ಬುಧವಾರ, ಮೇ 18, 2022
27 °C
ಮಾದರಿ ನೀತಿ ಸಂಹಿತೆ ಜಾರಿ: ಹೆಚ್ಚುವರಿ ಜಿಲ್ಲಾಧಿಕಾರಿ

ಪರಿಷತ್ ಚುನಾವಣೆ: 16ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ; 257 ಮತಗಟ್ಟೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆ ಯುವ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಡಿ.16ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯೂ ಆದ ಸಹಾಯಕ ಚುನಾವಣಾಧಿಕಾರಿ ಕವಿತಾ ರಾಜಾರಾಂ ತಿಳಿಸಿದರು.

ನ.16ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ 23ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ. 24ರಂದು ನಾಮಪತ್ರ ಪರಿಶೀಲನೆ, 26ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಡಿ.10ರಂದು  ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. 14ರಂದು ಮತಗಳ ಎಣಿಕೆ ನಡೆಯಲಿದ್ದು, 16ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೋಕಸಭೆ, ರಾಜ್ಯಸಭೆ, ವಿಧಾನ ಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಮತ ದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ಮುಗಿದ ತಕ್ಷಣ ಅರ್ಹ ಮತ ದಾರರ ಅಂತಿಮ ವಿವರಗಳನ್ನು ಸಲ್ಲಿಸಲಾಗುವುದು.  ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳಿಗೂ ಅನ್ವಯವಾಗುತ್ತದೆ ಎಂದರು.

ಜಿಲ್ಲೆಯ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಕಚೇರಿಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗುವುದು. ಈ ಬಾರಿ ಒಟ್ಟು 257 ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸದಸ್ಯರು ಸೇರಿ 3590 ಮತದಾರರು ಇದ್ದಾರೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯಗೊಂಡಿರುವುದರಿಂದ ಮತ ಚಲಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮ ಪತ್ರಗಳನ್ನು ಕಚೇರಿಯಿಂದ ಪಡೆ ಯಬಹು ದಾಗಿದೆ. ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿ ಮಾಡಲು ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿ ಕಣ್ಗಾವಲು, ವಿಚಕ್ಷಣಾ ದಳ ನೇಮಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್ ವರಿ ಷ್ಠಾಧಿಕಾರಿ ಬಿ.ಎನ್.ನಂದಿನಿ ಮಾತನಾಡಿ, ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ನಿಯಮಿತವಾಗಿ ಸಾರ್ವಜನಿಕರು, ಜನಪ್ರತಿನಿಧಿಗಳು ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾ ಗಿದೆ. ಮತಗಟ್ಟೆಗಳನ್ನು ಪರಿವೀಕ್ಷಣೆ ಮಾಡಿದ ನಂತರ ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳಾಗಿ ವಿಭಾಗ ಮಾಡಿ, ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾ ಟಕ್ಕೆ ಸಂಬಂಧಿಸಿದಂತೆ ಈ ವರ್ಷ 800 ಪ್ರಕರಣ ದಾಖಲಿಸಲಾಗಿದೆ. ವೈಯಕ್ತಿಕವಾಗಿ 4 ಲೀಟರ್ ಮದ್ಯ ಇಟ್ಟುಕೊಳ್ಳಲು ಅವಕಾಶ ಇದೆ. ಅಕ್ರಮವಾಗಿ ಮದ್ಯ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ. ಅಬಕಾರಿ ಇಲಾಖೆಯೂ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಬಾರ್, ರೆಸ್ಟೋರೆಂಟ್‌ಗಳ ಸಂಖ್ಯೆ ಹೆಚ್ಚಿರುವ ಕಾರಣ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಈ ವಿಷಯವನ್ನು ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು