ಸೋಮವಾರ, ಸೆಪ್ಟೆಂಬರ್ 28, 2020
23 °C
ಮಲೆನಾಡು ಭಾಗದಲ್ಲಿ ನಿಲ್ಲದ ವರುಣನ ಆರ್ಭಟ

ಹೇಮಾವತಿ ಅಣೆಕಟ್ಟೆ ಒಳ ಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರ ಸೇರಿದಂತೆ ಜಿಲ್ಲಾದಾದ್ಯಂತ ಬುಧವಾರ ಭಾರಿ ಮಳೆಯಾಗಿದೆ. ಆಲೂರು, ಅರಕಲಗೂಡು, ಬೇಲೂರು, ಹಾಸನ, ಸಕಲೇಶಪುರ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಜಲಾನಯನ ಪ್ರದೇಶಗಳಾದ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಗೊರೂರಿನ
ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. 2,922 (37 ಟಿಎಂಸಿ ) ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಪ್ರಸ್ತುತ ನೀರಿನ ಮಟ್ಟ 2901.81 (20.97 ಟಿಎಂಸಿ) ಅಡಿ ತಲುಪಿದೆ.
ಅಣೆಕಟ್ಟೆಗೆ 24,185 ಕ್ಯುಸೆಕ್‌ ಒಳ ಹರಿವು ಇದ್ದು, ಎರಡು ದಿನದಲ್ಲಿ ಮೂರು ಅಡಿ ನೀರು ಸಂಗ್ರಹವಾಗಿದೆ.

ಅದೇ ರೀತಿ ಜಲಾನಯನ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬೇಲೂರಿನ ಯಗಚಿ ಮತ್ತು ಆಲೂರಿನ ವಾಟೆಹೊಳೆ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿವೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ನಿರಂತರ ಮಳೆಯಿಂದ ಮಲೆನಾಡು ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತಗೊಂಡಿದ್ದು, ಕಾರ್ಮಿಕರು ಮನೆಯಲ್ಲೇ
ಇರುವಂತಾಗಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಹಾಸನ ನಗರದಲ್ಲಿ ಬಿಡುವು ನೀಡಿ ಸುರಿಯುತ್ತಿದೆ. ಜನರು ಮನೆಯಲ್ಲಿಯೇ ತೊಯ್ದುಕೊಂಡು ಓಡಾಡುವಂತಾಗಿದೆ. ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಆಗಿದೆ. ಹಲವು ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಯಿತು.

ಸಕಲೇಶಪುರ ತಾಲ್ಲೂಕಿನ ಬಿಸಿಲೆಘಾಟ್ ನಲ್ಲಿ ಭಾರಿ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಕೆಲ ಕಾಲ ಸಂಚಾರ ಸ್ಥಗಿತಗೊಂಡಿತು. ಸ್ಥಳೀಯ ಆಡಳಿತ ವತಿಯಿಂದ ಮರ ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಬುಧವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡಂತೆ ಹೋಬಳಿವಾರು ಮಳೆ ವಿವರ ಇಂತಿದೆ. ಹಾಸನ ತಾಲ್ಲೂಕಿನ ಸಾಲಗಾಮೆ 28.6 ಮಿ.ಮೀ., ಹಾಸನ 24.8 ಮಿ.ಮೀ., ದುದ್ದ 21 ಮಿ.ಮೀ., ಶಾಂತಿಗ್ರಾಮ 15.2 ಮಿ.ಮೀ., ಕಟ್ಟಾಯ 28.3 ಮಿ.ಮೀ., ಗೊರೂರು 31.2 ಮಿ.ಮೀ. ಮಳೆ ಸುರಿದಿದೆ.
ಸಕಲೇಶಪುರ ತಾಲ್ಲೂಕಿನ ಹೊಸೂರು 132 ಮಿ.ಮೀ., ಶುಕ್ರವಾರ ಸಂತೆ 158 ಮಿ.ಮೀ., ಹೆತ್ತೂರು 180.4 ಮಿ.ಮೀ., ಯಸಳೂರು 172 ಮಿ.ಮೀ., ಸಕಲೇಶಪುರ 126.3 ಮಿ.ಮೀ., ಬಾಳ್ಳುಪೇಟೆ 55
ಮಿ.ಮೀ., ಬೆಳಗೋಡು 86.2 ಮಿ.ಮೀ., ಮಾರನಹಳ್ಳಿ 219.1 ಮಿ.ಮೀ., ಹಾನುಬಾಳು 138.4 ಮಿ.ಮೀ. ಮತ್ತು ಅರಸೀಕೆರೆ ತಾಲ್ಲೂಕಿನ ಜಾವಗಲ್ 8.2 ಮಿ.ಮೀ., ಗಂಡಸಿ 12.2 ಮಿ.ಮೀ., ಕಸಬಾ 9.5 ಮಿ.ಮೀ., ಕಣಕಟ್ಟೆ 8.8 ಮಿ.ಮೀ., ಯಳವಾರೆ 10.8 ಮಿ.ಮೀ. ಮಳೆಯಾಗಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 14.3 ಮಿ.ಮೀ., ಹೊಳೆನರಸೀಪುರ 13.4 ಮಿ.ಮೀ., ಹಳೆಕೋಟೆ
18.6 ಮಿ.ಮೀ ಹಾಗೂ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 76 ಮಿ.ಮೀ., ಕಸಬಾ 40.3 ಮಿ.ಮೀ., ದೊಡ್ಡಮಗ್ಗೆ 19.2 ಮಿಮೀ., ರಾಮನಾಥಪುರ 32 ಮಿ.ಮೀ., ಬಸವಪಟ್ಟಣ 14.2 ಮಿ.ಮೀ., ಕೊಣನೂರು 24.6 ಮಿ.ಮೀ., ದೊಡ್ಡಬೆಮ್ಮತ್ತಿ 46.4 ಮಿ.ಮೀ. ಮಳೆಯಾಗಿದೆ.

ಆಲೂರಿನಲ್ಲಿ 35.2 ಮಿ.ಮೀ. ಕುಂದೂರು 57 ಮಿ.ಮೀ., ಕೆ.ಹೊಸಕೋಟೆ 125 ಮಿ.ಮೀ, ಪಾಳ್ಯ 34.8 ಮಿ.ಮೀ.
ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 29.8 ಮಿ.ಮೀ., ಬೇಲೂರು 51.6 ಮಿ.ಮೀ., ಹಗರೆ 27.2
ಮಿ.ಮೀ., ಬಿಕ್ಕೋಡು 61 ಮಿ.ಮೀ., ಗೆಂಡೆಹಳ್ಳಿ 116 ಮಿ.ಮೀ., ಅರೆಹಳ್ಳಿ 91 ಮಿ.ಮೀ., ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2.6 ಮಿ.ಮೀ., ಉದಯಪುರ 10 ಮಿ.ಮೀ., ಬಾಗೂರು 14 ಮಿ.ಮೀ., ನುಗ್ಗೆಹಳ್ಳಿ 4 ಮಿ.ಮೀ., ಶ್ರವಣಬೆಳಗೊಳ 8.7 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.