ಸೋಮವಾರ, ಸೆಪ್ಟೆಂಬರ್ 20, 2021
21 °C
ಕಳೆ ವಾರ ಭರ್ತಿಯಾದ ಯಗಚಿ, ವಾಟೆಹೊಳೆ ಜಲಾಶಯ

ಹಾಸನ: ಜೀವನದಿ ಹೇಮೆ ಒಡಲು ಭರ್ತಿ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಯಗಚಿ, ವಾಟೆಹೊಳೆ ಭರ್ತಿಯಾಗಿದ್ದರೆ, ಹೇಮಾವತಿ ಭರ್ತಿ ಸನಿಹದಲ್ಲಿದೆ.

ಮುಂಗಾರು ಮಳೆ ಸಮರ್ಪಕವಾಗಿ ಬೀಳುತ್ತಿರುವ ಪರಿಣಾಮ ಜಲಾಶಯದ ನೀರಿನ ಸಂಗ್ರಹದಲ್ಲೂ ಏರಿಕೆಯಾಗಿದೆ. ಹೇಮೆ ಒಡಲು ತುಂಬಲು ಎರಡು ಅಡಿ ಬಾಕಿ ಇರುವಾಗಲೇ ಹನ್ನೊಂದು ಸಾವಿರ ಕ್ಯುಸೆಕ್ ನೀರನ್ನು ಗುರುವಾರ ರಾತ್ರಿಯಿಂದಲೇ ಹೊರ ಬಿಡಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯ ಭರ್ತಿಯಾಗಿರಲಿಲ್ಲ.

2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 2,919.25 ಅಡಿ ನೀರು ಸಂಗಹ್ರವಾಗಿದ್ದು, ಭರ್ತಿಗೆ 2 ಅಡಿ ಬಾಕಿ ಇದೆ. ಒಳ ಹರಿವು 10,442 ಕ್ಯುಸೆಕ್‌, 11,460 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. 37.103 ಟಿಎಂಸಿ ನೀರು‌ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 34.474 ಟಿಎಂಸಿ ನೀರು ಸಂಗ್ರಹ ಇದೆ.

ಮಳೆ ಮುಂದುವರಿದಿರುವುದರಿಂದ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜೀವನ ನದಿ ಈ ಬಾರಿಯೂ ಅವಧಿಗೂ ಮುನ್ನವೇ ಭರ್ತಿಯಾಗುವ ಆಶಾಭಾವ ಮೂಡಿಸಿದೆ.

ಅಣೆಕಟ್ಟೆ ಭದ್ರತೆ ಮತ್ತು ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದ ಮಟ್ಟ 2919 ಅಡಿ ಕಾಯ್ದುಕೊಂಡು ಆರು ಗೇಟ್‌ ಮೂಲಕ ನದಿ, ನಾಲೆಗೆ ನೀರು ಹರಿಸಲಾಗುತ್ತದೆ.

ಹೇಮೆ ಒಡಲು ತುಂಬಿರುವುದರಿಂದ ಅಚ್ಚುಕಟ್ಟು ಭಾಗದ ರೈತರು ಬೆಳೆ ಬೆಳೆಯಲು ನೀರು ಸಿಗಲಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ 6,55,00 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರನ್ನು ಹೇಮಾವತಿ ಜಲಾಶಯದಿಂದ ಪೂರೈಸಲಾಗುತ್ತದೆ.

ವಾರದ ಅಂತರದಲ್ಲಿ ಹೇಮಾವತಿ ಜಲಾಶಯದಲ್ಲಿ ಸುಮಾರು 14 ಅಡಿಯಷ್ಟು ನೀರು ಏರಿಕೆಯಾಗಿದ್ದು, ಹತ್ತು ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮಳೆ ಆರ್ಭಟ ಹೆಚ್ಚಾಗಿ ಆಗಸ್ಟ್‌ ಎರಡನೇ ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು.

ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಭರ್ತಿಯಾಗಿದೆ. 3164.90 (3.600 ಟಿಎಂಸಿ) ಅಡಿ ಸಾಮರ್ಥ್ಯದ ಜಲಾಶಯದಲ್ಲಿ 3164.069 ಅಡಿ ನೀರು ಸಂಗ್ರಹವಾಗಿದೆ. ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದ ಸಾಮರ್ಥ್ಯ 3169.61 ಅಡಿ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 3168.59 ಅಡಿ ಇದೆ. 101 ಕ್ಯುಸೆಕ್ ಒಳ ಹರಿವು ಇದ್ದು, 56.81 ಕ್ಯುಸೆಕ್ ಹೊರ ಹರಿವು ಇದೆ.

‘ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಕೋರಲಾಗಿದೆ. ಕೊರೊನಾ ಸೋಂಕು ತಡೆಗಾಗಿ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಜಲಾಶಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು