ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ರಾಜ ಮನೆತನದವರಲ್ಲ, ಬಡ ರೈತನ ಮಕ್ಕಳು: ಎಚ್.ಡಿ. ಕುಮಾರಸ್ವಾಮಿ

Last Updated 13 ಸೆಪ್ಟೆಂಬರ್ 2022, 12:23 IST
ಅಕ್ಷರ ಗಾತ್ರ

ಹಾಸನ: ನಾವು ರಾಜ ಮನೆತನದವರಲ್ಲ. ಬಡ ರೈತನ ಮಕ್ಕಳು. ಅಧಿಕಾರ ಇರಲಿ, ಇಲ್ಲದಿರಲಿ ನಾವು ಅದನ್ನು ಮರೆತಿಲ್ಲ. ಜಿಲ್ಲೆಯ ರಾಜಕೀಯ ಗೊಂದಲ ಗಮನಿಸಿದ್ದೇನೆ. ನಮ್ಮ ನಡುವಳಿಕೆಯಲ್ಲಿ ಏನಾದರೂ ದೋಷಗಳಿದ್ದರೆ, ತಪ್ಪುಗಳಾಗಿದ್ದರೆ, ನಿಮ್ಮ ಮನೆಯ ಮಕ್ಕಳನ್ನು ಕ್ಷಮಿಸಲ್ವಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕೇಳಿದರು.

ಮಾಜಿ ಶಾಸಕ ದಿ.ಎಚ್.ಎಸ್. ಪ್ರಕಾಶ್ 71 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇವಣ್ಣ ಅವರ ಬಗ್ಗೆ ಇಲ್ಲಿನ ಶಾಸಕರು ಮಾತನಾಡಿದ್ದಾರೆ. ರೇವಣ್ಣ ಶಿಕ್ಷಣ ಬಿಟ್ಟು ಕುಟುಂಬದ ನಿರ್ವಹಣೆಗೆ ಹೊಲದಲ್ಲಿ ದುಡಿದವರು. ರೇವಣ್ಣ ಸ್ವಲ್ಪ ಒರಟಾಗಿ ಮಾತನಾಡಿರಬಹುದು‌‌. ಆದರೆ ಜಿಲ್ಲೆಯ ಪ್ರತಿಯೊಂದು ಸಣ್ಣ ಸಣ್ಣ ಪ್ರಯತ್ನವನ್ನು ಮಾಡಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಅಪರೂಪದ ಪ್ರಾಮಾಣಿಕ ರಾಜಕಾರಣಿ ಎಂದು ಹೇಳಿದರು.

ಶ್ರೀಮಂತರಿಗಾಗಿ ವಿಮಾನ ನಿಲ್ದಾಣ ಮಾಡಲು ಯೋಚನೆ ಮಾಡಿರಲಿಲ್ಲ. ಇಲ್ಲಿನ ಆಲೂಗಡ್ಡೆ, ಕಾಫಿ ಸೇರಿದಂತೆ ಜಿಲ್ಲೆಯ ಕೃಷಿ‌ ಉತ್ಪನ್ನಗಳಿಗೆ ರಫ್ತಿಗೆ ಅನುಕೂಲ ಆಗಬೇಕು ಎಂದು ದೇವೇಗೌಡರು ಯೋಚಿಸಿದ್ದರು. ‌2007 ರಲ್ಲಿ‌ ವಿಮಾನ ನಿಲ್ದಾಣಕ್ಕೆ ಅನುಮೋದನೆ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ನಮ್ಮ ಬಳಿ ಬರುವವರು ಬಡಜನರು. ಅವರ ಬಗ್ಗೆ ನಾವು ಚಿಂತನೆ ಮಾಡುತ್ತೇವೆ. ಬಡಾವಣೆ ರಚನೆ ಮಾಡಲು ದೇವೇಗೌಡರ ಮಕ್ಕಳು ಬಂದಿಲ್ಲ‌ ಎಂದು ಶಾಸಕ ಪ್ರೀತಂ ಗೌಡ ಅವರಿಗೆ ತಿರುಗೇಟು ನೀಡಿದರು.

ಓದಿ...ರಸ್ತೆಗೆ ಹಾಕಿದ ಡಾಂಬರಿಗಿಂತ ರಾಗಿ ಹಿಟ್ಟೇ ಹೆಚ್ಚುಸ್ಟ್ರಾಂಗ್:ಕಾಂಗ್ರೆಸ್ ಕಿಡಿ

ಆಲೂಗಡ್ಡೆ ನಷ್ಟವಾದಾಗ‌ ₹50 ಕೋಟಿ ಪರಿಹಾರ ಕೊಡಿಸಿದವರು ರೇವಣ್ಣ. ಅರಸೀಕೆರೆ ತೆಂಗು ಬೆಳೆಗಾರರಿಗೆ ₹56 ಕೋಟಿ ಪರಿಹಾರ ನೀಡಿದ್ದೇನೆ.‌ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ ಈ ಶಾಸಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸದಲ್ಲಿ ಇದೇ ಸಿದ್ದರಾಮಯ್ಯ ರಾಹುಲ್ ಗಾಂದಿ ಅವರ ಬಾಯಲ್ಲಿ ಬಿಜೆಪಿ ‘ಬಿ’ ಟೀಂ ಎಂದು ಹೇಳಿದ್ದು ಎಚ್.ಎಸ್. ಪ್ರಕಾಶ್ ಅವರ ಸೋಲಿಗೆ ಕಾರಣವಾಯಿತು.‌ ಅದರ ಪ್ರತಿಫಲವಾಗಿ ಪ್ರೀತಂ ಗೌಡ ಶಾಸಕರಾಗಿದ್ದು ಎಂದರು.

ಬೆಂಗಳೂರು- ಹಾಸನ ಚತುಷ್ಪಥ, ಮೈಸೂರು-ಅರಸೀಕೆರೆ ಬ್ರಾಡಗೇಜ್ ಆಗಿದೆ. ಇದರಲ್ಲಿ‌ ಪ್ರಯಾಣಿಸುವವರು ಶ್ರೀಮಂತರ ಮಕ್ಕಳಾ? ಇವರ ಯೋಗ್ಯತೆಗೆ ಹಾಸನ- ಸಕಲೇಶಪುರ ರಸ್ತೆ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ನಾನು ನೀಡಿದ ಅನುದಾನವನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಇವರ ಸರ್ಕಾರವೇ ಕಾರಣ. 2006 ರಲ್ಲಿ ನನ್ನ ಬಳಿ ಬಂದು ಹಾಸನ ನಗರಕ್ಕೆ ಮಹಿಳಾ ಕಾಲೇಜು ಬೇಕು ಎಂದು ರೇವಣ್ಣ, ಪ್ರಕಾಶ್ ಅರ್ಜಿ ತೆಗೆದುಕೊಂಡು ಬಂದಿದ್ದರು. ಅದರಿಂದಾಗಿ 189 ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಲಾಯಿತು ಎಂದು ತಿಳಿಸಿದರು.

ಓದಿ...ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ: ಬೊಮ್ಮಾಯಿ

ದೇವೇಗೌಡರನ್ನು 1989 ರಲ್ಲಿ ಜನ ಎರಡೂ ಕಡೆ ಸೋಲಿಸಿದರು. 1991 ರಲ್ಲಿ ಜನರು ಲೋಕಸಭೆಯಲ್ಲಿ ಗೆದ್ದರು. ಇದು ಜಿಲ್ಲೆಯ ಜನರ ಆಶೀರ್ವಾದ. ಅವರಿಗೆ ರಾಜಕೀಯ ಮರುಹುಟ್ಟು ನೀಡಿದವರು ಹಾಸನದ ಜನತೆ ಎಂದು ತಿಳಿಸಿದರು.

70 ವರ್ಷ ದೇವೇಗೌಡರು, ಎರಡು ವರ್ಷ ಮುಖ್ಯಮಂತ್ರಿಯಾಗಿ‌ ಎಷ್ಟು ಆಸ್ತಿ‌ ಮಾಡಿದ್ದೇವೆ, ಮೂರು ‌ವರ್ಷದಲ್ಲಿ ಇಲ್ಲಿನ ಶಾಸಕರು ಎಷ್ಟು ಆಸ್ತಿ ಮಾಡಿದ್ದಾರೆ ನೋಡೋಣ ಎಂದು ಸವಾಲು ಹಾಕಿದರು.

ಮೋದಿ ಅವರು ಪ್ರತಿಪಕ್ಷದವರನ್ನು ಇಡಿ, ಸಿಬಿಐ ದಾಳಿ ನಡೆಸಿದ್ದಾರೆ. ಆದರೆ, ನಮ್ಮ ಕುಟುಂಬಕ್ಕೆ ಏನು ಮಾಡಲು ಸಾಧ್ಯವಾಗಿದೆ ಎಂದು ಕೇಳಿದರು.

ಚುನಾವಣೆಯಲ್ಲಿ‌ ಏಳೂ ಕ್ಷೇತ್ರಗಳಲ್ಲಿ‌ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ. 75 ವರ್ಷ‌ ಬೇರೆ ಸರ್ಕಾರಗಳನ್ನು ನೋಡಿದ್ದೀರಿ. ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.

1104 ಕೋಟಿ ಸಾಲಮನ್ನಾ ಮಾಡಿದ್ದೇನೆ.‌ ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡಿದರೋ, ಶ್ರೀಮಂತರ ಸಾಲ‌ಮನ್ನಾ ಮಾಡಿದರೋ‌ ಎಂಬುದನ್ನು ಈ ವ್ಯಕ್ತಿ ಕೇಳಿಬರಲಿ ಎಂದು ತಿರುಗೇಟು ನೀಡಿದರು.

ನಾವು ಬದುಕಿರುವುದು ಬಡಜನರು, ರೈತರಿಗಾಗಿ. ನೀವು ನಮ್ಮ ಜೆಡಿಎಸ್ ಕುಟುಂಬವನ್ನು ಆಶೀರ್ವದಿಸಿ. ದೇವೇಗೌಡರ ಕನಸನ್ನು ಈಡೇರಿಸುವ ಸವಾಲು ಸ್ವೀಕರಿಸಿದ್ದೇವೆ. ಅದನ್ನು ಪೂರೈಸಲು ನಮಗೆ ಶಕ್ತಿ‌ ನೀಡಿ.ನಿಮ್ಮೆಲ್ಲರ ಭಾವನೆಗಳ‌‌ ವಿರುದ್ಧ ಯಾವುದೇ ನಿರ್ಣಯ ಆಗುವುದಿಲ್ಲ. ಪಕ್ಷ ಉಳಿಸಲು ತಲೆಕೊಟ್ಟಿದ್ದೇವೆ.

2008ರಲ್ಲಿ‌ ಮಧುಗಿರಿಯಲ್ಲಿ ರಾಜಕೀಯವೇ ಗೊತ್ತಿಲ್ಲದ ಅನಿತಾ ಕುಮಾರಸ್ವಾಮಿ‌ ಅವರನ್ನು ‌ನಿಲ್ಲಿಸಿದರು. ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಅನಾಥರಾಗಿದ್ದರು. ಅಲ್ಲಿ ಅನಿತಾ ಅವರನ್ನು‌ ನಿಲ್ಲಿಸಿದರು. 2018 ರಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾಯಿತು.

ಹಾಸನ ಕ್ಷೇತ್ರದಲ್ಲಿ‌ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ‌ ಗೆಲ್ಲಿಸುವ ಸಂಕಲ್ಪವನ್ನು ಈಡೇರಿಸಲು ಶಕ್ತಿ‌ ತುಂಬಬೇಕು. ನಮ್ಮ ಕುಟುಂಬದ ಎಲ್ಲರ‌ ಸಹಮತದೊಂದಿಗೆ‌ ಸವಾಲು ಸ್ವೀಕರಿಸಿದ್ದೇವೆ ಎಂದರು.

ಹಾಸನಾಂಬೆ ದರ್ಶನಕ್ಕೆ‌ ದೇವೇಗೌಡರು ಬರಲಿದ್ದಾರೆ ಎನ್ನುವ ವಿಶ್ವಾಸವಿದೆ. ದೇವೇಗೌಡರ‌ ವಿರುದ್ಧ ಹೋಗಿ ಅವರಿಗೆ ನೋವು ಕೊಟ್ಟೆ. ಆದರೆ, ಈಗ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆ ಆಗಬೇಕು ಎಂದು ಹೋರಾಡುತ್ತಿದ್ದೇನೆ ಎಂದರು.

ನನಗೆ ಸ್ವರೂಪ್, ಪ್ರಜ್ವಲ್, ಸೂರಜ್ ಬೇರೆಯಲ್ಲ. ಎಲ್ಲರೂ ನನ್ನ ಕುಟುಂಬ. ಜೆಡಿಎಸ್‌ನನ ಆಧಾರಸ್ತಂಭ ಯುವಕರು‌ ಎಂದರು. ಜಿಲ್ಲೆಯ‌ ರಾಜಕಾರಣದಲ್ಲಿ ಗೊಂದಲ‌ ಇರುವುದನ್ನು ಗಮನಿಸಿದ್ದೇನೆ. ನಮ್ಮ ರಾಜಕೀಯ ಹೋರಾಟಕ್ಕೆ ಶಕ್ತಿ ತುಂಬಿದವರು ಜಿಲ್ಲೆಯ ಜನ.‌ 1962 ರಲ್ಲಿ‌ ದೇವೇಗೌಡರನ್ನು ಹೊಳೆನರಸೀಪುರದ ಜನ ಆಶೀರ್ವದಿಸಿದರು. ಈ ದೇಶದ ಪ್ರಧಾನಿ ಆಗುವಷ್ಟು ಶಕ್ತಿ‌ ತುಂಬಿದ್ದಾರೆ‌ ಎಂದು ಹೇಳಿದರು.

ಪಕ್ಷದ ವತಿಯಿಂದ‌ ಮನೆ ಕಳೆದುಕೊಂಡವರಿಗೆ 265 ಕುಟುಂಬದವರಿಗೆ ತಲಾ ₹15 ಸಾವಿರ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT