ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬಾಹಿರ ಘಟನೆ ಬಹಿಷ್ಕರಿಸಿ: ಶಾಸಕ ಎಚ್‌.ಕೆ.ಕುಮಾರಸ್ವಾಮಿ ಕರೆ

ಮಹಾಪರಿನಿರ್ವಾಣ ಕಾರ್ಯಕ್ರಮ
Last Updated 6 ಡಿಸೆಂಬರ್ 2019, 13:37 IST
ಅಕ್ಷರ ಗಾತ್ರ

ಹಾಸನ: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳುವ ಮೂಲಕ ಬದ್ಧತೆ ತೋರಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಬಿ.ಆರ್. ಅಂಬೇಡ್ಕರ್ ಅವರ 63ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದಲ್ಲಿ ಮರೆಯಲಾಗದ ದಿನ ಏ.14 ಮತ್ತು ಡಿ.6. ಶೋಷಿತರಿಗೆ ಪ್ರತಿದಿನ, ಪ್ರತಿ ಸಂದರ್ಭದಲ್ಲಿ ಅಂಬೇಡ್ಕರ್ ನೆನಪಿಗೆ ಬರುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ತಲೆ ತಗ್ಗಿಸುವಂತೆ ಮಾಡಿದೆ. ಬದಲಾವಣೆ ಮತ್ತು ಸುಧಾರಣೆ ಮೂಲಕ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಸಂವಿಧಾನ ಬಾಹಿರವಾಗಿ ನಡೆಯುವ ಘಟನೆಗಳನ್ನು ಎಲ್ಲರೂ ಸೇರಿ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.

ಅಂಬೇಡ್ಕರ್ ಅವರು ಸಮಯ ಮತ್ತು ಕಾಲಕ್ಕೆ ಗೌರವ ನೀಡುತ್ತಿದ್ದರು. ಅದರಂತೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಿಸಿದ್ದರಿಂದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ಅಚ್ಚುಕಟ್ಟಾದ ಜೀವನ ಕಟ್ಟಿಕೊಳ್ಳಲು ಕಾರಣಕರ್ತರಾದ ಅಂಬೇಡ್ಕರ್ ಅವರನ್ನು ಮರೆಯುವಂತಿಲ್ಲ. ಅವರು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಮುಂದಿನ ಪೀಳಿಗೆ ಅನುಭವಿಸಬಾರದು ಎಂಬ ದೂರದೃಷ್ಟಿಯಿಂದ ಎಲ್ಲಾ ವರ್ಗದವರಿಗೆ ಸಮಾನತೆ ದೊರಕಿಸಿಕೊಟ್ಟಿದ್ದಾರೆ ಎಂದರು.

ಶಿಕ್ಷಣ, ಧೈರ್ಯ, ಸೈರ್ಯ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ದೌರ್ಜನ್ಯ ತಡೆಗಟ್ಟುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಪ್ರತಿ ದಿನ ಬೆಳಿಗ್ಗೆ ದೇವರ ಸ್ಮರಿಸುವಂತೆ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶ ದೊರೆಕಿದೆ, ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.

ಸಂವಿಧಾನದ ವಿರೋಧಿ ಚಟುವಟಿಕೆ ತಡೆಗಟ್ಟಲು ಎಲ್ಲರ ಪಾತ್ರವಿದೆ. ಎಲ್ಲರೂ ಒಟ್ಟಾಗಿ ತಡೆಗಟ್ಟುವ ಮೂಲಕ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT