ಭಾನುವಾರ, ನವೆಂಬರ್ 28, 2021
21 °C
ಮೊಳಗಿದ ಭಕ್ತರ ಜಯಘೋಷ; ಭಕ್ತರ ಮನಸೆಳೆದ ದೇವಾಲಯಗಳಿಗೆ ಪುಷ್ಪಾಲಂಕಾರ

ವಿಶ್ವರೂಪ ದರ್ಶನ ನೀಡಿದ ಹಾಸನಾಂಬೆ: ಮೊಳಗಿದ ಭಕ್ತರ ಜಯಘೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ವರ್ಷದ ನಂತರ ಗುರುವಾರ ವಿಶ್ವರೂಪ ದರ್ಶನ ಕರುಣಿಸಿದಳು. ಸಂಪ್ರದಾಯದಂತೆ ಮೈಸೂರು ಅರಸು ಮನೆತನದ ನರಸಿಂಹರಾಜ ಅರಸ್, ದೇಗುಲದ ಬಾಗಿಲ ಎದುರು ಪೂಜೆ ಸಲ್ಲಿಸಿ ಬಾಳೆ ಕಂದು ಕತ್ತರಿಸಿದರು.

ನಂತರ ಪ್ರಧಾನ ಅರ್ಚಕರು ಮಧ್ಯಾಹ್ನ 12.19ಕ್ಕೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗರ್ಭಗುಡಿ ಬಾಗಿಲಿನ ಬೀಗ ತೆರೆಯುತ್ತಿದ್ದಂತೆ ಭಕ್ತರ ಜಯಘೋಷ ಮೇಳೈಸಿತು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್‌, ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ, ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸೇರಿದಂತೆ ಸಾರ್ವಜನಿಕರು ಆಭರಣಾಲಂಕಾರವಿಲ್ಲದ ದೇವಿಯ ವಿಶ್ವರೂಪ ದರ್ಶನ ಪಡೆದರು. ‌

ಕೋವಿಡ್‌ ಲಸಿಕೆ ಪ್ರಮಾಣ ಪತ್ರ ಹಾಗೂ ಗುರುತಿನ ಕಾರ್ಡ್‌ ಹೊಂದಿರುವವರಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಶ್ವಿಜ ಮಾಸದ ಕೃಷ್ಣಪಕ್ಷದ ಪ್ರಥಮ ಗುರುವಾರ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದಿದ್ದು, ಬಲಿಪಾಡ್ಯಮಿ ಮರು ದಿನವಾದ ನ.6ರಂದು ಬಾಗಿಲು ಮುಚ್ಚಲಾಗುವುದು. ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ನಿತ್ಯ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ದೇವಿ ದರ್ಶನ ಮಾಡಬಹುದು.


ಮೈಸೂರು ಅರಸು ವಂಶದ ನರಸಿಂಹ ರಾಜ ಅರಸ್‌ ಅವರು ಬಾಳೆ ಕಂದು ಕಡಿಯುವ ಮೂಲಕ ಹಾಸನಾಂಬೆ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು.

ಕೋವಿಡ್‌ ಕಾರಣದಿಂದ ವಯೋವೃದ್ಧರು, ಮಕ್ಕಳನ್ನು ಕರೆತರದಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು