ಬುಧವಾರ, ಮಾರ್ಚ್ 29, 2023
32 °C
ಇಷ್ಟಾರ್ಥ ಸಿದ್ಧಿಗೆ ಹಾಸನಾಂಬೆ ತಾಯಿಗೆ ಹತ್ತಾರು ಪತ್ರ; ನೋವು, ಸಂಕಷ್ಟ, ಸಮಸ್ಯೆ ಬಗೆಹರಿಸುವಂತೆ ಪ್ರಾರ್ಥನೆ

ಹೆಣ್ಮಕ್ಕಳಿಗೆ ಮದ್ವೆ ಮಾಡಿಸು, ಗಂಡನ ಕುಡಿತ ಬಿಡಿಸು: ಹಾಸನಾಂಬೆಗೆ ಭಕ್ತರ ನಿವೇದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಇಷ್ಟಪಟ್ಟ ಹುಡುಗನ ಜತೆ ಮದುವೆ ಮಾಡಿಸು, ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರು ಬದಲಾಗುವಂತೆ ಮಾಡು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲೇಶ್‌ ಗೌಡ ಅವರು ಗೆಲ್ಲುವಂತೆ ಅನುಗ್ರಹಿಸು..

ಅಧಿದೇವತೆ ಹಾಸನಾಂಬೆಗೆ ಭಕ್ತರ ನಿವೇದನೆಯಿದು. ಸೋಮವಾರ ಸಿದ್ದೇಶ್ವರ ಸ್ವಾಮಿ ದೇವಾಲಯ ಪ್ರಾಂಗಣದಲ್ಲಿ ನಡೆದ ಹುಂಡಿ ಕಾಣಿಕೆ ಎಣಿಕೆ ವೇಳೆ ತಾಯಿ ಹಾಸನಾಂಬ ದೇವಿಗೆ ಮೊರೆಯಿಟ್ಟ ಹಲವು ಚೀಟಿಗಳು ಲಭ್ಯವಾದವು.

ಯುವಕರು, ವಿದ್ಯಾರ್ಥಿಗಳು, ಭಕ್ತರು, ಮಹಿಳೆಯರು ಹಲವು ರೀತಿಯ ಬೇಡಿಕೆ ಹೊತ್ತ ಚೀಟಿ, ಪತ್ರಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ. ತಮ್ಮ ನೋವು, ಸಂಕಷ್ಟ, ಸಮಸ್ಯೆಗಳನ್ನು ಬಗೆಹರಿಸು ತಾಯಿ ಎಂದು ಮೊರೆ ಇಟ್ಟಿದ್ದಾರೆ.

ಒಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಬರುವಂತೆ ಮಾಡು ಎಂದು ಕೇಳಿದ್ದರೆ, ಮತ್ತೊಬ್ಬರು ನನ್ನ ದೊಡ್ಡ ಮಗನಿಗೆ ಮದುವೆ ಆಗುವಂತೆ ಮಾಡು ಎಂದು ಬೇಡಿದ್ದಾರೆ.

ಪತ್ರದಲ್ಲಿರುವ ಬೇಡಿಕೆ ತರಹೇವಾರಿ ಇವೆ. ‘ಕೊರೊನಾ ಸೋಂಕು ತೊಲಗಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡು. ನಮ್ಮ ಬೀದಿಯಲ್ಲಿ ಗುಂಡಿ ಬಿದ್ದಿರುವ ರಸ್ತೆ ಸರಿಪಡಿಸು. ಒಂದು ವರ್ಷದೊಳಗೆ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸು ಎಂದು ಕೆಲವರು ಕೋರಿದ್ದಾರೆ. ಯುವತಿಯೊಬ್ಬಳು ತಾನು ಪ್ರೀತಿಸಿದ ಹುಡುಗನ ಜತೆ ಮದುವೆ ಮಾಡಿಸು ಎಂದು ರಕ್ತದಲ್ಲಿ ಪತ್ರ ಬರೆದು ಪ್ರಾರ್ಥಿಸಿದ್ದಾಳೆ.

ಹೀಗೆ ನೂರಾರು ಪತ್ರಗಳು ಕಾಣಿಸಿಕೊಂಡಿದ್ದು, ಹುಂಡಿ ಹಣ ಎಣಿಸುತ್ತಿದ್ದ ಕಂದಾಯ, ಪೊಲೀಸ್‌ ಸಿಬ್ಬಂದಿ ಚೀಟಿಗಳನ್ನು ಓದಿ ಪಕ್ಕಕ್ಕೆ ಇಟ್ಟರು.


ಹಾಸನಾಂಬೆಗೆ ಭಕ್ತರು ಬರೆದಿರುವ ಕೋರಿಕೆ ಪತ್ರ

‘ಪತಿಯ ಕುಡಿತದ ಚಟ ದೂರವಾಗಲಿ. ಗಂಡು ಮಗು ಕರುಣಿಸು, ಬೇಡಿದ್ದನ್ನು ಈಡೇರಿಸಿದರೆ ₹ 5 ಸಾವಿರ ಕೊಡುತ್ತೇನೆ. ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಿದ್ದು, ಅವರಿಗೆ ಶಿಕ್ಷೆ ಕೊಡು. ವಸೂಲಿ ಹಾಗೂ ದಂಧೆಕೋರರಿಂದ ಕನ್ನಡ ಸಾಹಿತ್ಯ ಪರಿಷತ್‌ ಮುಕ್ತವಾಗಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯ ಪವಿತ್ರ ಭವನವಾಗಲಿ’ ಎಂದು ನಿವೇದಿಸಿಕೊಂಡಿರುವ ಸ್ವಾರಸ್ಯಕರ ಪತ್ರಗಳು ದೊರೆತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು