ಹಾಸನ: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಗೆ ಶೀಘ್ರ ನ್ಯಾಯ ಒದಗಿಸುವಂತೆ ಹಾಗೂ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಸದಸ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಹಿಮ್ಸ್ ಕಟ್ಟಡದ ಆವರಣದಲ್ಲಿ ಕೆಲಕಾಲ ಧರಣಿ ನಡೆಸಿದ ವೈದ್ಯಕೀಯ ವಿದ್ಯಾರ್ಥಿಗಳು, ಶೀಘ್ರ ನ್ಯಾಯಕ್ಕೆ ಆಗ್ರಹಿಸಿದರು. ಅತ್ಯಾಚಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವೈದ್ಯಕೀಯ ವಿದ್ಯಾರ್ಥಿಗಳು, ಎನ್.ಆರ್. ವೃತ್ತ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ವೈದ್ಯಕೀಯ ಸಂಘದ ಸದಸ್ಯರು ಹಾಗೂ ಹಲವು ವೈದ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ವೈದ್ಯಕೀಯ ಸಂಘದ ಸದಸ್ಯೆ ಡಾ.ಭಾರತಿ ರಾಜಶೇಖರ್, ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹೇಯ ಕೃತ್ಯ ನಡೆಸಿದವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆಯುತ್ತಿದ್ದು, ಸರ್ಕಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಸಾವಿತ್ರಿ ಮಾತನಾಡಿ, ಕೋಲ್ಕತ್ತಾದಲ್ಲಿ ನಡೆದ ಘಟನೆ ದೇಶ ಮತ್ತು ವಿಶ್ವವನ್ನು ಬೆಚ್ಚಿ ಬೀಳಿಸಿದ್ದು, ವೈದ್ಯರು ಎಂತಹ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ. ವೃತ್ತಿಪರರು ಮಾತ್ರವಲ್ಲದೇ, ಆರೋಗ್ಯ ಸೇವೆ ಒದಗಿಸುವ ವೃತ್ತಿಯಲ್ಲಿರುವ ಅನೇಕರನ್ನು ತೀವ್ರ ಆತಂಕಕ್ಕೆ ದೂಡಿದೆ. ಇತರರ ಜೀವ ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ವೈದ್ಯರ ಮೇಲೆ ಇಂತಹ ಕೃತ್ಯ ನಡೆದಿರುವುದು ನೋವುಂಟು ಮಾಡಿದೆ. ಈ ಪ್ರಕರಣ ಕುರಿತು ಪಾರದರ್ಶಕ ತನಿಖೆ ಅಗತ್ಯವಾಗಿದ್ದು, ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.
ಡಾ. ಮೌಮಿತಾ ಅವರ ಕುಟುಂಬದೊಂದಿಗೆ ಇಡೀ ವೈದ್ಯಕೀಯ ಸಮುದಾಯ ಒಗ್ಗಟ್ಟಿನಿಂದ ನಿಲ್ಲುತ್ತದೆ. ಈ ಘಟನೆಗೆ ಶೀಘ್ರ ನ್ಯಾಯ ದೊರೆಯಬೇಕು. ಇಂತಹ ದುರಂತಗಳು ಮರುಕಳಿಸಬಾರದು. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಘದ ಸದಸ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ಎಚ್.ಆರ್. ದೇವದಾಸು, ಕಾರ್ಯದರ್ಶಿ ಡಾ.ದಿನೇಶ್ ಬೈರೇಗೌಡ, ಖಜಾಂಚಿ ಡಾ. ಶ್ವೇತಾ, ಡಾ. ಬಶೀರ್ , ಡಾ.ಎಸ್.ಆರ್. ಕುಮಾರ್, ಡಾ.ಪಾಲಾಕ್ಷ, ಅಮ್ಜದ್ ಖಾನ್, ಸಾಹಿತಿ ರೂಪ ಹಾಸನ್ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಶನಿವಾರ ಸರ್ಕಾರಿ ಮತ್ತು ಖಾಸಗಿ ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದರು. ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಅನಕೃ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿದರು. ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಹೇಯ ಕೃತ್ಯವಾಗಿದ್ದು ಕರ್ತವ್ಯನಿರತ ವೈದ್ಯರು ಮತ್ತು ಸಿಬ್ಬಂದಿಗೆ ರಕ್ಷಣೆ ಇಲ್ಲದೇ ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಸೂಕ್ತ ರಕ್ಷಣೆ ಒದಗಿಸುವ ಜತೆಗೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ವೈದ್ಯರು ಮತ್ತು ಸಿಬ್ಬಂದಿ ಜತೆಗೆ ಸಾರ್ವಜನಿಕರು ಸೌಹಾರ್ದದಿಂದ ವರ್ತಿಸಿ ಸೇವೆ ಪಡೆಯಬೇಕು ಎಂದರು. ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್- 2 ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು. ಡಾ.ನಮ್ರತಾ ಡಾ.ಸುರೇಶ್ ಡಾ.ದಿವ್ಯಾ ಡಾ.ಸಿಂಧು ಡಾ ಸುನಿಲ್ ಡಾ.ಅನಿಲ್ ಡಾ.ಶರತ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಅಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘದ ನಿರ್ದೇಶನದಂತೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಆದರೆ ತುರ್ತು ಚಿಕಿತ್ಸೆ ನೀಡುವ ಮೂಲಕ ತೋರಿದ ಮಾನವೀಯತೆಗೆ ನಾಗರಿಕರ ಮೆಚ್ಚುಗೆಗೆ ಪಾತ್ರರಾದರು. ಅಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಮಾತನಾಡಿ ಕೋಲ್ಕತ್ತದಲ್ಲಿ ನಡೆದ ಅಮಾನುಷ ಕೃತ್ಯ ಎಲ್ಲಿಯೂ ಮರುಕಳಿಸಬಾರದು. ಈ ಕೃತ್ಯ ಖಂಡಿಸಿ ನಮ್ಮ ಪ್ರತಿಭಟನೆಯಿಂದ ನಾಗರಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಕ್ಷಮೆ ಕೇಳುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರಿಗೆ ಪೂಜ್ಯ ಸ್ಥಾನ ನೀಡಿದ್ದಾರೆ. ಅದಕ್ಕೆ ಚ್ಯುತಿಬಾರದಂತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಂತಹ ಘಟನೆಗಳು ವೈದ್ಯರಲ್ಲಿ ಅಭದ್ರತೆಯ ಮನೋಭಾವ ಉಂಟು ಮಾಡುವ ಜತೆಗೆ ಅತ್ಮಬಲವನ್ನು ಕುಗ್ಗಿಸುವ ಸಾಧ್ಯತೆಯೂ ಇದ್ದು ಸೂಕ್ತ ಭದ್ರತೆ ಒದಗಿಸುವ ಮೂಲಕ ಇಂತಹಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಅಗತ್ಯ ಎಂದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರಿಗೆ ಹಾಗೂ ಶುಶ್ರೂಷಕರಿಗೆ ಪಾನಮತ್ತರಿಂದ ಕಿರಿಕಿರಿ ಮತ್ತು ಹಲ್ಲೆ ನಡೆಸಿರುವ ಘಟನೆಗಳೂ ನಡೆದಿದ್ದು ಪ್ರತಿದಿನ ರಾತ್ರಿ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಪ್ರತಿಭಟನೆ ನಿರತ ವೈದ್ಯರು ಒತ್ತಾಯಿಸಿದರು. ಡಾ.ರಮೇಶ್ ಡಾ. ಸತ್ಯಪ್ರಕಾಶ್ ಡಾ. ವಿನಯ್ ಡಾ. ನಾಗೇಂದ್ರ ಡಾ. ಲೋಕೇಶ್ ಡಾ. ಪ್ರತಿಭಾ ಡಾ.ರೇಖಾ ಡಾ. ಅಶ್ವತಿ ಡಾ. ಭವ್ಯ ಡಾ. ದಿನೇಶ್ ಕುಮಾರ್ ಡಾ. ವಿನೋದ್ ಹಾಗೂ ಇತರರು ಕಪ್ಪುಪಟ್ಟಿ ಧರಿಸುವ ಮೂಲಕ ಕರ್ತವ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.