ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಲೇಟಾಗಿ ಬರಲು ಅತ್ತೆ ಮನೇನಾ? ಜಿಲ್ಲಾಧಿಕಾರಿ ಅಕ್ರಂ ಪಾಷಾ ತರಾಟೆ

ಸಮಯ ಪಾಲಿಸದ ಅಧಿಕಾರಿ-ಸಿಬ್ಬಂದಿಗೆ
Last Updated 12 ಜುಲೈ 2019, 15:41 IST
ಅಕ್ಷರ ಗಾತ್ರ

ಹಾಸನ: ‘ತಡವಾಗಿ ಬರುವುದಕ್ಕೆ ಇದು ಅತ್ತೆ ಮನೆ ಅಂದುಕೊಂಡಿದ್ದೀರಾ? ಏನ್ ಕಚೇರಿ ಇಷ್ಟೊಂದು ಗಲೀಜಾಗಿದೆ. ಅನುಪಯುಕ್ತ ವಸ್ತು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಜನರು ಬಂದ್ರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲ್ಲ ಅಂದ್ರೆ ಏನ್ ಕೆಲಸ ಮಾಡ್ತೀರಿ..’

ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಬೆಳಗ್ಗೆ 10 ಗಂಟೆಗೆ ವಿವಿಧ ಶಾಖೆಗಳಿಗ ಭೇಟಿ ನೀಡಿ, ಯಾರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಯಾರು ವಿಳಂಬ ಮಾಡಿದ್ದಾರೆ ಎಂಬುದನ್ನು ಖುದ್ದು ಪರಿಶೀಲಿಸಿದರು.

‘ಆಧಾರ್‌ ನೋಂದಾಣಿಗೆ ಎಷ್ಟು ಜನ ಬಂದಿದ್ದಾರೆ. ಬೇಕಾದ ಸಮಯಕ್ಕೆ ಬರುವುದಾದರೆ ಮುಂದಿನ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತೀರಿ’ ಎಂದು ಎಚ್ಚರಿಸಿದರು.

ಈ ವೇಳೆ ಕೆಲವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಸಮಯ ಪರಿಪಾಲನೆ ಮಾಡದವರ ವಿರುದ್ಧ ಸಹಜವಾಗಿಯೇ ಆಕ್ರೋಶಗೊಂಡ ಡಿ.ಸಿ, ‘ರಜಾ ದಿನ ಹೊರತು ಪಡಿಸಿ ನಿತ್ಯ 10 ಗಂಟೆಗೆ ಕರ್ತವ್ಯ ಹಾಜರಾಗಬೇಕು. ಇಲ್ಲವಾದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದವರಿಗೆ ಹಾಜರಿ ಕೊಡಬಾರದು. ಕೆಲಸಕ್ಕೆ ಬರಲು ಇಷ್ಟವಿಲ್ಲದವರು ಹೊರಟು ಹೋಗಿ. ಕೆಲಸ ಇಲ್ಲದೆ ತೊಂದರೆ ಪಡುತ್ತಿರುವ ನಿರುದ್ಯೋಗಿಗಳು ಸಾಕಷ್ಟು ಮಂದಿ ಇದ್ದಾರೆ’ ಎಂದು ಏರು ದನಿಯಲ್ಲೇ ತರಾಟೆಗೆ ತೆಗೆದುಕೊಂಡರು.

‘ಡಿ.ಸಿ ಕಚೇರಿ ಆವರಣದಲ್ಲಿ ಹೊರಗಿನವರೂ ಗಂಟೆ ಗಟ್ಟಲೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ನನ್ನ ಇಲಾಖೆಯಲ್ಲಿ ವಿವಿಧ ಕೆಲಸ ಕಾರ್ಯಕ್ಕೆ ಬರುವವರು 1 ಗಂಟೆವರೆಗೆ ವಾಹನ ನಿಲ್ಲಿಸಲು ಅವಕಾಶ ನೀಡಿ. ಇದರ ಮೇಲ್ವಿಚಾರಣೆಗೆ ಒಬ್ಬ ಡಿ.ಗ್ರೂಪ್ ನೌಕರನನ್ನು ನೇಮಿಸಿ’ ಎಂದು ಪಾಷಾ ಹೇಳಿದರು.

ಅಕ್ರಂ ಪಾಷಾ ಅವರು ಡಿ.ಸಿಯಾಗಿ ಬಂದ ನಂತರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಗ್ರಾಮ ವಾಸ್ತವ್ಯ, ಪೌತಿ ಮತ್ತು ಪೋಡಿ ಆಂದೋಲನ, ನಿರಾಶ್ರಿತರ ಕೇಂದ್ರ ಹಾಗೂ ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ಸೇರಿದಂತೆ ಜನಸ್ಮೇಹಿ ಆಡಳಿತಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT