ಶನಿವಾರ, ಜನವರಿ 22, 2022
16 °C

ಕಾಂಗ್ರೆಸ್ ಇರುವವರೆಗೂ ದೇಶ ಉದ್ಧಾರವಾಗಲ್ಲ, ದೇಶಕ್ಕೆ ಅದು ಕಂಟಕ: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕಾಂಗ್ರೆಸ್ ಇರುವವರೆಗೂ ದೇಶ ಉದ್ಧಾರವಾಗುವುದಿಲ್ಲ. ದೇಶಕ್ಕೆ ಕಂಟಕವಾಗಿದೆ ಎಂದು
ಶಾಸಕ ಎಚ್‌.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

ಹಿಂದಿನ ವಾತಾವರಣ ಇಂದು ಕಾಂಗ್ರೆಸ್‌ ನಲ್ಲಿ ಇಲ್ಲ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದವರು ಯಾರು? ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ಟೋಪಿ ಹಾಕಿದವರು ಯಾರು? ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಿದವರು ಯಾರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಜೆಡಿಎಸ್ ಕುಟುಂಬ ರಾಜಕಾರಣ’ ಎಂಬ ಸಂಸದ ಡಿ.ಕೆ. ಸುರೇಶ್ ಟೀಕೆಗೆ ಪ್ರತಿಕ್ರಿಯಿಸಿದ
ರೇವಣ್ಣ, ಕಾಂಗ್ರೆಸ್‌ ಹಿಂದಿನಿಂದಲೂ ಕುಟುಂಬ ರಾಜಕಾರಣ ಮಾಡಿಕೊಂಡೇ ಬಂದಿದೆ. ಯಾವ
ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ತಿಳಿಸಲಿ. ಹಾಗೇ ನೋಡಿದರೆ ಜೆಡಿಎಸ್‌ ನಲ್ಲಿಯೇ ಕಡಿಮೆ.
ದೇಶದಲ್ಲಿ ಕುಟುಂಬ ರಾಜಕಾರಣ ಬೇಡ ಎಂಬುದಾದರೆ ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ
ಕಾನೂನು ತರಲಿ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೇನು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು? ನನ್ನ ಅವಧಿಯಲ್ಲಿ ಏನೇನು ಕೆಲಸಗಳಾಗಿವೆ ಎಂಬುದು ಜನರಿಗೆ ಗೊತ್ತಿದೆ. ರಾಷ್ಟ್ರೀಯ ಪಕ್ಷಗಳ ಕೊಡುಗೆ ಏನು ಎಂಬುದು ಅವರೇ ಹೇಳಬೇಕು ಎಂದರು. 

‘ನೀರಾವರಿ, ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು, ಸಮಗ್ರ ತನಿಖೆ ನಡೆಸಬೇಕು. ಜಿಲ್ಲೆಯ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಗಳೇ ಮತ್ತೊಬ್ಬರ ಹೆಸರಲ್ಲಿ‌ ಗುತ್ತಿಗೆ ಪಡೆಯುತ್ತಿದ್ದಾರೆ. ಎರಡು ವರ್ಷಗಳಿಂದ ಸುಮಾರು ₹ 250 ಕೋಟಿ ಬಿಲ್‌ ಬಿಡುಗಡೆ ಮಾಡಿಲ್ಲ. ಇದರಿಂದ ಕೆಲಸ ಮಾಡಿರುವ ಗುತ್ತಿಗೆದಾರರು ಮನೆ, ಆಭರಣ ಮಾರಾಟ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲೂ ₹ 25 ಕೋಟಿ ವೆಚ್ಚದ ಕಾಮಗಾರಿಗೆ ಶೇ 20 ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಎಲ್ಒಸಿ ನೀಡುವಾಗ ಹಿರಿತನವನ್ನು ಪರಿಗಣಿಸುತ್ತಿಲ್ಲ. ಕಾವೇರಿ‌ ನೀರಾವರಿ‌ ನಿಗಮದಲ್ಲಿ ಎಂಜಿನಿಯರ್ ಗಳೇ ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಬೆಳೆ ಹಾನಿಗೆ ಎಕರೆಗೆ ಕನಿಷ್ಟ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು. ಈ ವರೆಗೂ ಜಿಲ್ಲೆಗೆ ಬಿಡಿಗಾಸು ನೀಡಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು