ಸೋಮವಾರ, ಮೇ 23, 2022
24 °C
ರಾಜ್ಯದ ವಿವಿಧೆಡೆ, ಹೊರ ರಾಜ್ಯಗಳಲ್ಲೂ ಬೇಡಿಕೆ; ಜೇನು ಕೃಷಿ ಸಂಘದಿಂದ ರಿಯಾಯಿತಿ ಸೌಲಭ್ಯ

ಮಲೆನಾಡಿನಲ್ಲಿ ಸಿಹಿ ಹೆಚ್ಚಿಸಿದ ಜೇನು ಕೃಷಿ

ಜೆ.ಎಸ್‌.ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೇನಿನ ತವರು ಎಂದೇ ಹೆಸರಾಗಿರುವ ಮಲೆನಾಡು ಭಾಗದಲ್ಲಿ ರೈತರು, ಯುವಕರು ಮತ್ತೆ ಜೇನು ಕೃಷಿಯತ್ತ ಒಲವು ತೋರುತ್ತಿದ್ದಾರೆ.

ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಉತ್ಪಾದಿಸುವ ಜೇನಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಸಕಲೇಶಪುರದಲ್ಲಿ ಜೇನು ಮಾರಾಟ ಸಹಕಾರ ಸಂಘ ಸ್ಥಾಪಿಸಲಾಗಿದೆ. ಇದರ ಮೂಲಕ ಸ್ಥಳೀಯವಾಗಿ ಉತ್ಪಾದನೆ ಆಗುವ ಜೇನು ಖರೀದಿಸಿ ರಾಜ್ಯದ ವಿವಿಧೆಡೆ ಮತ್ತು ಅಂತರರಾಜ್ಯಗಳಿಗೂ ಮಾರಾಟ ಮಾಡಲಾಗುತ್ತಿದೆ.

ಈ ಸಹಕಾರ ಸಂಘದ ಮೂಲಕ ಜೇನು ಕೃಷಿ ಅಭಿವೃದ್ಧಿಗೆ ಅಗತ್ಯವಿದ್ದ ತರಬೇತಿ, ಪ್ರಾತ್ಯಕ್ಷಿಕೆ ಸಾಲ ಸೌಲಭ್ಯ ಜೇನು ಪೆಟ್ಟಿಗೆ ಒದಗಿಸುವ ಕೆಲಸ ಮಾಡಲಾಗುತ್ತಿತ್ತು. ದಶಕಗಳಿಂದ ಜೇನು ಸಾಕಣೆಗೆ ಉತ್ತೇಜನ ನೀಡಿದರೂ ಸ್ಥಳೀಯರು ಜೇನು ಕೃಷಿ ಬಗ್ಗೆ ಒಲವು ತೋರುತ್ತಿರಲಿಲ್ಲ. ಮಾರುಕಟ್ಟೆಗೆ ಸ್ಥಳೀಯ ಜೇನು ಪೂರೈಕೆ ಆಗದ ಕಾರಣ ಉತ್ತರ ಭಾರತದಿಂದ ಜೇನು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಜೇನು ಮಾರಾಟ ಸಹಕಾರ ಸಂಘ ಮಾಡುತ್ತಿದೆ.

ಉತ್ತರ ಭಾರತದಲ್ಲಿ ಜೇನು ಕೃಷಿ ಉದ್ಯಮದ ರೂಪ ಪಡೆದಿದೆ. ವಾರ್ಷಿಕ ಮೂರರಿಂದ ನಾಲ್ಕು ಬಾರಿ ಜೇನು ಕೊಯ್ಲು ನಡೆಸುವ ಪ್ರತಿ ಕುಟುಂಬ ಕನಿಷ್ಠ 100 ರಿಂದ 1,000 ಪೆಟ್ಟಿಗೆಗಳ ಮೂಲಕ ಜೇನು ಉತ್ಪಾದಿಸುತ್ತಿದೆ. ಅಲ್ಲಿನ ಜೇನು ಕೃಷಿಕರು ಇಟಲಿಯಿಂದ ಆಮದು ಮಾಡಿಕೊಂಡಿರುವ ‘ಮೇಲ್ಲಿಪ್ಯಾರ’ ಎಂಬ ಜೇನಿನ ಹುಳುಗಳಿಂದ ಜೇನು ಉತ್ಪಾದಿಸುತ್ತಾರೆ.

ಪ್ರತಿ ಗೂಡಿನಲ್ಲಿ ಕನಿಷ್ಠ 40 ರಿಂದ 50 ಸಾವಿರ ಹುಳುಗಳಿದ್ದು, ಕನಿಷ್ಠ ಈ ಗೂಡಿನಿಂದ ಪ್ರತಿ ಕೊಯ್ಲಿಗೆ 10 ರಿಂದ 30 ಕೆ.ಜಿ ಜೇನು ಉತ್ಪಾದನೆಯಾಗುತ್ತಿದೆ. ಆದರೆ, ಮಲೆನಾಡಿನಲ್ಲಿ ‘ಸರೇನಾ ಇಂಡಿಕಾ’ ಎಂಬ ದೇಸಿ ತಳಿಯ ಜೇನು ಹುಳುಗಳಿದ್ದು, ಈ ಜೇನುಗೂಡಿನಲ್ಲಿ 7 ರಿಂದ 10 ಸಾವಿರ ಹುಳುಗಳಿರುತ್ತವೆ. ಪ್ರತಿ ಕೊಯ್ಲಿಗೆ 1 ರಿಂದ 4 ಕೆ.ಜಿ. ಜೇನು ಉತ್ಪಾದನೆಯಾಗುತ್ತದೆ. ದೇಸಿ ತಳಿಯ ಜೇನುಹುಳಗಳ ಉತ್ಪಾದನೆ ಸಾಮರ್ಥ್ಯ ಕಡಿಮೆ ಇರುವುದೂ ಜೇನು ಕೃಷಿಕರ ನಿರಾಸಕ್ತಿಗೆ ಕಾರಣವಾಗಿದೆ.

ಜೇನು ಸಹಕಾರ ಸಂಘ ವಾರ್ಷಿಕ ₹ 3 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಆದರೆ, ಸ್ಥಳೀಯವಾಗಿ ಜೇನು ಉತ್ಪಾದನೆ ಆಗದ ಕಾರಣ ಬಿಹಾರ, ಜಾರ್ಖಂಡ್‌ ಸೇರಿದಂತೆ ವಿವಿಧೆಡೆಯಿಂದ ಜೇನು ತರಿಸಿ ಮಾರಾಟ ಮಾಡಲಾಗುತ್ತಿದೆ.

ಮಲೆನಾಡಿನಲ್ಲಿ ಹೆಜ್ಜೇನು, ಕೋಲು ಜೇನು, ಹುತ್ತದಜೇನು, ಮಿಷರಿ ಕುರುಡ ಜೇನುಗಳನ್ನು ಹೆಚ್ಚಾಗಿ ಕಾಣಬಹುದು. ಮಿಷರಿ ಕುರುಡ ವಾರ್ಷಿಕ ಒಂದು ಬಾರಿ ಕೊಯ್ಲು ಮಾಡಲಾಗುತ್ತದೆ. ಇದು ಪ್ರತಿ ಕೆ.ಜಿ ಗೆ ₹ 3 ರಿಂದ ₹ 4 ಸಾವಿರವರೆಗೆ ಧಾರಣೆ ಇದೆ.

ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ದಬ್ಬೆಗದ್ದೆ ಗ್ರಾಮದ್ರ ಪ್ರಗತಿಪರ ರೈತ ಕೆ.ಎಸ್‌. ಕಾಂತರಾಜ್‌ ಸಾವಯವ ಕೃಷಿ ಜೊತೆಗೆ ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ. ಅವರ ಬಳಿ 40 ಜೇನು ಪೆಟ್ಟಿಗೆಗಳಿದ್ದು, 27ರಲ್ಲಿ ಜೇನು ಹುಳುಗಳಿವೆ.

ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ರಂಜಿತ್‌ ಎಂಬ ಯುವಕ ಜೇನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ‘ಬ್ಯೂಟಿಫುಲ್‌ ಬೀಸ್’ ಎಂಬ ಕಂಪನಿ ಆರಂಭಿಸಿರುವ ರಂಜಿತ್‌, ಜೇನು ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಜನರಿಗೆ ಜೇನು ಪೆಟ್ಟಿಗೆ ನೀಡುವುದರಿಂದ ಹಿಡಿದು ಜೇನುಹುಳುಗಳ ಸಂರಕ್ಷಣೆಯ ಬಗ್ಗೆ ತರಬೇತಿ ನೀಡಿ, ಅವರು ಉತ್ಪಾದಿಸುವ ಜೇನನ್ನು ಸ್ಥಳದಲ್ಲೇ ಪ್ರತಿ ಕೆ.ಜಿಗೆ ₹ 800 ರಂತೆ ಖರೀದಿಸುತ್ತಾರೆ.

***

ಸ್ಥಳೀಯವಾಗಿ ಜೇನು ಉತ್ಪಾದನೆಗೆ ಸಂಘದಿಂದ ಸೌಲಭ್ಯ ಕಲ್ಪಿಸಲಾಗಿದೆ. ತೋಟಗಾರಿಕೆ ಮಧುವನ ಯೋಜನೆಯಲ್ಲಿ ಜೇನು ಪೆಟ್ಟಿಗೆ, ಯಂತ್ರ ನೀಡಲಾಗುತ್ತದೆ.

ಜೈಮಾರುತಿ ದೇವರಾಜ್‌, ಅಧ್ಯಕ್ಷ, ಜೇನು ಮಾರಾಟ ಸಹಕಾರ ಸಂಘ, ಸಕಲೇಶಪುರ

***

ಜೇನು ಕೃಷಿ ಬಗ್ಗೆ ಜನರಲ್ಲಿ ಈಗ ಆಸಕ್ತಿ ಹೆಚ್ಚುತ್ತಿದೆ. ಮಲೆನಾಡು ಭಾಗದಲ್ಲಿ ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಅನುಕೂಲಕರ ಯೋಜನೆಗಳನ್ನು ಜಾರಿ ಮಾಡಬೇಕಿದೆ.

ರಂಜಿತ್‌, ಬ್ಯೂಟಿಫುಲ್‌ ಬೀಸ್‌ ಕಂಪನಿ ಸಂಸ್ಥಾಪಕ

***

ಮಲೆನಾಡು ಭಾಗದಲ್ಲಿ ಜೇನು ಕುಟುಂಬ ಕಡಿಮೆ ಆಗುತ್ತಿದೆ. ಎಲ್ಲೆಂದರಲ್ಲಿ ಜೇನುಗೂಡುಗಳು ಕಾಣುತ್ತಿದ್ದವು. ಈಗ ಪೆಟ್ಟಿಗೆಯಲ್ಲಿ ಮಾತ್ರ ನೋಡುವಂತಾಗಿದೆ.

ಕೆ.ಎಸ್‌. ಕಾಂತರಾಜ್, ಜೇನು ಕೃಷಿಕ ಹಾಗೂ ಸಾವಯವ ರೈತ, ದಬ್ಬೆಗದ್ದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.