ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಶಾ ಹೇಳಿದರೆ ಕುಮಾರಸ್ವಾಮಿ ಸ್ಪರ್ಧೆ: ಎಚ್.ಡಿ. ದೇವೇಗೌಡ

Published 25 ಜನವರಿ 2024, 14:25 IST
Last Updated 25 ಜನವರಿ 2024, 14:25 IST
ಅಕ್ಷರ ಗಾತ್ರ

ಹಾಸನ: ‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹೇಳಿದರೆ, ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ,ತುಮಕೂರು, ಚಿಕ್ಕಬಳ್ಳಾಪುರ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಮೋದಿ ಹಾಗೂ ಶಾ ಅವರಿಗೆ ಸೇರಿದ್ದು’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಖಿಲ್ ಕುಮಾರಸ್ವಾಮಿ ಈ ಬಾರಿ ಸ್ಪರ್ಧೆ ಮಾಡುವುದು ಬೇಡ ಎನ್ನುವ ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಆದರೆ ನಿಖಿಲ್ ಅಥವಾ ಕುಮಾರಸ್ವಾಮಿ ನಿಲ್ಲಬೇಕೆಂದು ಮಂಡ್ಯದ ಜನ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ತಿಳಿಸಿದ್ದಾರೆ’ ಎಂದರು.

‘ನಿಖಿಲ್ ಸಿನಿಮಾ ಕ್ಷೇತ್ರದಲ್ಲಿದ್ದು, ಎಲ್ಲ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ದೆಹಲಿಯಲ್ಲಿ ನಿಖಿಲ್‌ ಇದ್ದದ್ದು ಸತ್ಯ. ಉತ್ತರ ಪ್ರದೇಶದ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿರುವುದೂ ನಿಜ. ಆದರೆ, ಮಗ, ತಾವು ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎನ್ನುವುದು ಕುಮಾರಸ್ವಾಮಿ ಅವರ ಮನಸ್ಸಿನಲ್ಲಿದೆ’ ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರು, ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಅವರ ಜೊತೆ ಚುನಾವಣೆ ಸಂಬಂಧ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಸೀಟು ಹಂಚಿಕೆ ವಿಷಯದಲ್ಲಿ ಅವರು ತೀರ್ಮಾನಕ್ಕೆ ಬರುತ್ತಾರೆ. ನಾನು ಮಧ್ಯಪ್ರವೇಶ ಮಾಡುವುದಿಲ್ಲ. ನಮಗೆ ಎಷ್ಟು ಸೀಟು, ಎಲ್ಲೆಲ್ಲಿ ಕೊಡುತ್ತಾರೆ ಎಂಬುದನ್ನು ನಾನು ಚರ್ಚೆ ಮಾಡುವುದಿಲ್ಲ’ ಎಂದು ಹೇಳಿದರು.

‘ಮುಂದಿನ ವಾರ ದೆಹಲಿಯಲ್ಲಿ ಕುಮಾರಸ್ವಾಮಿ, ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ಕುಳಿತು ತೀರ್ಮಾನ ಮಾಡಬಹುದು. ಆ ಸಂದರ್ಭದಲ್ಲಿ ನಾನು ದೆಹಲಿಯಲ್ಲಿ ಇರುತ್ತೇನೆ’ ಎಂದರು.

‘ಮಮತಾ ಬ್ಯಾನರ್ಜಿ ‘ಇಂಡಿಯಾ’ ಒಕ್ಕೂಟದಿಂದ ದೂರ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ದೇವೇಗೌಡ, ಮಮತಾ ಬ್ಯಾನರ್ಜಿ ಅವರಿಗೆ ಮಾತ್ರ ಇದು ಅನ್ವಯ ಆಗಲ್ಲ. ಆಮ್ ಆದ್ಮಿ ಪಕ್ಷ ಪಂಜಾಬ್ ಹಾಗೂ ದೆಹಲಿಯಲ್ಲಿದೆ. ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಸಮಸ್ಯೆಯಿದೆ. ಪ್ರಾದೇಶಿಕ ಪಕ್ಷಗಳು ಒಂದು ಪಕ್ಷಕ್ಕೆ ಬೆಂಬಲ‌ ನೀಡಿ ದೇಶಕ್ಕೆ ಸ್ಥಿರ ಸರ್ಕಾರ ಕೊಡುತ್ತೇವೆ ಎಂಬ ಮನೋಭಾವ ಬೇಕು. ಮುಂದಿನ 120 ದಿನಗಳಲ್ಲಿ ಆಶ್ಚರ್ಯಕರ ಬೆಳವಣಿಗೆಯಾದರೆ ಸಂತೋಷ’ ಎಂದು ವಿಶ್ಲೇಷಿಸಿದರು.

ಜಗದೀಶ್‌ ಶೆಟ್ಟರ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಮರ್ಥ ನಾಯಕತ್ವ ಹೊಂದಿದ್ದ ಜಗದೀಶ್ ಶೆಟ್ಟರ ಅವರನ್ನು, ಕಾಂಗ್ರೆಸ್‌ಗೆ ಸೇರಿಸಿಕೊಂಡು, ಕನಿಷ್ಠ ಒಂದು ಮಂತ್ರಿ ಸ್ಥಾನ ಕೊಡದೆ ಅವಮಾನ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಂತ ಹಂತವಾಗಿ ನೆಲ ಕಚ್ಚುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT