ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಸಿಬ್ಬಂದಿ ಪಾತ್ರ ಅನನ್ಯ: ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗೀಶ್

Published 13 ಜನವರಿ 2024, 11:12 IST
Last Updated 13 ಜನವರಿ 2024, 11:12 IST
ಅಕ್ಷರ ಗಾತ್ರ

ಬಾಣಾವರ: ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ. ಪೌಷ್ಟಿಕ ಆಹಾರ ತಯಾರಿಸಿ ನೀಡುವುದರಿಂದ ಮಕ್ಕಳು ಆರೋಗ್ಯವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ದೇಶದ ಆಸ್ತಿಯಾಗುತ್ತಾರೆ. ಇದಕ್ಕೆ ಅಡುಗೆ ಸಿಬ್ಬಂದಿ ಕೊಡುಗೆ ಅನನ್ಯ ಎಂದು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗೀಶ್ ತಿಳಿಸಿದರು.

ಪಟ್ಟಣದ ಮಕ್ಕಳ ಮನೆ ಶಾಲಾ ಆವರಣದಲ್ಲಿ ಬಾಣಾವರ ಹೋಬಳಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಅಡುಗೆ ಸಿಬ್ಬಂದಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳು ಹಸಿವಿನಿಂದ ಪಾಠ ಪ್ರವಚನ ಕಲಿಯಲು ಅಸಾಧ್ಯ ಎಂದು ತಿಳಿದ ಸರ್ಕಾರ 1ರಿಂದ 10 ನೇ ತರಗತಿವರಿಗಿನ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟದ ಸಂಪೂರ್ಣ ಯಶಸ್ಸು ಅಡುಗೆ ಸಿಬ್ಬಂದಿಯವರ ಮೇಲಿದ್ದು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಅಡುಗೆ ಸಿಬ್ಬಂದಿ ಅಡುಗೆ ಮನೆ ಮತ್ತು ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಜತೆಗೆ ಶಾಲೆಗೆ ಬರುವ ಆಹಾರ ಧಾನ್ಯ ಪರಿಶೀಲಿಸಿ ಗುಣಮಟ್ಟ ಖಾತರಿ ಪಡಿಸಿಕೊಳ್ಳಬೇಕು ಎಂದರು.

ಆಹಾರ ಪದಾರ್ಥಕ್ಕೆ ತರಕಾರಿ ಬಳಸಿಕೊಳ್ಳುವ ಮುನ್ನ ಅವುಗಳ ಸ್ವಚ್ಛತೆಗೆ ಮಹತ್ವ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿರುವ ಸಿಬ್ಬಂದಿ ಅದನ್ನು ಸೇವೆ ಎಂದು ಪರಿಗಣಿಸಿ ಅರ್ಪಣಾಭಾವದಿಂದ ದುಡಿಯಬೇಕು. ಬಿಸಿಯೂಟದ ಹಿಂದೆ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ಉದ್ದೇಶವಿದ್ದು ಯಾವುದೇ ಕಾರಣಕ್ಕೂ ಅಡುಗೆ ಸಿಬ್ಬಂದಿ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದರು.

ಅಡುಗೆ ಸಿಬ್ಬಂದಿ ತರಬೇತಿಯಲ್ಲಿ ಸಿಬ್ಬಂದಿಗೆ ಗ್ಯಾಸ್ ಬಳಕೆ, ಅಗ್ನಿ ದುರಂತಗಳು ಸಂಭವಿಸದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಮುಖ್ಯ ಶಿಕ್ಷಕಿ ಸರೋಜಾ ನಿಂಬಣ್ಣನವರ್, ಬಾಣಾವರ ಹೋಬಳಿಯ ಸಿಆರ್‌ಪಿಗಳು, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ಭಾಗವಹಿಸಿದ್ದರು. ಅಡುಗೆ ಸಿಬ್ಬಂದಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT