ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಸುಧಾರಿತ ಪಿಂಚಣಿ ಯೋಜನೆ ಜಾರಿ: ಕಂದಾಯ ಸಚಿವ ಆರ್.ಅಶೋಕ್

‘ಅಂಚೆ ಕಚೇರಿ ಮೂಲಕ ನೀಡುವ ಪಿಂಚಣಿ ವ್ಯವಸ್ಥೆ ರದ್ದು’
Last Updated 28 ನವೆಂಬರ್ 2020, 13:14 IST
ಅಕ್ಷರ ಗಾತ್ರ

ಹಾಸನ: ಮುಂದಿನ 15 ರಿಂದ 20 ದಿನಗಳಲ್ಲಿ ರಾಜ್ಯದಲ್ಲಿ ಸುಧಾರಿತ ಹಾಗೂ ಕ್ರಾಂತಿಕಾರಿ ಪಿಂಚಣಿ ಯೋಜನೆ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ಹೇಳಿದರು.

ಚನ್ನರಾಯಪಟ್ಟಣ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಚೆ ಕಚೇರಿ ಮೂಲಕ ನೀಡುವ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಬ್ಯಾಂಕ್‌ ಮೂಲಕ ನೀಡಲಾಗುವುದು. ಅರ್ಹ ಬಡವರಿಗೆ ಅರ್ಜಿ ರಹಿತ ಪಿಂಚಣಿ ಮಂಜೂರು ಹಾಗೂ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬರಲಿದೆ. ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿ ಪ್ರತಿ ವರ್ಷ ಶೇಕಡಾ ಮೂರರಿಂದ ನಾಲ್ಕು ರಷ್ಟು ಹಣ ದುರುಪಯೋಗವಾಗುತ್ತಿದೆ. ಇದರಿಂದ ₹400 ರಿಂದ ₹500 ಕೋಟಿ ಹಣ ನಷ್ಟವಾಗುತ್ತಿದೆ. ಪ್ರತಿ ವರ್ಷ ₹7,500 ಕೋಟಿ ಹಣ ಪಿಂಚಣಿಗೆ ನೀಡಲಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪಿಂಚಣಿದಾರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತಿದೆ. ಎಂದು ವಿವರಿಸಿದರು.

60 ವರ್ಷ ತುಂಬಿದ, ನಾಲ್ಕು ಎಕರೆಗೂ ಕಡಿಮೆ ಜಮೀನು ಇರುವವರೆಲ್ಲರಿಗೂ ಅಧಿಕಾರಿಗಳೆ ಫಲಾನುಭವಿಗಳ ಮನೆ
ಬಾಗಿಲಿಗೆ ತೆರಳಿ ಪಿಂಚಣಿ ಮಂಜೂರು ಮಾಡಲಿದ್ದಾರೆ. ಪಿಂಚಣಿ ವಿತರಣೆಗೆ ಸರ್ಕಾರದಲ್ಲಿ ಹಣಕಾಸಿಗೆ ಯಾವುದೇ ಕೊರತೆ ಇಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಸಾಕಷ್ಟು ಹಣ ಇದೆ. ಹಾಸನ ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ₹22.14 ಕೋಟಿ ಅನುದಾನ ಲಭ್ಯ ಇದೆ ಎಂದು ಅವರು ಅಂಕಿ ಅಂಶ ಒದಗಿಸಿದರು.

ಬಗರ್ ಹುಕುಂ ಸಾಗುವಳಿ ಅರ್ಜಿ ಪರಿಶೀಲನೆಗೆ ಶೇಕಡಾ 90 ರಷ್ಟು ಸಕ್ರಮ ಸಮಿತಿಗಳನ್ನು ರಚಿಸಲಾಗಿದೆ. ಉಳಿದ
ಸಮಿತಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡುವ ಬಗ್ಗೆಯೂ ಬೇಡಿಕೆ ಇದ್ದು, ಸದನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ 185 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದ್ದು, ಹಾಸನ ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರ, ಹೊಳೆನರಸೀಪುರ, ಹಾಸನ ತಾಲ್ಲೂಕುಗಳ ಪ್ರವಾಹ ಪೀಡಿತ ಪಟ್ಟಿಯಲ್ಲಿವೆ. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ನೆರೆ ಹಾವಳಿಯಿಂದ ಹಾನಿಗೀಡಾಗಿರುವ 348 ಮನೆಗಳಿಗೆ ₹1.68 ಕೋಟಿ ಹಾಗೂ ಬೆಳೆ ನಷ್ಟವಾಗಿರುವ 13,473 ರೈತರನ್ನು ಗುರುತಿಸಿ ₹9.28 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿಗೂ ಚಾಲನೆ ನೀಡಲಾಗಿದ್ದು, 14ನೇ ಹಣಕಾಸಿನಲ್ಲಿ‌ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮತ್ತು ಪ್ರತಿ ಹಳ್ಳಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಚಿವರಾದ ಎಸ್.ಟಿ‌ ಸೋಮಶೇಖರ್, ನಾರಾಯಣಗೌಡ, ಶಾಸಕ ಪ್ರೀತಂ ಗೌಡ, ಎಸ್‌ಸಿ ಮೊರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಮುಖಂಡ ಎ.ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT