಸವಾರರು ಬಿದ್ದು, ಕೈಕಾಲು ಮುರಿದುಕೊಂಡ ಘಟನೆಗಳೂ ನಡೆದಿವೆ.

‘ಹಳೇಬೀಡಿನ ಸ್ಮಾರಕಗಳು ಮಾತ್ರವಲ್ಲದೇ, ಹುಲಿಕೆರೆಯ ಪುಷ್ಕರಣಿ ಹಾಗೂ ಪುಷ್ಪಗಿರಿ ಕ್ಷೇತ್ರಕ್ಕೆ ಹೋಗುವವರು ಇದೇ ರಸ್ತೆಯಲ್ಲಿ ಪ್ರಯಾಣ ಮಾಡಬೇಕು. ಗುಂಡಿಯಿಂದಾಗಿ ಪ್ರವಾಸಿಗರು ಪುಷ್ಪಗಿರಿ ಹಾಗೂ ಹುಲಿಕೆರೆ ಪುಷ್ಕರಣಿಗೆ ಹೋಗುವ ಆಸಕ್ತಿ ಕಳೆದುಕೊಂಡಿದ್ದಾರೆ. ಆಕರ್ಷಕವಾದ ಹುಲಿಕೆರೆ ಪುಷ್ಪರಣೆ ವೀಕ್ಷಣೆ ಮಾಡಲು ಒಂದೊಂದು ದಿನ ಒಬ್ಬ ಪ್ರವಾಸಿಗರು ಸುಳಿಯುವುದಿಲ್ಲ. ರಸ್ತೆಯ ಸ್ಥಿತಿಗತಿ ಇದೆ ರೀತಿ ಮುಂದುವರಿದರೆ ಯಾತ್ರಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಪುಷ್ಪಗಿರಿ ಕ್ಷೇತ್ರದ ಭಕ್ತ ಹರೀಶ್.

‘ಹಳೇಬೀಡು-ಹಗರೆ ರಸ್ತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಿವಿಧ ಕೆಲಸಗಳಿಗೆ ಹಳೇಬೀಡು, ಹಾಸನ ಮೊದಲಾದ ನಗರ ಪ್ರದೇಶಕ್ಕೆ ಹೋಗಿ ಬರುವವರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಭಾರೀ ಸಂಖ್ಯೆಯ ವಾಹನ ಸಂಚರಿಸಿದರೂ, ಸಾರಿಗೆ ಸಂಸ್ಥೆ ಬಸ್ ಸಂಚಾರ ತೀರಾ ಕಡಿಮೆ. ಹೀಗಾಗಿ ಸ್ವಂತ ಇಲ್ಲವೇವೆ ಖಾಸಗಿ ವಾಹನದಲ್ಲಿ ಹಳ್ಳಿಗರು ಪ್ರಯಾಣ ಮಾಡಬೇಕಾಗಿದೆ. ಗುಂಡಿಮಯ ರಸ್ತೆಯ ಪ್ರಯಾಣದಿಂದ ಸಿದ್ದಾಪುರ, ಮಲ್ಲಾಪುರ ಭಾಗದ ಹಳ್ಳಿಗರು ಮೈಕೈ ನೋವು ಅನುಭವಿಸುವಂತಾಗಿದೆ’ ಎನ್ನುತ್ತಾರೆ ರೈತ ಮಲ್ಲೇಶಪ್ಪ.

ವಿದ್ಯಾರ್ಥಿಗಳಿಗೂ ಸಂಕಷ್ಟ

ಹಳೇಬೀಡು ಹಾಗೂ ಹಾಸನಕ್ಕೆ ಶಾಲಾ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳ ಪಾಡು ಹೇಳಲು ಅಸಾಧ್ಯವಾಗಿದೆ.

ಈ ಭಾಗದಲ್ಲಿ ಶಾಲಾ ಬಸ್‌ನಲ್ಲಿ ಕೆಲವು ಮಕ್ಕಳು ಮಾತ್ರ ಪ್ರಯಾಣಿಸುತ್ತಾರೆ. ಸಾಕಷ್ಟು ಮಕ್ಕಳನ್ನು ಪೋಷಕರು ಮೋಟಾರ್ ಬೈಕ್‌ನಲ್ಲಿ ಶಾಲೆಗೆ ಕರೆದೊಯ್ಯುತ್ತಾರೆ. ಬಾಡಿಗೆ ಆಟೋರಿಕ್ಷಾ, ವ್ಯಾನ್‌ನಲ್ಲಿ ಹೆಚ್ಚಿನ ಮಕ್ಕಳು ಪ್ರಯಾಣಿಸುತ್ತಾರೆ.

‘ಗುಂಡಿಮಯವಾದ ರಸ್ತೆಯಲ್ಲಿ ಪ್ರಯಾಣ ಮಾಡಿಕೊಂಡು ಶಾಲಾ, ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯಾಸ ಆಗುತ್ತದೆ. ಮನೆಯಲ್ಲಿ ಅಭ್ಯಾಸ ಮಾಡಲು ಶಕ್ತಿ ಇರುವುದಿಲ್ಲ’ ಎಂಬ ಮಾತು ಪೋಷಕರಾದ ಸಿದ್ದಾಪುರ ಹರೀಶ್ ಅವರಿಂದ ಕೇಳಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT