ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನದಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, ಕೊಲೆ ಮಾಡಿ ಆತ್ಮಹತ್ಯೆ ಶಂಕೆ

Published 20 ಜೂನ್ 2024, 9:05 IST
Last Updated 20 ಜೂನ್ 2024, 9:05 IST
ಅಕ್ಷರ ಗಾತ್ರ

ಹಾಸನ: ನಗರದ ಹೊಯ್ಸಳ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ನಗರದ ಆಡುವಳ್ಳಿಯ ಶರಾಫತ್‌ ಅಲಿ (52) ಹಾಗೂ ಬೆಂಗಳೂರಿನ ಆಸೀಫ್‌ (46) ಎಂಬವರು ಸಾವಿಗೀಡಾಗಿದ್ದಾರೆ. 

ಮಧ್ಯಾಹ್ನ 12.30 ರ ಸಮಯದಲ್ಲಿ ಕಾರಿನಲ್ಲಿ ಇಬ್ಬರೂ ಬಡಾವಣೆಗೆ ಬಂದು, ನಿವೇಶನವೊಂದನ್ನು ಪರಿಶೀಲಿಸಿ, ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದರು. ನಂತರ ಗುಂಡಿನ ಸದ್ದು ಕೇಳಿ ಬಂದಿತ್ತು. ಸುತ್ತಮುತ್ತಲಿನ ಜನ ಬಂದು ನೋಡಿದಾಗ ಶರಾಫತ್‌ ಅಲಿ ಶವ ಕಾರಿನ ಎದುರು ಬಿದ್ದಿತ್ತು. ಆಸೀಫ್‌ ಶವ ಕಾರಿನಲ್ಲಿತ್ತು.

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಮೊಹಮ್ಮದ್‌ ಸುಜೀತಾ ಪ್ರತಿಕ್ರಿಯಿಸಿ, ‘ಮೇಲ್ನೋಟಕ್ಕೆ ವ್ಯವಹಾರಕ್ಕೆ ಸಂಬಂಧಿಸಿದ ಘಟನೆಯಂತೆ ಕಾಣುತ್ತಿದೆ. ಕಾರಿನೊಳಗೆ ಕೂತಿರುವ ವೇಳೆಯೇ ಗುಂಡು ಹಾರಿಸಲಾಗಿದೆ. ಆಸೀಫ್‌, ಶರಾಫತ್‌ ಅಲಿಗೆ ಗುಂಡು ಹೊಡೆದಿದ್ದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಯಾವ ಕಾರಣಕ್ಕೆ ಘಟನೆ ನಡೆಯಿತೆಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಕಾರಿನಲ್ಲಿಯೇ ಪಿಸ್ತೂಲ್‌ ಸಿಕ್ಕಿದೆ. ಸ್ಥಳಕ್ಕೆ ಬೇರೆ ವಾಹನ ಬಂದಿಲ್ಲ. ಹೀಗಾಗಿ ಬೇರೆಯವರು ಬಂದು ಗುಂಡಿನ ದಾಳಿ ನಡೆಸಿರುವ ಸಾಧ್ಯತೆಗಳಿಲ್ಲ. ಗುಂಡು ಹಾರಿಸಿ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಲ್ಲ ಆಯಾಮದಲ್ಲಿಯೂ ತನಿಖೆ ಮುಂದುವರಿದಿದೆ’ ಎಂದರು.

‘ಕಾರಿನ ಹೊರಗೆ ಬಿದ್ದಿದ್ದ ಶರಾಫತ್‌ ಅಲಿ ತಲೆಯಲ್ಲಿ ಗುಂಡು ಹೊಕ್ಕಿದ್ದು, ಕಾರಿನಲ್ಲಿದ್ದ ಆಸೀಫ್‌ ಕೂಡ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ‌ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ‘ಘಟನೆಯಲ್ಲಿ ಸಿಕ್ಕಿರುವ ಗನ್‌ ಆಸೀಫ್‌ ಅವರದ್ದಾಗಿದ್ದು, ಕಾರು ಶರಾಫತ್ ಅಲಿ ಅವರದ್ದು’ ಎಂದು ಹೇಳಿದರು.

ಒಟ್ಟಿಗೆ ಉಪಾಹಾರ ಮಾಡಿದ್ದರು: ‘ಗುರುವಾರ ಬೆಳಿಗ್ಗೆ ಅರಾಫತ್‌ ಅಲಿ ಅವರ ಮನೆಯಲ್ಲಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದ್ದರು. ನಂತರ ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಬೇಕಿತ್ತು. ಆದರೆ, ಹೊಯ್ಸಳ ಬಡಾವಣೆಗೆ ಏಕೆ ಹೋದರು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಸಂಬಂಧಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT