ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ಬಿಜೆಪಿ ರಣಕಹಳೆ: 50 ಸಾವಿರ ಜನರೊಂದಿಗೆ ಪ್ರೀತಂ ಗೌಡ ಶಕ್ತಿ ಪ್ರದರ್ಶನ

Last Updated 14 ಏಪ್ರಿಲ್ 2023, 11:44 IST
ಅಕ್ಷರ ಗಾತ್ರ

ಹಾಸನ: ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಣಕಹಳೆ ಊದಿದ್ದು, ಸ್ಥಳೀಯ ಶಾಸಕ ಪ್ರೀತಂ ಗೌಡರು, ಸುಮಾರು 50 ಸಾವಿರ ಜನರೊಂದಿಗೆ ನಾಮಪತ್ರಕ್ಕೂ ಮುನ್ನ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.

ಬೆಳಿಗ್ಗೆ 9 ಗಂಟೆಗೆ ನಗರದ ಸಾಲಗಾಮೆ ರಸ್ತೆಯ ಜಿಲ್ಲಾ ಕ್ರೀಡಾಂಗಣ ಎದುರು ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಹಾಸನ ವಿಧಾನಸಭಾ ಕ್ಷೇತ್ರದ ನಗರ ಹಾಗೂ ನಾನಾ ಗ್ರಾಮಗಳಿಂದ ಬಂದಿದ್ದ ಪ್ರೀತಂ ಗೌಡರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಅಲ್ಲಿಂದ ನಗರದ ಎನ್.ಆರ್. ವೃತ್ತದವರೆಗಿನ ಮೆರವಣಿಗೆ ನಡೆಸಿದ್ದು, ರಸ್ತೆಯ ಎರಡು ಬದಿಯಲ್ಲೂ ಜನಸ್ತೋಮವೇ ತುಂಬಿ ಹೋಗಿತ್ತು.

ರ‍್ಯಾಲಿಯ ಉದ್ದಕ್ಕೂ ಪ್ರೀತಂ ಗೌಡರ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ‘ಮತ್ತೊಮ್ಮೆ ಪ್ರೀತಂ ಗೌಡ ಎಂಎಲ್ಎ’ ಎಂಬ ಘೋಷಣೆ ಕೂಗಿದರು. ಯುವಕರು, ಪುರುಷರು, ಮಹಿಳೆಯರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಧ್ವನಿಗೂಡಿಸಿದರು.

ಹಾಸನ ವಿಧಾನಸಭೆ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿ ಸೇರಿದಂತೆ, ನಗರಸಭೆ ವ್ಯಾಪ್ತಿಯ ಬಡಾವಣೆಗಳ ಸಾವಿರಾರು ಕಾರ್ಯಕರ್ತರು ಬಸ್, ಟೆಂಪೊ, ಬೈಕ್ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಬಂದಿದ್ದು ಕಂಡುಬಂತು.

ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಬಿಳಿಯ ಟೋಪಿಯನ್ನು ಧರಿಸಿ, ಬಿಜೆಪಿ ಶಾಲನ್ನು ಹೊದ್ದು, ಬಾವುಟವನ್ನು ಹಿಡಿದು, ಪಕ್ಷ ಹಾಗೂ ಪ್ರೀತಂ ಗೌಡರ ಪರ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಸಾಗಿದರು. ಸಹಸ್ರಾರು ಜನರ ಮಧ್ಯೆ ರೋಡ್ ಶೋನಲ್ಲಿ ಭಾಗವಹಿಸಿದ ಪ್ರೀತಂ ಗೌಡ, ಪ್ರತಿಯೊಬ್ಬ ಕಾರ್ಯಕರ್ತರಿಗೆ ಹಾಗೂ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೈಬೀಸಿ ನಮಸ್ಕರಿಸಿದರು.

ನಂತರ ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಶಾಸಕನಾಗಲು ಸಂವಿಧಾನ ಕಾರಣ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ, ’ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಕುಟುಂಬದ ಯುವಕನಿಗೆ ಶಾಸಕ ಸ್ಥಾನ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತ ಶಾಸಕನಾಗಲು ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಕಾರಣ’ ಎಂದು ಹೇಳಿದರು‌.

’ಇಂದು ಅಂಬೇಡ್ಕರ್ ಅವರ ಜನ್ಮದಿನ ಹಾಗೂ ರಂಜಾನ್ ಪ್ರಯುಕ್ತ ಉಪವಾಸ ಕೈಗೊಂಡಿರುವ ಮುಸ್ಲಿಮರಿಗೆ ಪವಿತ್ರ ದಿನ. ಹಿಂದೂ ಸಂಪ್ರದಾಯದ ಪ್ರಕಾರ ಶುಕ್ರವಾರ ಲಕ್ಷ್ಮಿ ದೇವತೆಯ ದಿನವಾಗಿದೆ. ನವೆಂಬರ್ 14 ನನ್ನ ಜನ್ಮದಿನ. ಇಂದು ಏಪ್ರಿಲ್ 14. 14 ಸಂಖ್ಯೆ ನನಗೆ ಲಕ್ಕಿ ನಂಬರ್. ಹಾಗಾಗಿ ನಾಮಪತ್ರ ಪೂರ್ವ ರ‍್ಯಾಲಿ ಹಮ್ಮಿಕೊಳ್ಳಲಾಯಿತು’ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದ ಜನರು ಸಂಕಲ್ಪ ಮಾಡಿದ್ದು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜನ ನನಗೆ ಒಂದು ಲಕ್ಷ ಮತಗಳನ್ನು ನೀಡುವ ಮೂಲಕ ಮನೆಯ ಮಗ, ಸಾಮಾನ್ಯ ಕುಟುಂಬದ ಯುವಕ ಎರಡನೇ ಬಾರಿ ಶಾಸಕನಾಗಲು ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಜಿಲ್ಲಾ ಕ್ರೀಡಾಂಗಣದಿಂದ ರ‍್ಯಾಲಿ ಆರಂಭಿಸಿ ನಾಮಪತ್ರ ಸಲ್ಲಿಸಲಾಗಿತ್ತು. ಆಗಲೂ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದರು. ಈ ಬಾರಿಯೂ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ಇಂದಿನ ರ‍್ಯಾಲಿ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಸುರೇಶ್ ಕುಮಾರ್ ಹಾಗೂ ಮುಖಂಡರು ಭಾಗವಹಿಸಿದ್ದರು.

ಜೆಡಿಎಸ್‌ ಪಕ್ಷವೇ ನೇರ ಪ್ರತಿಸ್ಪರ್ಧಿ
ಈ ಬಾರಿಯ ಚುನಾವಣೆಯಲ್ಲಿ ನನಗೆ ಜೆಡಿಎಸ್ ಪಕ್ಷವೇ ನೇರ ಪ್ರತಿಸ್ಪರ್ಥಿಯಾಗಿದ್ದು, ಆ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿದೆ. ಇದು ಬಸ್ ಅಥವಾ ರೈಲ್ವೆ ಟಿಕೆಟ್ ಅಲ್ಲ ಎಂಬುದು ಅವರು ತಿಳಿಯಬೇಕು ಎಂದು ಪ್ರೀತಂ ಗೌಡ ಟೀಕಿಸಿದರು.

ಐದು ವರ್ಷ ಉತ್ತಮ ಆಡಳಿತ ನೀಡುವ ಮೂಲಕ ನಿಮ್ಮ ಸೇವೆ ಮಾಡಿದ್ದು, ನನ್ನ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. 25 ವರ್ಷ ಹಾಸನ ಕ್ಷೇತ್ರದಲ್ಲಿ ಆಗದಂತಹ ಅಭಿವೃದ್ಧಿಯನ್ನು ನಿಮ್ಮ ಆಶೀರ್ವಾದದಿಂದ ಐದು ವರ್ಷದಲ್ಲಿ ಮಾಡಿದ್ದೇನೆ. ಮತ್ತೊಮ್ಮೆ ಅವಕಾಶ ನೀಡುವ ಬಲವಾದ ವಿಶ್ವಾಸ ಇದೆ ಎಂದರು.

ಈ ಬಾರಿಯ ವಿಧಾನಸಭೆ ಚುನಾವಣೆಬತಿತಗ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದ್ದು, ನನ್ನೊಂದಿಗೆ ಬೇಲೂರು, ಅರಸೀಕೆರೆ, ಸಕಲೇಶಪುರ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳೂ ಗೆದ್ದು ನನ್ನೊಂದಿಗೆ ವಿಜಯೋತ್ಸವ ಆಚರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

*
ಶುಕ್ರವಾರ ನಡೆದ ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ ಮೊಳಗಿನ ಜನರ ಜೈಕಾರ ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೂ ಕೇಳಿಸಲಿದೆ.
-ಪ್ರೀತಂ ಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT