ಭಾನುವಾರ, ನವೆಂಬರ್ 29, 2020
25 °C
ವ್ಯಾಪಾರವಿಲ್ಲದೆ ಜೀವನವೇ ಕಷ್ಟ: ಸಂಕಟ ಹೇಳಿಕೊಂಡ ತರಕಾರಿ ವ್ಯಾಪಾರಿಗಳು

ಮಸೀದಿ ಬಳಿ ವ್ಯಾಪಾರಕ್ಕೆ ಅವಕಾಶ ಕೊಡಿ

ಎಂ.ಪಿ. ಹರೀಶ್ Updated:

ಅಕ್ಷರ ಗಾತ್ರ : | |

Prajavani

ಆಲೂರು: ಸೆಸ್ಕ್ ವೃತ್ತದ ಬಳಿ ಇರುವ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರವೇ ಇಲ್ಲದ್ದರಿಂದ ವ್ಯಾಪಾರಿಗಳು ಸಾಲದ ಸುಳಿಗೆ ಸಿಲುಕಿ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.

ಪಟ್ಟಣದಿಂದ ಎರಡು ಕಿ. ಮೀ. ದೂರವಿರುವ ಮಾರುಕಟ್ಟೆಗೆ ಜನರು ಬರುತ್ತಿಲ್ಲ. ದಸರಾ ಹಬ್ಬಕ್ಕೆ ಸಾಲ ಮಾಡಿ ವ್ಯಾಪಾರಕ್ಕೆಂದು ತಂದಿದ್ದ ಸಾವಿರಾರು ರೂಪಾಯಿ ತರಕಾರಿ ಉಳಿದು, ಕೊಳೆತು ನಷ್ಟವಾಯಿತು. ದಿನಕ್ಕೆ ಐವತ್ತು ರೂಪಾಯಿ ವ್ಯಾಪಾರ ಆಗುವುದಿಲ್ಲ. ವರ್ಷಕ್ಕೊಂದು ಹಬ್ಬದಲ್ಲಿ ಮನೆ ಮಕ್ಕಳಿಗೆ ಒಂದು ಹೊತ್ತಿನ ಊಟ ಕೊಡಲು ಆಗಲಿಲ್ಲ. ಪಟ್ಟಣ ಪಂಚಾಯಿತಿಯವರು ನಮ್ಮ ಅನ್ನ ಕಿತ್ತುಕೊಂಡಿದ್ದಾರೆ ಎಂದು ಹಲವು ವ್ಯಾಪಾರಿಗಳು ತಮಗಾದ ಸಂಕಟ ಹೇಳಿಕೊಂಡರು.

‘ಗ್ರಾಹಕರು ಇಲ್ಲದೇ ತರಕಾರಿಗಳು, ಹೂವುಗಳು  ಬಾಡಿ ಹೋಗುತ್ತಿವೆ. ನಮಗೆ ಪಟ್ಟಣದಲ್ಲಿರುವ ಮಸೀದಿ ಎದುರಿನಲ್ಲಿರುವ ವಿಶಾಲ ಜಾಗದಲ್ಲಿ ದಿನವಹಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಎದುರು ಕುಟುಂಬದೊಂದಿಗೆ ಉಪವಾಸ ಕೂರುತ್ತೇವೆ’ ಎಂದು ವ್ಯಾಪಾರಿಗಳಾದ ಲಲಿತಮ್ಮ, ರಾಜಮ್ಮ, ನಂಜಮ್ಮ ಹೇಳಿದರು.

ಆರಂಭದಲ್ಲಿ ದಿನಸಿ ಪದಾರ್ಥಗಳು ಹೊರತುಪಡಿಸಿದರೆ ಇನ್ನುಳಿದ ಹಣ್ಣು, ಹೂವು, ಎಲೆ, ಅಡಿಕೆ ಇನ್ನಿತರ ವಸ್ತುಗಳನ್ನು ಬದಲಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಪಟ್ಟಣದ ಕೆಲ ದಿನಸಿ ಅಂಗಡಿಗಳಲ್ಲಿ ಎಲ್ಲಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಬರುವವರೇ ಇಲ್ಲ. ಮೂಲ ಸೌಕರ್ಯಗಳಿಲ್ಲ ಈ ಮಾರುಕಟ್ಟೆಯಲ್ಲಿ ನರಕಯಾತನೆ ಅನುಭವಿಸುವಂತಾಗಿದೆ. ಸಂಜೆಯಾದರೆ ಸೊಳ್ಳೆಗಳ ಕಾಟ, ಬೀದಿದೀಪವಿಲ್ಲದೇ ಭಯ ಉಂಟಾಗುತ್ತದೆ ಎಂದು ಮಹಿಳಾ ವ್ಯಾಪಾರಿಗಳು ಹೇಳಿದರು.

‘ಇಲ್ಲಿ ಸರಿಯಾಗಿ ಕಸವನ್ನೂ ಸಹ ತೆಗೆಯುವುದಿಲ್ಲ. ಸೊಳ್ಳೆಗಳ ಕಾಟ, ಶೌಚಾಲಯಕ್ಕೆ, ಕುಡಿಯುವ ನೀರಿಗೆ ಎಲ್ಲಿಗೆ ಹೋಗಬೇಕು. ವಾರಕ್ಕೊಮ್ಮೆ ₹ 50  ತೆರಿಗೆ ಪಡೆಯುತ್ತಾರೆ. ರಾತ್ರಿ ವೇಳೆ ಏನಾದರೂ ಅವಘಡ ಸಂಭವಿಸಿದರೆ ನಮಗ್ಯಾರು ಗತಿ’ ಎಂದು  ವ್ಯಾಪಾರಿ ಶಾಹಿನ್ ತಮ್ಮ ನೋವು ಹೇಳಿಕೊಂಡರು.

‘ಪಟ್ಟಣ ಪಂಚಾಯಿತಿಯವರು ನಮ್ಮ ಹೊಟ್ಟೆ ಮೇಲೆ ಹೊಡೆದು ಜೀವನಕ್ಕೆ ತೊಂದರೆ ಮಾಡಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ದೈನಂದಿನ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ತರಕಾರಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

‘ಪಟ್ಟಣದ ಹೃದಯ ಭಾಗದಲ್ಲಿ ಆಗುತ್ತಿದ್ದ ತೊಂದರೆ ನಿವಾರಣೆಗೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು. ಆದರೆ ಈಗ ವ್ಯಾಪಾರಿಗಳು ವ್ಯಾಪಾರವಿಲ್ಲದೆ ತೊಂದರೆಗೊಳಗಾಗಿದ್ದಾರೆ. ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಶಾಸಕರು, ತಹಶೀಲ್ದಾರರು, ಪ. ಪಂ. ಸದಸ್ಯರು, ವ್ಯಾಪಾರಿಗಳು ಸೇರಿ ಸದ್ಯದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ದಿನವಹಿ ಮಾರುಕಟ್ಟೆ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.