ಬುಧವಾರ, ಮಾರ್ಚ್ 3, 2021
22 °C
ನಗರಸಭೆ ಕಚೇರಿ ಎದುರು ಮುಸ್ಲಿಮರ ಪ್ರತಿಭಟನೆ

ಅಕ್ರಮ ಗೋ ಮಾಂಸ ಮಾರಾಟ ಅಂಗಡಿ ಮೇಲೆ ದಾಳಿ; 15 ಗೋವುಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ವಿವಿಧೆಡೆ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಬೆಂಗಳೂರಿನ ಪ್ರಾಣಿ ದಯಾಸಂಘ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮಂಗಳವಾರ ದಾಳಿ ನಡೆಸಿ 15ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ.

ಅಕ್ರಮ ಗೋ ಮಾಂಸ ಮಾರಾಟದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಪ್ರಾಣಿ ದಯಾ ಸಂಘದ ಸಂಚಾಲಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜು ಅವರೊಂದಿಗೆ ನಗರದ ಪೆನ್‍ಷೆನ್ ಮೊಹಲ್ಲಾ, ಟಿಪ್ಪು ನಗರ ಹಾಗೂ ಚಿಪ್ಪಿನಕಟ್ಟೆ ಸುತ್ತ ಮುತ್ತ ಅಕ್ರಮ ಗೋಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಇಟ್ಟಿದ್ದ ಗೋ ಮಾಂಸವನ್ನು ವಶಕ್ಕೆ ಪಡೆದು 15 ಗೋವುಗಳನ್ನು ರಕ್ಷಿಸಿದ್ದಾರೆ.

ಅಕ್ರಮ ಗೋ ಮಾಂಸ ಅಂಗಡಿಗಳ ಮೇಲೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲವು ಅಂಗಡಿ ಮಾಲೀಕರು ಅಂಗಡಿಗೆ ಬೀಗ ಹಾಕಿ ಸ್ಥಳದಿಂದ ಪರಾರಿಯಾದರು. ಮತ್ತೆ ಕೆಲವರು ಸ್ಥಳೀಯರೊಂದಿಗೆ ಸೇರಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಹಾಕಲಾಗಿದೆ.

ನಗರದ ಎಪಿಎಂಸಿ ಎದುರಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ಬದಿಯ ಚಿಪ್ಪಿನಕಟ್ಟೆಯಲ್ಲಿ ಅಕ್ರಮ ದನದ ಮಾಂಸ ಮಾರಾಟ ಅಂಗಡಿ ಮೇಲೆ ದಾಳಿ ನಡೆಸಿದಾಗ ಗೋವುಗಳನ್ನು ತುಂಡು ತುಂಡಾಗಿ ಕತ್ತಿರಿಸಿದ್ದು ಕಂಡು ಬಂತು. ಜಾನುವಾರುಗಳ ದೇಹದ ನಾನಾ ಭಾಗಗಳು ಹಾಗೂ ಕತ್ತರಿಸಲು ಬಳಸುತ್ತಿದ್ದ ಮಚ್ಚು ಪತ್ತೆಯಾದವು.

ದಂಧೆ ಬಯಲಾಗುತ್ತಿದ್ದಂತೆಯೇ ಕೆಲವರು, ಅಧಿಕಾರಿಗಳು ಹಾಗೂ ಪ್ರಾಣಿದಯಾ ಸಂಘದ ಸದಸ್ಯರ ವಿರುದ್ಧ ವಾಗ್ವಾದಕ್ಕೆ ಇಳಿದರು. ಕೆಲವು ಮಹಿಳೆಯರೂ ದಾಳಿ ಮಾಡಿದವರ ವಿರುದ್ಧವೇ ತಿರುಗಿ ಬಿದ್ದರು. ಜೀವ ತೆಗೆಯಲು ತಂದಿದ್ದ ಜೀವಂತ ಗೋವುಗಳನ್ನು ರಕ್ಷಣೆ ಮಾಡಲು ಹೋದಾಗ ಕೆಲವರು ಅದಕ್ಕೆ ಅಡ್ಡಿ ಪಡಿಸಿದರು.  ಮಾರಾಟ ಹಾಗೂ ವಿವಿಧೆಡೆಗೆ ಸಾಗಣೆ ಮಾಡಲು ಸಂಗ್ರಹಿಸಿದ್ದ ಗೋಮಾಂಸವನ್ನು ನಗರಸಭೆ ಸಿಬ್ಬಂದಿ ವಶಪಡಿಸಿಕೊಂಡರು.

ಇದಾದ ಬಳಿಕ 80 ಅಡಿ ರಸ್ತೆ ಮಧ್ಯೆ ಗುಂಪು ಕಟ್ಟಿಕೊಂಡು ನಿಂತಿದ್ದ ಕೆಲವರಿಗೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಅಲ್ಲಿಂದ ಕಳುಹಿಸಿದರು. ಈ ಮಧ್ಯೆ ಕಾರ್ಯಾಚರಣೆ ನಂತರ ಪೊಲೀಸ್ ಅಧಿಕಾರಿಗಳು ವಾಪಸ್ ಹೋಗುವಾಗ ಕೆಲ ಮುಸ್ಲಿಂ ಸಮುದಾಯದವರು ಡಿವೈಎಸ್ಪಿ ಅವರನ್ನು ತಳ್ಳಾಡಿದ ಪ್ರಸಂಗವೂ ನಡೆಯಿತು.

ಈ ಎಲ್ಲಾ ಘಟನೆಗಳು ನಡೆದ ಬಳಿಕ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ನಗರಸಭೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

’ಸಾಕಲು ತಂದಿದ್ದ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಆರೋಪಿಸಿದ ಧರಣಿ ನಿರತರು, ಅಧಿಕಾರಿಗಳ
ವಿರುದ್ಧ ಆಕ್ರೋಶ ಹೊರ ಹಾಕಿದರು.

ಹೈನುಗಾರಿಕೆ ಉದ್ದೇಶದಿಂದ ಖರೀದಿ ಮಾಡಿ ತಂದಿದ್ದ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. 42 ಹಸುಗಳನ್ನು ವಶಕ್ಕೆ ಪಡೆದು ಇದೀಗ ಕೇವಲ ಹತ್ತು ಹಸು ತೋರಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು