ಶುಕ್ರವಾರ, ಜೂನ್ 25, 2021
21 °C
ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯಕ್ಕೆ ಹರಡಿದ ಕೊರೊನಾ

ಪರೀಕ್ಷೆಗೆ ಹಿಂದೇಟು, ಸಾರ್ವಜನಿಕವಾಗಿ ಓಡಾಟ

ಜಾನೇಕೆರೆ ಆರ್‌. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಪಟ್ಟಣಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದ್ದು, ಸೋಂಕಿತರ ಸಂಖ್ಯೆ ಪ್ರತಿ ದಿನ ನೂರರ ಗಡಿ ದಾಟುತ್ತಿದೆ. ಜತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಆಗಿದೆ.

2021ರ ಜನವರಿ 1ರಿಂದ ಮೇ 13ರ ವರೆಗೆ ತಾಲ್ಲೂಕಿನಲ್ಲಿ 3,298 ಮಂದಿಗೆ ಸೋಂಕು ದೃಢಪಟ್ಟಿದೆ. 2,046 ಮಂದಿ ಗುಣಮುಖರಾಗಿದ್ದು, 1,224 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 28 ಮಂದಿ ಮೃತಪಟ್ಟಿದ್ದಾರೆ.

ಕಳೆದ ವರ್ಷ ಸೋಂಕಿತರಿಗೆ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ ಸೋಂಕಿತರಿಗೆ ಮನೆಯಲ್ಲೇ ಆರೈಕೆ ಮಾಡಲಾಗುತ್ತಿದೆ. ಬಹುತೇಕ ಸೋಂಕಿತರು ಸಾರ್ವಜನಿಕವಾಗಿ ಅಡ್ಡಾಡುವುದು, ಮದುವೆ ಹಾಗೂ ಶುಭ ಸಮಾರಂಭಗಳು ಮನೆಯಲ್ಲೇ ನಡೆಯುತ್ತಿರುವುದ ರಿಂದ ನಿಯಮ ಪಾಲನೆ ಆಗುತ್ತಿಲ್ಲ. ಇದರಿಂದಲೂ ಸೋಂಕು ಹೆಚ್ಚು ಜನರಿಗೆ ಹರಡುತ್ತಿದೆ.

ಅನಧಿಕೃತ ಖಾಸಗಿ ಕ್ಲಿನಿಕ್‌ ಚಿಕಿತ್ಸೆ ವೈಫಲ್ಯ: ಜ್ವರ, ಕೆಮ್ಮು, ಶೀತ ಕಂಡು ಬಂದಾಗ ಗ್ರಾಮೀಣ ಪ್ರದೇಶದವರು ನೇರವಾಗಿ ಹೆತ್ತೂರು, ಕೊಡ್ಲಿಪೇಟೆ, ಕೆಂಚಮ್ಮನಹೊಸಕೋಟೆ ಮೊದಲಾದ ಕಡೆ ಅನಧಿಕೃತ ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿ ಔಷಧಿ, ಮಾತ್ರೆ ಪಡೆದುಕೊಂಡು ಬರುತ್ತಾರೆ. ಕ್ಲಿನಿಕ್‌ಗಳಿಗೆ ಬರುವಂಥ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡುವುದಿಲ್ಲ. ಚುಚ್ಚುಮದ್ದು, ಔಷಧಿ ಕೊಟ್ಟು ಕಳುಹಿಸುತ್ತಾರೆ.

ಸೋಂಕು ಉಲ್ಬಣಗೊಂಡು ರೋಗ ಗಂಭೀರ ಸ್ಥಿತಿಗೆ ಬಂದಾಗ ಸರ್ಕಾರಿ ಆಸ್ಪತ್ರೆಗೆ ಬಂದು ಕೊವೀಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಅಷ್ಟರೊಳಗೆ ಕೆಲವರು ಮೃತಪಡುತ್ತಿದ್ದಾರೆ. ಶುಕ್ರವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಹತ್ತು ದಿನಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಇವರ ಸಾವಿಗೆ ಗ್ರಾಮೀಣ ಪ್ರದೇಶದಲ್ಲಿ ಇರುವ ಕೆಲವು ಅನಧಿಕೃತ ಕ್ಲಿನಿಕ್‌ಗಳ ವೈದ್ಯರೇ ಹೊಣೆ ಎಂದು ಕುರುಬತ್ತೂರು ಗ್ರಾ.ಪಂ.ಸದಸ್ಯ ಅರ್ಜುನ್‌ ‘ಪ್ರಜಾವಾಣಿ’ ಬಳಿ ದೂರಿದರು.

ನೋಟಿಸ್‌: ಸಂಸದ ಪ್ರಜ್ವಲ್‌ ರೇವಣ್ಣ ಗುರುವಾರ ಪಟ್ಟಣದಲ್ಲಿ ನಡೆಸಿದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲೂ ಈ ವಿಚಾರ ಗಂಭೀರವಾಗಿ ಚರ್ಚೆ ಆಯಿತು. ಕೊರೊನಾದ ಯಾವುದೇ ಲಕ್ಷಣ ಕಂಡು ಬಂದ ವ್ಯಕ್ತಿಗೆ ಕೋವಿಡ್‌ ಪರೀಕ್ಷೆ ಮಾಡಿಸದೆ ಚಿಕಿತ್ಸೆ ನೀಡದರೆ ನೋಟಿಸ್‌ ನೀಡಬೇಕು ಎಂದು ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ. ವೈದ್ಯರಲ್ಲದವರು ಕ್ಲಿನಿಕ್‌ ತೆರೆದು ಚಿಕಿತ್ಸೆ ನೀಡಿದರೂ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದರು.

ಸಾರ್ವಜನಿಕರು ಕೊರೊನಾದ ಬಗ್ಗೆ ಇನ್ನೂ ಜಾಗೃತರಾಗದಿದ್ದರೆ ಅನಾಹುತ ಎದುರಿಸಬೇಕಾಗುತ್ತದೆ. ಆದ್ದರಿಂದ ಶುಭ ಸಮರಂಭಗಳನ್ನು ಸಾಧ್ಯವಾದಷ್ಟು ಮುಂದೂಡಬೇಕು. ಕನಿಷ್ಠ 20 ದಿನ ಒಬ್ಬರನ್ನೊಬ್ಬರು ಸಂಪರ್ಕಿಸದಿದ್ದರೆ ಸೋಂಕಿನ ಸರಪಳಿ ಕಳಚುವುದಕ್ಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಉಪ ವಿಭಾಗಾಧಿಕಾರಿ ಎಂ.ಗಿರೀಶ್ ನಂದನ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.