ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ, ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ: HDK

Published 10 ಡಿಸೆಂಬರ್ 2023, 14:38 IST
Last Updated 10 ಡಿಸೆಂಬರ್ 2023, 14:38 IST
ಅಕ್ಷರ ಗಾತ್ರ

ಹಾಸನ: ‘ತಮ್ಮ ಅಕ್ರಮಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜೊತೆ ಚೌಕಾಸಿ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು, 50–60 ಶಾಸಕರನ್ನು ಕರೆದುಕೊಂಡು ಹೋಗಲು ಸಿದ್ಧವಾಗಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಈ ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ. ಪ್ರಭಾವಿ ಸಚಿವರೊಬ್ಬರು ತಮ್ಮ ಮೇಲಿರುವ ಅಕ್ರಮಗಳಿಂದ ಪಾರಾಗಲು ಹರಸಾಹಸ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಕೈ,ಕಾಲು ಕಟ್ಟುತ್ತಿದ್ದಾರೆ. 50–60 ಶಾಸಕರನ್ನು ಕರೆದುಕೊಂಡು ಬೇಲಿ ಹಾರಲು ತಯಾರಿ ನಡೆಸುತ್ತಿದ್ದಾರೆ ಎಂದು ಯಾರೋ ಮೊನ್ನೆ ನನಗೆ ಮಾಹಿತಿ ನೀಡಿದರು’ ಎಂದರು.

‘ಪ್ರಭಾವಿ ಸಚಿವರು ಯಾರು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಣ್ಣಪುಟ್ಟವರು ಹೋಗಲು ಆಗುತ್ತದೆಯೇ? ದೊಡ್ಡವರು, ಅದರಲ್ಲೂ ಪ್ರಭಾವಿಗಳೇ ಈ ಸಾಹಸ ಮಾಡಲು ಸಾಧ್ಯ. ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದುಬಿಡ್ತಿನಿ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಬೇಡಿಕೊಂಡು ಹೋಗಿದ್ದು ಗೊತ್ತು’ ಎಂದು ಉತ್ತರಿಸಿದರು.

‘ಮಹಾರಾಷ್ಟ್ರದಲ್ಲಾದಂತೆ ಇಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಲ್ಲೂ ಪ್ರಾಮಾಣಿಕತೆ, ನಿಷ್ಠೆ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಬೇಕೋ ಅದನ್ನು ಮಾಡಿಕೊಂಡು ಹೋಗುತ್ತಿದ್ದಾರಷ್ಟೆ. ಇವತ್ತು ಇಲ್ಲಿ ಇರುತ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ಇಂದಿನ ರಾಜಕಾರಣ’ ಎಂದರು.

ಮುಖ್ಯಮಂತ್ರಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹರಿಪ್ರಸಾದ್ ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರ ಬರುತ್ತವೆ. ಅಧಿಕಾರದಲ್ಲಿ ಉಳಿದುಕೊಳ್ಳಲು ವ್ಯಾಪಾರಕ್ಕೆ ಹೋಗಿದ್ದಾರೆ. ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿಯೂ ನನಗಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರ ಮುಂದಿನ ಆರು ತಿಂಗಳಲ್ಲಿ ಪತನಗೊಳ್ಳಲಿದೆ.
–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT