ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಕಾಡಿಗೆ ಅಟ್ಟಲು ಹರಸಾಹಸ

ಮೆಕ್ಕೆಜೋಳ, ಕಾಫಿ, ಶುಂಠಿ ಬೆಳೆ ಹಾನಿ ಮಾಡಿದ ಕಾಡಾನೆಗಳು
Last Updated 3 ಸೆಪ್ಟೆಂಬರ್ 2019, 15:04 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಮಳೆಯ ನಡುವೆಯೂ ಗಜ ಗಲಾಟೆ ಮುಂದುವರಿದಿದೆ.

ಮೂರ್ನಾಲ್ಕು ದಿನಗಳಿಂದ ಆಲೂರು ತಾಲ್ಲೂಕಿನ ವಿವಿಧೆಡೆ ಓಡಾಡುತ್ತಿದ್ದ 6 ಸಲಗಗಳು ಚಿಗಳೂರು, ನಿಡನೂರು ಬಳಿ ಕಾಣಿಸಿಕೊಂಡುಆತಂಕಉಂಟು ಮಾಡಿದ್ದವು. ಸಂಜೆ ನಂತರ ಮೆಕ್ಕೆಜೋಳ ಹಾಗೂ ಕಾಫಿ ತೋಟದ ಮಧ್ಯೆ ಬೀಡು ಬಿಟ್ಟಿದ್ದ ಗಜಪಡೆಯನ್ನು ಸಂಜೆ ನಂತರ ಕಾಡಿಗೆ ಸಾಗ ಹಾಕಲಾಯಿತು.

ಆನೆಗಳು ಎಲ್ಲೆಂದರಲ್ಲಿ ನಡೆದಾಡಿರುವುದರಿಂದ ಶುಂಠಿ, ಮೆಕ್ಕೆಜೋಳ, ಕಾಫಿ ಸೇರಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುವಂತಾಗಿದೆ.

ಜೋರು ಮಳೆಯಿಂದ ಕಾಫಿ ಬೆಳೆ ನಷ್ಟದ ಭೀತಿಯಲ್ಲಿರುವ ಜನರಿಗೆ ಕಾಡಾನೆಗಳು ಮತ್ತಷ್ಟು ನಷ್ಟ ತಂದೊಡ್ಡಿವೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸಲಗ ಗ್ರಾಮಕ್ಕೆ ಬಾರದಂತೆ ಮುನ್ನೆಚ್ಚರಿಕೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದರು.

ಹರೆಹಳ್ಳದ ಕೊಪ್ಪಲು ರೈತರಾದ ದ್ಯಾವಪ್ಪ, ಅಪ್ಪಣ್ಣಶೆಟ್ಟಿ, ತಮ್ಮಣ್ಣಿ, ಗಣೇಶ್, ಬೋರಣ್ಣ, ಮಲ್ಲೇಶ್, ಮಂಜಣ್ಣ ಎಂಬುವರಿಗೆ ಸೇರಿದ ಸುಮಾರು ಹತ್ತು ಎಕರೆ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ, ಫಸಲಿಗೆ ಬಂದಿದ್ದ ಮೆಕ್ಕಜೋಳವನ್ನು ತಿಂದು-ತುಳಿದು ನಾಶಗೊಳಿಸಿವೆ.

ಸಲಗಗಳ ಆಟಾಟೋಪದಿಂದ ಮಗೆಹಳ್ಳಿ, ದಾನಿಹಳ್ಳಿ, ಕೊಟ್ಟಿಗನಹಳ್ಳಿ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ.

‘ಕಾಡಾನೆ ಮರಳಿ ಬಾರದಂತೆ ಸೆರೆ ಹಿಡಿದು ಸ್ಥಳಾಂತರ ಮಾಡಬೇಕು. ಜೊತೆಗೆ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಬೆಳೆ ಕಳೆದುಕೊಂಡಿರುವ ರೈತ ಮಹಿಳೆ ಗೀತಾ ಒತ್ತಾಯಿಸಿದರು.

ಗ್ರಾಮಗಳ ಬಂದಿದ್ದ ಆನೆಗಳನ್ನು ನೋಡಲು ಜನರು ಮುಗಿ ಬಿದ್ದಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

‘ಆಹಾರ ಹುಡುಕಿಕೊಂಡು ಬಂದಿರುವ ಗಜಪಡೆ ದೊಡ್ಡ ಬೆಟ್ಟ ಅರಣ್ಯಕ್ಕೆ ತೆರಳಲಿವೆ. ಆನೆ ದಾಳಿಯಿಂದ ಹಾನಿಯಾಗಿರುವ ಬೆಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಮತ್ತು ನಷ್ಟದ ಅಂದಾಜು ತಯಾರಿಸಿ ಶೀಘ್ರವೇ ಇಲಾಖೆಯಿಂದ ಅಗತ್ಯ ಪರಿಹಾರ ನೀಡಲಾಗುವುದು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾಡಾನೆಗೆ ತೊಂದರೆ ನೀಡಬಾರದು. ರಾತ್ರಿ ಹೊತ್ತು ಒಂಟಿಯಾಗಿ ಓಡಾಡಬಾರದು’ ಎಂದು ನಾಗರಗಾಳಿ ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ಅವರ ರೈತರು ಹಾಗೂ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT