ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ವಿಮಾನ ನಿಲ್ದಾಣ ಕಾಮಗಾರಿ ವಿಳಂಬ

2024-25 ರಲ್ಲಿ ಪೂರ್ಣಗೊಳಿಸುವ ನಿರೀಕ್ಷೆ: ಸಚಿವ ಎಂ.ಬಿ. ಪಾಟೀಲ
Published 14 ಡಿಸೆಂಬರ್ 2023, 0:30 IST
Last Updated 14 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ವಿಮಾನ ನಿಲ್ದಾಣದ ಉದ್ಘಾಟನೆ ಮತ್ತೊಂದು ವರ್ಷ ಮುಂದಕ್ಕೆ ಹೋದಂತಾಗಿದೆ. ಈ ಮೊದಲು 2024 ರ ಅಂತ್ಯಕ್ಕೆ ವಿಮಾನ ಹಾರಾಟ ಆರಂಭ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ವಿಮಾನ ನಿಲ್ದಾಣದ ಕಾಮಗಾರಿಗಳನ್ನು 2024-25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ಕಾಮಗಾರಿಯ ವಿವರ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ವಿವರವಾದ ಯೋಜನಾ ವರದಿ ತಯಾರಿಸಿದ್ದು, ₹ 220 ಕೋಟಿ ವೆಚ್ಚದಲ್ಲಿ ಅಂದಾಜಿಸಲಾಗಿತ್ತು. ಈ ಪೈಕಿ ಕಾಂಪೌಂಡ್ ಗೋಡೆ, ಸಂಪರ್ಕ ರಸ್ತೆ, ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಟವರ್ ಕಾಮಗಾರಿಗೆ ₹19.67 ಕೋಟಿ, ರನ್ ವೇ, ಎಪ್ರಾನ್ ಟ್ರಾಕ್ಸಿ ವೇ, ಫೆರಿಫರಲ್ ರಸ್ತೆ ಮತ್ತು ಒಳಾವರಣ ರಸ್ತೆಗೆ ₹ 98.85  ಕೋಟಿ, ಟರ್ಮಿನಲ್ ಕಟ್ಟಡ, ಕಾರ್ಗೋ ಎಟಿಸಿ ಟವರ್, ಹ್ಯಾಂಗರ್, ಅಗ್ನಿಶಾಮಕ ಠಾಣೆಗೆ ₹ 94.23 ಕೋಟಿ, ನೀರು ಸರಬರಾಜು ಮತ್ತು ನೈರ್ಮಲೀಕರಣ, ವಿದ್ಯುತ್ ಮತ್ತು ಇತರೆ ಕಾಮಗಾರಿಗಳಿಗೆ ₹ 6.05 ಕೋಟಿ ಹಾಗೂ ಇತರೆ ವೆಚ್ಚ ₹ 7.20 ಕೋಟಿ ಎಂದು ಅಂದಾಜಿಸಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದ ಮೂಲ ಉದ್ದೇಶ ಹಾಗೂ ಮೂಲ ನಕ್ಷೆಯಂತೆ ಜಮೀನುಗಳನ್ನು ಸಂಪೂರ್ಣವಾಗಿ ಭೂಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಜೊತೆಗೆ ಗಾಲ್ಫ್‌ಕೋರ್ಟ್, ಕಾರ್ಗೋ, ಎಂಆರ್‌ಒ ಸೌಲಭ್ಯ ಮತ್ತು ವಾಯುಯಾನ ತರಬೇತಿ, ಸಂಪರ್ಕ ರಸ್ತೆ ಮುಂತಾದ ಮೂಲ ಸೌಲಭ್ಯಗಳುಳ್ಳ ಹಾಸನ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಮಾದರಿಯಲ್ಲಿ ಕೈಗೊಳ್ಳುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಸ್ವರೂಪ್ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿರುವ ಸಚಿವರು, ಹಾಸನ ವಿಮಾನ ನಿಲ್ದಾಣವನ್ನು ಎಟಿಆರ್-32 ಮಾದರಿ ವಿಮಾನಗಳ ಕಾರ್ಯಾಚರಣೆಗೆ ಅನುವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಕಲಬುರಗಿ, ಶಿವಮೊಗ್ಗ ಹಾಗೂ ವಿಜಯಪುರ ನಿಲ್ದಾಣಗಳನ್ನು ಎ-320  ಮಾದರಿ ವಿಮಾನಗಳ ಕಾರ್ಯಾಚರಣೆಗೆ ವಿನ್ಯಾಸ ಮಾಡಲಾಗಿದೆ. ಅದರಂತೆ ಮೂಲ ಸೌಲಭ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಸನ ವಿಮಾನ ನಿಲ್ದಾಣ ಕಾಮಗಾರಿಯ ಪ್ಯಾಕೇಜ್ 1ರ ಆರ್ಥಿಕ ಪ್ರಗತಿ ಶೇ 62.26 ರಷ್ಟಿದ್ದು, ಭೌತಿಕ ಪ್ರಗತಿ ಶೇ 63.40ರಷ್ಟಾಗಿದೆ. ಪ್ಯಾಕೇಜ್ 2 ರ ಆರ್ಥಿಕ ಪ್ರಗತಿ ಶೇ 5.20, ಭೌತಿಕ ಪ್ರಗತಿ ಶೇ 12.14 ರಷ್ಟು ಸಾಧಿಸಲಾಗಿದೆ. ಎಲ್ಲ ಕಾಮಗಾರಿಗಳನ್ನು 2024–25 ನೇ ಸಾಲಿನಲ್ಲಿ ಪೂರ್ಣಗೊಳಿಸುವ ನಿರೀಕ್ಷೆ ಇದೆ. 536 ಎಕರೆ ಪ್ರದೇಶದಲ್ಲಿ ಮಾತ್ರ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಹಾಸನ ವಿಮಾನ ನಿಲ್ದಾಣ ಕಾಮಗಾರಿಯ ಒಟ್ಟು ಅಂದಾಜು ಮೊತ್ತ ₹193.65 ಕೋಟಿಯಾಗಿದ್ದು ಈವರೆಗೂ ₹ 164.70 ಕೋಟಿ ಬಿಡುಗಡೆಯಾಗಿದೆ

-ಎಂ.ಬಿ. ಪಾಟೀಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT