ಹಾಸನ: ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರವೇ ನೇರವಾಗಿ ವೇತನವನ್ನು ಪಾವತಿಸಬೇಕು ಎಂದು ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಅಕ್ಷಯ್ ಗೌಡ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ನಮಗೆ ಉದ್ಯೋಗ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದರು.
ವೇತನ ಪಾವತಿಗೆ ಸರ್ಕಾರ ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಇದರಿಂದ ನಮಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನಮಗೆ ದೊರೆಯುತ್ತಿಲ್ಲ. ಸರ್ಕಾರವೇ ನೇರವಾಗಿ ನಮಗೆ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು .
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್ ಸಂಘ ಸೇರಿ ಫೆ.6 ರಿಂದ 10 ರವರೆಗೆ ಐದು ದಿನ ಮುಷ್ಕರ ಕರೆ ನೀಡಿತ್ತು. ಹೋರಾಟ ಯಶಸ್ವಿಯಾಗಿದ್ದು, ಸರ್ಕಾರದಿಂದ ಬಿಎಂಎಸ್ (ಭಾರತೀಯ ಮುಜದೂರ್ ಸಂಘದ ಸಂಯೋಜಿತ) ಹಿರಿಯರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಫೆ.9ರಂದು ಸಭೆ ಕರೆದು, ಶೇ 15ರಷ್ಟು ವೇತನ ಹೆಚ್ಚಳ ಹಾಗೂ 60 ವರ್ಷದವರೆಗಿನ ಸೇವಾ ಭದ್ರತೆ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಲಿಖಿತ ರೂಪದ ಆದೇಶದಲ್ಲಿ ಒಳಗುತ್ತಿಗೆ ನೌಕರರಿಗೆ ಮಾತ್ರ ಶೇ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಹೊರಗುತ್ತಿಗೆ ನೌಕರರನ್ನು ಕೈ ಬಿಟ್ಟಿದ್ದು, ಮಾ.6 ರಂದು ರಾಜ್ಯಾದ್ಯಂತ ಮುಷ್ಕರ ಕರೆ ನೀಡಲಾಗಿತ್ತು. ಅದರಂತೆ ಪ್ರತಿ ಜಿಲ್ಲಾ ಕೇಂದ್ರಗಳಿಂದ ಸ್ಥಳೀಯ ಆಡಳಿತ ವೈದ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಪರಿಸ್ಥಿತಿ ಹೀಗಿರುವಾಗ ಪ್ರತಿಭಟನೆ ಹತ್ತಿಕ್ಕಲು ಏಜೆನ್ಸಿಗಳು ಕೆಲಸದಿಂದ ವಜಾ ಮಾಡುವ ಬೆದರಿಕೆ ಹಾಕುತ್ತಿವೆ. ಮಾತೃ ಸ್ಥಾನದಲ್ಲಿರುವ ಸರ್ಕಾರವೇ ನೌಕರರ ಅಹವಾಲುಗಳನ್ನು ಆಲಿಸದಿದ್ದರೆ ಯಾರನ್ನು ಕೇಳುವುದು ಎಂದು ಪ್ರಶ್ನಿಸಿದರು.
ಉಮೇಶ್, ರಂಗಸ್ವಾಮಿ, ಕೀರ್ತಿ, ಪ್ರಸಾದ್, ರವಿ, ಶೋಭಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.