ಭಾನುವಾರ, ಆಗಸ್ಟ್ 1, 2021
27 °C
ದಶಕದ ಕನಸು ನನಸು: ಮೂರು ತಾಲ್ಲೂಕುಗಳ ಸಂಪರ್ಕ ಸೇತುವೆ ನಿರ್ಮಾಣ

ಸೇತುವೆ ಕಾಮಗಾರಿ ಬಿರುಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲೂರು: ಹೇಮಾವತಿ ನದಿ ಹಿನ್ನೀರು ಪ್ರದೇಶದಲ್ಲಿರುವ ಆಲೂರು ತಾಲ್ಲೂಕು ಕರಿಗೌಡನಹಳ್ಳಿ ಗ್ರಾಮದ ಬಳಿ ₹16 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೂರು ತಾಲ್ಲೂಕು ಕೇಂದ್ರಗಳನ್ನು ಸಂಪರ್ಕ ಸರಾಗವಾಗಿದೆ.

ನಾಲ್ಕು ದಶಕದ ಹಿಂದೆ ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ನಿರ್ಮಾಣ ಮಾಡಿದ ದಿನದಿಂದ ಹಿನ್ನೀರು ಆವರಿಸಿ ಸಂಪರ್ಕ ತುಂಡಾಗಿತ್ತು. ಅಲೂರು ತಾಲ್ಲೂಕಿನ ಕರಿಗೌಡನಹಳ್ಳಿ, ಚಾಕನಹಳ್ಳಿ, ಹಸಗನೂರು ಗ್ರಾಮದವರು ಹಾಸನ ತಾಲ್ಲೂಕಿನ ದುಂಡನಾಯಕನಹಳ್ಳಿ, ಬಳ್ಳೆಕೆರೆ, ಮಲ್ಲಿಗೆವಾಳು ಗ್ರಾಮಗಳಲ್ಲಿ ತಮ್ಮ ಜಮೀನಿಗೆ ಹೋಗಿ ಬರಲು, ಸುಮಾರು 50 ಕಿ. ಮೀ. ಸುತ್ತಿ ಹೋಗುವ ಅನಿವಾರ್ಯತೆ ಎದುರಾಗಿತ್ತು. ಅಂದಿನಿಂದಲೂ ಸೇತುವೆ ನಿರ್ಮಾಣಕ್ಕೆ ಜನಸಾಮಾನ್ಯರ ಹೋರಾಟ ನಿರಂತರವಾಗಿ ನಡೆಯುತ್ತಿತ್ತು.

ಈ ಸೇತುವೆ ನಿರ್ಮಾಣದಿಂದ ಆಲೂರು-ಹೊಳೆನರಸೀಪುರ-ಅರಕಲಗೂಡು ತಾಲ್ಲೂಕುಗಳ ಜನಸಾಮಾನ್ಯರು ಓಡಾಡಲು ಮತ್ತು ವ್ಯಾಪಾರ ವಹಿವಾಟಿಗೆ ಇದ್ದ ತೊಂದರೆ ನಿವಾರಣೆಯಾದಂತಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಸುಮಾರು ₹16 ಕೋಟಿ  ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಬಹುತೇಕ ಬರುವ ಬೇಸಿಗೆ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಎಚ್. ಕೆ. ಕುಮಾರಸ್ವಾಮಿ, ಆಲೂರು, ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲ್ಲೂಕುಗಳಿಗೆ ಸಂಪರ್ಕ ಸುಗಮವಾಗುತ್ತದೆ. ಎರಡು ವರ್ಷದ ಹಿಂದೆ ಯೋಜನೆ ಮಂಜೂರಾಗಿತ್ತು. ₹16 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭವಾಗಿ ಶೇ. 25 ರಷ್ಟು ಕೆಲಸವಾಗಿದೆ. ಸೇತುವೆ ನಿರ್ಮಾಣವಾದ ನಂತರ ಸುಮಾರು 50-60 ಕಿ. ಮೀ. ಬಳಸುವುದು ಉಳಿತಾಯವಾಗಲಿದೆ. ಇದರಿಂದ ಜನಸಾಮಾನ್ಯರು ಅಭಿವೃದ್ಧಿಯೆಡೆಗೆ ಸಾಗಲಿದ್ದಾರೆ ಎಂದರು.

ಗ್ರಾಮಸ್ಥರಾದ ಕೃಷ್ಣೇಗೌಡ ಅವರು ಪ್ರತಿಕ್ರಿಯಿಸಿ, ನಾಲ್ಕು ದಶಕಗಳಿಂದಲೂ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಪ್ರತಿಭಟನೆ ಮೂಲಕ ಸರಕಾರದ ಮೇಲೆ ಎಲ್ಲರೂ ಒತ್ತಡ ತರುತ್ತಿದ್ದೆವು. ಸೇತುವೆ ಕಾಮಗಾರಿ ಪೂರ್ಣಗೊಂಡ ನಂತರ ತಾಲ್ಲೂಕುಗಳ ಸಂಬಂಧದೊಂದಿಗೆ ವ್ಯಾಪಾರ ವಹಿವಾಟು ಇಮ್ಮಡಿಯಾಗಲಿದೆ. ಸೇತುವೆ ನಿರ್ಮಾಣಕ್ಕೆ ಸಹಕರಿಸಿದ ಮಾಜಿ ಸಚಿವ ಎಚ್. ಡಿ. ರೇವಣ್ಣ, ಶಾಸಕ ಎಚ್. ಕೆ. ಕುಮಾರಸ್ವಾಮಿ, ಎಪಿಎಂಸಿ ಅಧ್ಯಕ್ಷ ಕೆ. ಎಸ್. ಮಂಜೇಗೌಡ, ಎಲ್ಲ ಪಕ್ಷಗಳ ಮುಖಂಡರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು