ಭಾನುವಾರ, ಜೂನ್ 26, 2022
21 °C

ಲಾಕ್‍ಡೌನ್ ತೆರವು‍ ಕುರಿತು 7ರ ಬಳಿಕ ತೀರ್ಮಾನ: ಸಚಿವ ಕೆ.ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿಟಿ ಪ್ರಕರಣ ಇಳಿಮುಖವಾಗುತ್ತಿದ್ದು, ಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಜೂನ್‌ 7ರ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ವಾರ ಶೇಕಡಾ 33 ರಷ್ಟಿದ್ದ ಪಾಸಿಟಿವಿಟಿ ದರ ಪ್ರಸ್ತುತ ಶೇಕಡಾ 23.21ಕ್ಕೆ ಕುಸಿದಿದೆ. ಜೂನ್‌ 7ರ ರೊಳಗೆ ಜಿಲ್ಲೆಯಲ್ಲಿ ಪಾಸಿಟಿವ್ ದರ ಶೇಕಡಾ 10 ಕ್ಕಿಂತ ಕಡಿಮೆಯಾಗುವ ನಿರೀಕ್ಷೆ ಇದ್ದು, ತಜ್ಞರ ವರದಿ ಆಧರಿಸಿ ಲಾಕ್‍ಡೌನ್ ಮುಂದುವರೆಸಬೇಕೇ, ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈದ್ಯರ ನಡೆ ಹಳ್ಳಿಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 75 ವೈದ್ಯರ ತಂಡವು ಈಗಾಗಲೇ 21,641 ಹಳ್ಳಿಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ 1,293 ಸೋಂಕಿತರನ್ನು ಪತ್ತೆ ಹಚ್ಚಿದೆ. ಸೋಂಕಿತರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರದೊಳಗೆ ಜಿಲ್ಲೆಯ ಎಲ್ಲಾ ಹಳ್ಳಿಗಳ ಭೇಟಿ ಪೂರ್ಣಗೊಳ್ಳಲಿದೆ. ನಂತರ ಇದೇ ತಂಡ ಮತ್ತೊಮ್ಮೆ ಎಲ್ಲಾ ಗ್ರಾಮಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೂ 9 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಈ ಪೈಕಿ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿತ ಯಾವುದೇ ರೋಗಿಯನ್ನು ದಾಖಲಿಸಿಲ್ಲ. ಇನ್ನು ಮುಂದೆ ಹಿಮ್ಸ್‌ನಲ್ಲೇ ಚಿಕಿತ್ಸೆ ನೀಡಲು 20 ಹಾಸಿಗೆ ಮೀಸಲಿಡಲಾಗಿದೆ ಎಂದರು.

ದೇಶದಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಕಡಿಮೆ ಆಗಿರುವುದರಿಂದ ಕೊರತೆ ಉಂಟಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನೀಡುತ್ತಿರುವ ಲಸಿಕೆಯನ್ನು ಜನಸಂಖ್ಯೆ ಅನುಸಾರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾದರೆ ಸಮಸ್ಯೆ ಬಗೆಹರಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕರಾದ ಪ್ರೀತಂ ಜೆ. ಗೌಡ, ಕೆ.ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು